ಇತ್ತೀಚೆಗಷ್ಟೇ 2021ನೇ ಸಾಲಿನ ಭಾರತೀಯ ಸಿನಿಮಾರಂಗದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ರಾಕೆಟ್ರಿ:ದಿ ನಂಬಿ ಎಫೆಕ್ಟ್, ಆರ್ ಆರ್ ಆರ್, ಶೇರ್ಷಾ, ದಿ ಕಾಶ್ಮೀರ್ ಫೈಲ್ಸ್, ಸ್ಯಾಂಡಲ್ ವುಡ್ ನ ಚಾರ್ಲಿ 777 ಸಿನಿಮಾ ಪ್ರಶಸ್ತಿಗೆ ಭಾಜನವಾಗಿದ್ದವು. ಸಿನಿಮಾ ರಂಗದಲ್ಲಿ ನ್ಯಾಷನಲ್ ಅವಾರ್ಡ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಹೆಚ್ಚಿನ ಮಹತ್ವವಿದೆ. ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಈವರೆಗೆ ಒಟ್ಟು ಏಳು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರೆ ಕುತೂಹಲದ ಸಂಗತಿ ಎಂದರೆ ಭಾರತೀಯ ಚಿತ್ರರಂಗದಲ್ಲಿ 35 ನ್ಯಾಷನಲ್ ಅವಾರ್ಡ್ಸ್ ಗಳನ್ನು ಪಡೆದ ಏಕೈಕ ವ್ಯಕ್ತಿ ಇದ್ದಾರೆ ಅವರು ಯಾರು ಗೊತ್ತಾ?
ಅತೀ ಹೆಚ್ಚು ನ್ಯಾಷನಲ್ ಅವಾರ್ಡ್ ಪಡೆದ ವ್ಯಕ್ತಿ ಇವರು…
ಭಾರತೀಯ ಚಿತ್ರರಂಗದಲ್ಲಿ ದಂತಕಥೆ, ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ ಅವರು ಬರೋಬ್ಬರಿ 35 ನ್ಯಾಷನಲ್ ಅವಾರ್ಡ್ಸ್ ಗಳನ್ನು ಪಡೆದುಕೊಂಡ ಏಕೈಕ ವ್ಯಕ್ತಿಯಾಗಿದ್ದಾರೆ. ಅತ್ಯುತ್ತಮ ಸಿನಿಮಾಗಳನ್ನು ನೀಡುವ ಮೂಲಕ ಸತ್ಯಜಿತ್ ರೇ ಅವರು ಭಾರತೀಯ ಸಿನಿಮಾವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವಂತೆ ಮಾಡಿರುವ ಹೆಗ್ಗಳಿಕೆ ಅವರದಾಗಿದೆ.
ಸತ್ಯಜಿತ್ ರೇ ನಿರ್ದೇಶನದ ಪಥೇರ್ ಪಾಂಚಾಲಿ ಎರಡು ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಅಲ್ಲಿಂದ ಸುಮಾರು 40 ವರ್ಷಗಳ ಕಾಲ ಸತತವಾಗಿ ಸತ್ಯಜಿತ್ ರೇ ನ್ಯಾಷನಲ್ ಅವಾರ್ಡ್ಸ್ ಗಳಿಗೆ ಭಾಜನರಾಗಿದ್ದರು. 1994ರಲ್ಲಿ ರೇ ಅವರು ತಮ್ಮ ಉತ್ತೋರಾನ್ ಚಿತ್ರದ ಅತ್ಯುತ್ತಮ ಚಿತ್ರಕಥೆಗಾಗಿ ಕೊನೆಯದಾಗಿ ನ್ಯಾಷನಲ್ ಅವಾರ್ಡ್ ಪಡೆದಿದ್ದರು.
ನಿರ್ದೇಶಕ ಸತ್ಯಜಿತ್ ರೇ ಅವರು ಪಡೆದ 35 ನ್ಯಾಷನಲ್ ಅವಾರ್ಡ್ ಗಳಲ್ಲಿ, ಉತ್ತಮ ನಿರ್ದೇಶನಕ್ಕಾಗಿ ಆರು ಹಾಗೂ ಇನ್ನುಳಿದಂತೆ ಉತ್ತಮ ಚಿತ್ರ, ಚಿತ್ರಕಥೆ, ಎಡಿಟಿಂಗ್ ಗೆ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು. 1974ರಲ್ಲಿ ತೆರೆಕಂಡಿದ್ದ ರೇ ಅವರ ಸೋನಾರ್ ಕೆಲ್ಲಾ ಸಿನಿಮಾ ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ಉತ್ತಮ ನಿರ್ದೇಶಕ, ಉತ್ತಮ ಚಿತ್ರಕಥೆ ಮತ್ತು ಉತ್ತಮ ಬೆಂಗಾಲಿ ಫೀಚರ್ ಚಿತ್ರ ಸೇರಿದಂತೆ ಆರು ರಾಷ್ಟ್ರಪ್ರಶಸ್ತಿ ಪಡೆದಿತ್ತು. ರೇ ಅವರ 9 ಚಿತ್ರಗಳು ಬೆಂಗಾಲಿಯಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗೆದ್ದಿತ್ತು. ಅಲ್ಲದೇ ಆರು ಸಿನಿಮಾ ಉತ್ತಮ ಫೀಚರ್ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದ್ದವು. 1978ರಲ್ಲಿ ಬಿಡುಗಡೆಯಾಗಿದ್ದ ಮಕ್ಕಳ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಹಾಗೂ 1972ರಲ್ಲಿ ತೆರೆ ಕಂಡಿದ್ದ ಇನ್ನರ್ ಐ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ಇತರ ನಟರು ಯಾರು?
ಬಾಲಿವುಡ್ ನ ಶಬಾನಾ ಅಜ್ಮಿ ಐದು ರಾಷ್ಟ್ರಪ್ರಶಸ್ತಿ ಪಡೆದಿದ್ದು, ಖ್ಯಾತ ನಟರಾದ ಮೋಹನ್ ಲಾಲ್, ಅಮಿತಾಬ್ ಬಚ್ಚನ್ ಮತ್ತು ಕಂಗನಾ ರಣಾವತ್ ತಲಾ ನಾಲ್ಕು ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನಟ ಮಮ್ಮುಟ್ಟಿ 3 ರಾಷ್ಟ್ರ ಪ್ರಶಸ್ತಿ, ಪ್ರಸಿದ್ಧ ಗಾಯಕ ಯೇಸುದಾದ್ ಅವರು ಹಿನ್ನೆಲೆ ಗಾಯನಕ್ಕಾಗಿ ಆರು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಆದರೆ ನಿರ್ದೇಶಕ ಸತ್ಯಜಿತ್ ರೇ ನಂತರ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರು 17 ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.