Advertisement
ಸಾಮಾನ್ಯವಾಗಿ, ದೇಶದ ಪ್ರಧಾನಿಗಳು ಬಂದರೆ ಅವರ ಕಾರಿನ ಹಿಂದೆ ಮುಂದೆ ಭದ್ರತಾ ಸಿಬ್ಬಂದಿ ಇರುತ್ತಾರೆ. ಆದರೆ, ಈ ಆನೆ ರಸ್ತೆಗೆ ಇಳಿದರೆ, ಪ್ರಧಾನಿಗಳಿಗೆ ಒದಗಿಸುವ ಝಡ್ ಪ್ಲಸ್ ಭದ್ರೆತೆಯನ್ನೇ ಇದಕ್ಕೂ ಒದಗಿಸುತ್ತಾರೆ. ಅಷ್ಟೇ ಅಲ್ಲ, ಆನೆಯ ಹಿಂದೆ ಮುಂದೆ ಕಾವಲು ಕಾಯಲು, ಒಂದಷ್ಟು ಮಿಲಟರಿ ಸಿಬ್ಬಂದಿ ಬೇರೆ ಇರುತ್ತಾರೆ. ಇದರ ಹೆಸರು ನಾಡುಂಗಮುವಾ ರಾಜ ಅಂತ. ವಯಸ್ಸು 65. ಎತ್ತರ 10.5 ಅಡಿ. ಏಷ್ಯಾದಲ್ಲೇ ಅತಿ ಹೆಚ್ಚು ಎತ್ತರದ ಆನೆ ಅನೋ ಅನ್ನೋ ಹೆಗ್ಗಳಿಕೆ ಇದಕ್ಕಿದೆ. ಬಹಳ ಹಿರಿತನದ ಈ ಆನೆ ಇರುವುದು ಶ್ರೀಲಂಕಾದಲ್ಲಿ. ಅಲ್ಲಿ ನಡೆಯುವ ಪ್ರಮುಖ ಉತ್ಸವಗಳಲ್ಲಿ ಈ ಆನೆಯೇ ಮುಖ್ಯ ಆಕರ್ಷಣೆ. ಆನೆ ಸಾಗುವ ಮಾರ್ಗದುದ್ದಕ್ಕೂ ರಸ್ತೆಯನ್ನು ಸುಗಮಗೊಳಿಸಲು ಇನ್ನೊಂದು ಸೇನಾ ತುಕಡಿಯನ್ನೂ ನಿಯೋಜಿಸಲಾಗಿದೆ.
ಶ್ರೀಲಂಕಾದ ಪವಿತ್ರ ಬೌದ್ಧ ಉತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳ ಪೈಕಿ ನಾಡುಂಗಮುವಾ ರಾಜ ಆನೆಯೂ ಒಂದಾದ್ದರಿಂದ ಈ ಆನೆಯು ದೇಶದ ಆಸ್ತಿ ಎಂದೇ ಪರಿಗಣಿಸಲಾಗಿದೆ. ವಿಶೇಷ ಎಂದರೆ, ಈ ಉತ್ಸವದ ಸಂದರ್ಭದಲ್ಲಿ ನಾಡುಂಗಮುವಾ ಆನೆಯನ್ನು ತಂಪಾಗಿರುವಾಗ ರಾತ್ರಿಯಲ್ಲಿ ಸುಮಾರು 90 ಕಿ.ಮೀ.ಯಷ್ಟು ದೂರ ನಡೆದುಕೊಂಡೇ ಕ್ಯಾಂಡಿ ನಗರಕ್ಕೆ ತೆರಳುತ್ತದೆಯಂತೆ. ಹೀಗೆ, ಪ್ರತಿ ದಿನ ಸುಮಾರು 25 ರಿಂದ 30 ಕಿ.ಮೀ.ಯಷ್ಟು ನಡೆಯುತ್ತದೆ. ಸಾಮಾನ್ಯವಾಗಿ, ಆನೆ 3,4 ಟನ್ ಇರುತ್ತದೆ. ಆದರೆ, ಈ ಆನೆ ಹೆಚ್ಚು ಕಮ್ಮಿ 5 ಟನ್‌ಗೂ ಹೆಚ್ಚು ಭಾರ ಇದೆಯಂತೆ. ಅಂತೆಯೇ, ಪ್ರತಿದಿನ ಈ ಆನೆಯ ಆಹಾರ 80ರಿಂದ 100 ಕೆ.