Advertisement

ಈ ಆತ್ಮಕ್ಕೆ ಹೃದಯವಿಲ್ಲ ಶಿವಾ!

05:37 PM Apr 06, 2018 | |

ನಿನ್ನ ಉದ್ದೇಶ ನಾಶ ಮಾಡೋದು. ನನ್ನ ಉದ್ದೇಶ ಕಾಪಾಡೋದು. ಯಾವತ್ತೂ ಗೆಲ್ಲೋದು ದೈವ ಶಕ್ತಿನೇ… ಹೀಗಂತ, ಫಾದರ್‌ ಸೆಬಾಸ್ಟಿಯನ್‌, ಚೀರಾಡಿ, ಹೋರಾಡಿ ಆ ಆತ್ಮದೊಂದಿಗೆ ಕಾದಾಟಕ್ಕಿಳಿಯುವ ಹೊತ್ತಿಗೆ, ಆ ಜಯಮಹಲ್‌ನಲ್ಲಿ ಇಬ್ಬರು ನಿಗೂಢವಾಗಿ ಸಾವನ್ನಪ್ಪಿರುತ್ತಾರೆ. ಆ ಮಹಲ್‌ನಲ್ಲಿ ಇನ್ನೂ ಏನೇನೋ ಸಮಸ್ಯೆಗಳು ಸುತ್ತಿಕೊಂಡಿರುತ್ತವೆ. ಕೊನೆಗೆ ದೈವಶಕ್ತಿಯೇ ಆತ್ಮದ ವಿರುದ್ಧ ಗೆಲ್ಲುವ ಮೂಲಕ ಅದಕ್ಕೊಂದು ಅಂತ್ಯ ಹಾಡುತ್ತೆ. ಅಲ್ಲಿಗೆ ಆ ಆತ್ಮದ ಕಟ್ಟುಕಥೆಯೂ ಕೊನೆಗಾಣುತ್ತದೆ.

Advertisement

ಸಾಮಾನ್ಯವಾಗಿ ಹಾರರ್‌ ಚಿತ್ರಗಳಲ್ಲಿ ಆತ್ಮವನ್ನು ಓಡಿಸುವ ಮೂಲಕ ಆ ಕಥೆಗೊಂದು ಇತಿಶ್ರೀ ಹಾಡಲಾಗುತ್ತದೆ. ಎಲ್ಲಾ ದೆವ್ವದ ಕಥೆಗಳ ಹಿಂದಿನ ಶಕ್ತಿಯೆಂದರೆ, ಅದು ಆತ್ಮದ ಹಾರಾಟ ಮತ್ತು ಚೀರಾಟ. ಅದು “ಜಯಮಹಲ್‌’ ಚಿತ್ರದಲ್ಲೂ ಮುಂದುವರೆದಿದೆ. ಇಲ್ಲೂ ಆತ್ಮದ ಕಥೆಯೇ ಜೀವಾಳ. ಹಾಗಂತ, ಆ ಆತ್ಮ ಯಾತಕ್ಕಾಗಿ ಅಷ್ಟೆಲ್ಲಾ ತೊಂದರೆ ಕೊಡುತ್ತೆ ಎಂಬುದಕ್ಕೆ ಬಲವಾದ ಕಾರಣವೇ ಇಲ್ಲ.

ಆ ಆತ್ಮದ ಕಥೆಗೆ ಇನ್ನಷ್ಟು ಸೇಡಿನ ಅಂಶಗಳಿದ್ದಿದ್ದರೆ, ಆತ್ಮ ಹಾರಾಡಿ, ಚೀರಾಡಿದ್ದಕ್ಕೂ ಒಂದು ಅರ್ಥ ಸಿಗುತ್ತಿತ್ತು. ಆದರೆ, ಇಲ್ಲಿ ಆ ಆತ್ಮ ಅಷ್ಟೊಂದು ಕಾಟ ಕೊಡೋಕೆ ಬಲವಾದ ಕಾರಣವೇ ಇಲ್ಲ. ಒಂದು ಸಣ್ಣ ಎಳೆಯನ್ನು ಇಟ್ಟುಕೊಂಡು ನೋಡುಗರನ್ನು ಬೆಚ್ಚಿಬೀಳಿಸುವ ಪ್ರಯತ್ನ ಮಾಡಲಾಗಿದೆಯಷ್ಟೇ. ಆದರೆ, ಚಿತ್ರದಲ್ಲಿ ಬೆಚ್ಚಿಬೀಳಿಸುವ ಯಾವುದೇ ಪ್ರಯತ್ನ ಯಶಸ್ವಿಯಾಗಿಲ್ಲ ಅಂದರೆ, ಆತ್ಮವನ್ನು ಹಿಡಿದು ತಂದವರು ಬೇಸರಿಸಿಕೊಳ್ಳಬಾರದು.