ಜಿ, ಜೊತೆಗೆ ಕುಡಿಯಲು 150 ಲೀಟರ್ ನೀರು ಬೇಕು. ವಿಜ್ಞಾನಿಗಳ ಪ್ರಕಾರ ರಾಜಾಗೆ ತನ್ನ ತೂಕದ ಶೇ. 5ರಷ್ಟು ಆಹಾರ ಬೇಕಾಗುತ್ತದಂತೆ. ದಿನದ 24 ಗಂಟೆಗಳಲ್ಲಿ 15ರಿಂದ 18 ಗಂಟೆಗಳ ಕಾಲ ಬರೀ ಆಹಾರ ತಿನ್ನುತ್ತಲೇ ಕಾಲ ಕಲೆಯುವ ರಾಜ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಭದ್ರತೆ ಏಕೆ?
ರಾಜನಿಗೆ ಈ ರೀತಿಯ ಝಡ್‌ಪ್ಲಸ್ ಭದ್ರತೆ ಏಕೆ ಬಂತು? ಅನ್ನೋದರ ಹಿಂದೆ ಕಥೆಯೇ ಇದೆ. 2015ರಲ್ಲಿ, ರಾಜಾ ಆನೆ ಇದೇ ರೀತಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ, ಬೈಕ್ ಸವಾರನೊಬ್ಬ ಬಂದು ನೇರವಾಗಿ ರಾಜನ ಕಾಲಿಗೆ ಗುದ್ದಿದನಂತೆ. ಆಗ ಒಂದಷ್ಟು ತಿಂಗಳುಗಳು ಕಾಲ ರಾಜ ನೋವಿನಿಂದ ಒದ್ದಾಡಿದ್ದಾನೆ. ಈ ವಿಚಾರ ಎಲ್ಲಕಡೆ ಸುದ್ದಿಯಾದ ನಂತರವೇ, ರಾಜಾ ಆನೆಯೇ ಏಷ್ಯಾದಲ್ಲಿ ಇರುವ ಆನೆಗಳ ಪೈಕಿ ಅತಿ ಹಿರಿಯ ಆನೆ ಅನ್ನೋ ಸತ್ಯ ತಿಳಿದದ್ದು. ಆ ನಂತರ ಸರ್ಕಾರ ರಾಜನಿಗೆ ಭದ್ರತೆ ಒದಗಿಸಿದೆ.
Related Articles
ರಾಜಾ ಆನೆ ಹುಟ್ಟಿದ್ದು, ಬೆಳದದ್ದು ಎಲ್ಲವೂ ಮೈಸೂರಲ್ಲೇ. 1953 ರಲ್ಲಿ ಇದು ಜನಿಸಿತು. ಮೈಸೂರು ಮಹಾರಾಜರು ತನ್ನ ಸಂಬಂಧಿಯೊಬ್ಬರ ಕಾಯಿಲೆಯನ್ನು ಗುಣಪಡಿಸಿದ ಖುಷಿಗಾಗಿ ಪಿಲಿಯಾಂಡಲದ ನೀಲಮ್ಮಹರ ದೇವಾಲಯದಲ್ಲಿ ನೆಲೆಸಿದ್ದ ಅನುಭವಿ ಬೌದ್ಧ ವೈದ್ಯ ಬಿಕ್ಕುವಿಗೆ ಹಾಗೂ ಇನ್ನೊಂದು ಆನೆ ಮರಿಯನ್ನು ನವಮ್‌ನ ರಾಜ ಗಂಗರಾಮಯರಿಗೆ ಉಡುಗೊರೆಯಾಗಿ ನೀಡಿದ್ದರಂತೆ. ಆ ಮರಿಗಳ ಪೈಕಿ ನಾಡುಂಗಮುವಾ ರಾಜಾ ಆನೆಯೂ ಒಂದು. ಈಗ ಈ ಆನೆಯು ಆಯುರ್ವೇದ ವೈದ್ಯರಾಗಿದ್ದ ರಾಲಹಾಮಿಯ ಮಗನಾದ ಶ್ರೀ ಹರ್ಷ ಧರ್ಮವಿಜಯರ ಮಾಲೀಕತ್ವದಲ್ಲಿದೆ.