ಯಾಕೆಂದರೆ, ಇಲ್ಲಿ ಕಥೆಯನ್ನು ಇನ್ನಷ್ಟು ಬಿಗಿಗೊಳಿಸುವ ಅಗತ್ಯವಿತ್ತು. ಕಥೆಯ ಎಳೆ ಚೆನ್ನಾಗಿದೆ. ಆದರೆ, ಅದರ ನಿರೂಪಣೆಗೆ ಇನ್ನಷ್ಟು ಒತ್ತು ಕೊಡಬೇಕಿತ್ತು. ಒಂದು ಆತ್ಮದ ಕಥೆಯಲ್ಲಿ ಮುಖ್ಯವಾಗಿ ಇರಬೇಕಾಗಿದ್ದು, ಬೆಚ್ಚಿಬೀಳಿಸುವ ಅಂಶಗಳು. ಅದಿಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ. ಎಲ್ಲೋ ಒಂದು ಕಡೆ ಸಿನಿಮಾ ಸಾಗುವ ರೀತಿಯನ್ನು ನೋಡಿದರೆ, ಇದು ಹಾರರ್‌ ಸಿನಿಮಾವೋ ಅಥವಾ ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರವೋ ಎನ್ನುವಷ್ಟರ ಮಟ್ಟಿಗೆ ಅನುಮಾನ ಮೂಡಿದರೆ ಅಚ್ಚರಿ ಇಲ್ಲ.

ಹಾರರ್‌ ಚಿತ್ರದಲ್ಲಿ ರಾತ್ರಿ ಇದ್ದರಷ್ಟೇ ಆತ್ಮದ ಕೂಗಾಟಕ್ಕೊಂದು ಅರ್ಥ. ಅದನ್ನಿಲ್ಲಿ ತುಂಬಾ ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಆದರೆ, ಚಿತ್ರ ಗಂಭೀರವಾಗಿ ಸಾಗುವ ಹೊತ್ತಲ್ಲೇ ಹಾಡೊಂದು ಕಾಣಿಸಿಕೊಂಡು ನೋಡುಗನ ತಾಳ್ಮೆ ಪರೀಕ್ಷಿಸುತ್ತದೆ. ಹಾಡು ಮುಗಿದು, ಇನ್ನೇನಾಗುತ್ತೆ ಅಂದುಕೊಳ್ಳುವಷ್ಟರಲ್ಲಿ, ಮಧ್ಯಂತರವೂ ಬಂದು, ಸಣ್ಣದ್ದೊಂದು ತಿರುವಿನ ಸುಳಿವು ಕೊಡುತ್ತೆ. ಆಮೇಲೆ ಏನೆಲ್ಲಾ ಆಗುತ್ತದೆ ಎಂಬುದನ್ನು ಬಲು ಅರ್ಥಪೂರ್ಣವಾಗಿ ನಿರೂಪಿಸಲಾಗಿದೆ.

Advertisement

ಇನ್ನಷ್ಟು ಗಂಭೀರವಾಗಿ ಆತ್ಮದ ಕಥೆಯನ್ನು ವಿವರಿಸಿದ್ದರೆ, ನೋಡುಗರಿಗೆ ಆತ್ಮ ಯಾಕೆ ಹಾಗಾಡುತ್ತೆ ಅನ್ನುವುದಕ್ಕಾದರೂ ಅರ್ಥವಾಗುತ್ತಿತ್ತು. ಆದರೆ, ಒಂದು ಕಲ್ಪನೆ ಕಥೆಯಲ್ಲಿ ರಾಣಿ, ಸಾವು, ನೋವು, ಆತ್ಮ, ಭಯ, ಭ್ರಮೆ, ನಂಬಿಕೆ, ಅಪನಂಬಿಕೆ, ದೆವ್ವ, ದೈವ ಎಲ್ಲವನ್ನೂ ಅರ್ಥೈಯಿಸಲು ಹೊರಟಿರುವ ಪ್ರಯತ್ನ ಸಾರ್ಥಕ. ಇನ್ನಷ್ಟು ಗಟ್ಟಿತನದಿಂದ ಇವೆಲ್ಲವನ್ನೂ ಜೋಡಿಸುವ ಪ್ರಯತ್ನ ಮಾಡಿದ್ದರೆ, ಜಯಮಹಲ್‌ಗೊಂದು ಜೈ ಎನ್ನಬಹುದಿತ್ತು.