Advertisement
ಹಳ್ಳಿಗಾಡು ರಸ್ತೆಗಳಲ್ಲಿ ಈ ಆನೆ ಸಂಚರಿಸುವಾಗ ಹಾದಿಯನ್ನು ತೆರವುಗೊಳಿಸಲು ಒಂದು ಸೇನಾ ತುಕಡಿಯನ್ನು ಮತ್ತು ನಾಲ್ಕೂ ದಿಕ್ಕಿನಿಂದ ರಕ್ಷಣೆ ಒದಗಿಸಲು ಶಸ್ತ್ರಸಜ್ಜಿತ ಸೈನಿಕರ ಮತ್ತೂಂದು ತುಕಡಿಯನ್ನು ನಿಯೋಜಿಸಲಾಗಿದೆ. ಈ ಆನೆಯು ಶ್ರೀಲಂಕಾದ ರಾಷ್ಟ್ರೀಯ ಸ್ವತ್ತಾಗಿದೆ. ಅತ್ಯಂತ ಪವಿತ್ರ ಬೌದ್ಧ ದೇವಾಲಯವಾದ “ಟೆಂಪಲ್ ಆಫ್ ದಿ ಟೂತ್’ನಲ್ಲಿ ವಾರ್ಷಿಕ ಪ್ರದರ್ಶನದಲ್ಲಿ ಬುದ್ಧನ ಅವಶೇಷಗಳ ಪೆಟ್ಟಿಗೆಯನ್ನು ಕೊಂಡೊಯ್ಯಲು ಈ ಆನೆಯನ್ನೇ ಬಳಸಲಾಗುತ್ತದೆ.
ಭಾರತದಲ್ಲಿ…ತೆಚ್ಚಿಕೊಟ್ಟುಕಾವ್ ರಾಮಚಂದ್ರನ್ ಭಾರತದ ಅತಿ ಎತ್ತರದ ಆನೆ. ಏಷ್ಯಾದಲ್ಲಿರುವ ಎರಡನೇ ಅತಿ ಎತ್ತರದ ಆನೆ ಎಂಬ ಹೆಗ್ಗಳಿಕೆ ಇದೆ. ರಾಮನ್ ಎಂಬ ಹೆಸರೂ ಇದೆ. ಕೇರಳದಲ್ಲಿರುವ ಈ ಆನೆಗೆ ಬಹಳ ಜನ ಅಭಿಮಾನಿಗಳು ಇದ್ದಾರೆ. ಇದರ ಎತ್ತರ 10.5 ಅಡಿ. ಸುಮಾರು 56 ವರ್ಷದ ಈ ಆನೆ ಆಗಾಗ, ಅನೇಕ ಜನರನ್ನು ಕೊಂದು ಸುದ್ದಿಯಾಗಿದೆ. ಕಳೆದ ವರ್ಷವಷ್ಟೇ ಇಬ್ಬರನ್ನು ಕೊಂದು ದೇಶದಾದ್ಯಂತ ಸುದ್ದಿ ಮಾಡಿತು. ಸಂತೋಷ್ ರಾವ್. ಪೆರ್ಮುಡ