ಬ್ರಿಟಿಷರ ಕಾಲದಲ್ಲಿದ್ದ ಮಾತಂಗಿ ಎಂಬ ರಾಣಿಯನ್ನು ಬಿಟ್ಟು, ಆ ಜಯಮಹಲ್‌ನ ಎಲ್ಲರೂ ದೂರದ ದೇಶಕ್ಕೆ ಹೋಗಿಬಿಡುತ್ತಾರೆ. ಆದರೆ, ಆ ರಾಣಿ ಮಾತಂಗಿ, ಅದೇ ಕೊರಗಿನಲ್ಲಿ ಒಬ್ಬಂಟಿಯಾಗಿ, ಅನ್ನ, ನೀರು ಇಲ್ಲದೆ, ದೇಹ ಬಳಲಿ ಬೆಂಡಾಗಿ, ಕೇವಲ ತನ್ನ ದಾಹ ತೀರಿಸಿಕೊಳ್ಳಲು ನೀರಿಗಾಗಿ ಆ ಜಯಮಹಲ್‌ನಲ್ಲಿ ಅಲೆದಾಡಿ ಬಾವಿಯೊಂದಕ್ಕೆ ಬಿದ್ದು ಸಾವನ್ನಪ್ಪುತ್ತಾಳೆ. ಆದರೆ, ಆಕೆಯ ಆಸೆಗಳು ಹಾಗೆಯೇ ಉಳಿದಿರುತ್ತವೆ.

ಅದೆಷ್ಟೋ ವರ್ಷಗಳ ಬಳಿಕ ಪ್ರೊಫೆಸರ್‌ ಒಬ್ಬ ತನ್ನ ಕುಟುಂಬ ಸಮೇತ ವಿದೇಶದಿಂದ ಆ ಜಯಮಹಲ್‌ನಲ್ಲಿ ವಾಸಕ್ಕೆ ಬರುತ್ತಾನೆ. ಮಾತಂಗಿ ಸಾವನ್ನಪ್ಪಿದ್ದರೂ ಆ ಆತ್ಮ ಮಾತ್ರ ಆ ಜಯಮಹಲ್‌ನಲ್ಲಿ ಅಲೆದಾಡುತ್ತಿರುತ್ತೆ. ಅತ್ತ ಆ ಜಯಮಹಲ್‌ ಪ್ರವೇಶಿಸಿದವರನ್ನು ಆತ್ಮ ಹೇಗೆಲ್ಲಾ ಕಾಡುತ್ತದೆ ಮತ್ತು ಭಯಬೀಳಿಸುತ್ತದೆ ಎಂಬ ಕುತೂಹಲವಿದ್ದರೆ ಹಾಗೊಮ್ಮೆ ಜಯಮಹಲ್‌ನ ದರ್ಬಾರ್‌ ನೋಡಿ ಬರಬಹುದು. ಅಶ್ವತ್ಥ್ ನೀನಾಸಂ ಇಲ್ಲಿ ಎಂದಿಗಿಂತಲೂ ಇಷ್ಟವಾಗುತ್ತಾರೆ.

ಮಾತಂಗಿಯ ಆತ್ಮವನ್ನೇ ಆವಾಹನೆ ಮಾಡಿಕೊಂಡು, ಹಾಗೊಮ್ಮೆ ನಾಗವಲ್ಲಿಯನ್ನೂ ನೆನಪಿಸುತ್ತಾರೆ. ಎರಡು ಶೇಡ್‌ ಪಾತ್ರದಲ್ಲೂ ಅಶ್ವತ್ಥ್ ಗಮನಸೆಳೆಯುತ್ತಾರೆ. ಶುಭಾ ಪೂಂಜ ಗೃಹಿಣಿಯಾಗಿ, ಪಾತ್ರವನ್ನು ನೀಟಾಗಿ ನಿರ್ವಹಿಸಿದ್ದಾರೆ. ಫಾದರ್‌ ಸೆಬಾಸ್ಟಿಯನ್‌ ಆಗಿರುವ ಹೃದಯಶಿವ, ನಟರಾಗಿಯೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ. ಉಳಿದಂತೆ ಬರುವ ಪಾತ್ರಗಳ್ಯಾವು ಗಮನಸೆಳೆಯುವುದಿಲ್ಲ. ಆತ್ಮದ ಓಟಕ್ಕೆ ತಕ್ಕಂತೆ ಜುಡಾ ಸ್ಯಾಂಡಿ ಸಂಗೀತವೂ ಸದ್ದು ಮಾಡಿದೆ. ನಾಗಾರ್ಜುನ್‌ ಛಾಯಾಗ್ರಹಣದಲ್ಲಿ ಮಾತಂಗಿಯ ಅರ್ತನಾದದ ಸೊಬಗಿದೆ.

ಚಿತ್ರ: ಜಯಮಹಲ್‌
ನಿರ್ಮಾಣ: ಎಂ.ರೇಣುಕ ಸ್ವರೂಪ್‌
ನಿರ್ದೇಶನ: ಹೃದಯ ಶಿವ
ತಾರಾಗಣ: ಅಶ್ವತ್ಥ್ ನೀನಾಸಂ, ಶುಭಾಪೂಂಜ, ಹೃದಯ ಶಿವ, ಕರಿಸುಬ್ಬು, ಕೌಸಲ್ಯ ಮುಂತಾದವರು


* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next