Advertisement

ಈ ಸಿನಿಮಾ ಕಥೆ ಬರೆದಿದ್ದು ಮಾಜಿ ಸಿಎಂ…ಪ್ರೇಕ್ಷಕ ಗುರುತಿಸದೇ ಹೋದ ಡಾ.ರಾಜ್ ದ್ವಿಪಾತ್ರ ಇದು!

06:10 PM Aug 01, 2020 | Nagendra Trasi |

1949ರಲ್ಲಿ ಬಿಡುಗಡೆಯಾಗಿದ್ದ ತಮಿಳು ಸಿನಿಮಾ ವೇಲೈಕ್ಕಾರಿ(ಮನೆಕೆಲಸದಾಕೆ) ಸಿನಿಮಾ ಅಂದು ಸೂಪರ್ ಹಿಟ್ ಆಗಿತ್ತು. ಅಷ್ಟೇ ಆ ಸಿನಿಮಾ ಪ್ರದರ್ಶನದ ನಂತರ ತಮಿಳು ಸಿನಿಮಾ ಹೆಚ್ಚು, ಹೆಚ್ಚು ಜನಪ್ರಿಯವಾಗತೊಡಗಿತ್ತು. ಇದು ಮೂಲತಃ ತಮಿಳುನಾಡು ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರ ನಾಟಕವಾಗಿತ್ತು. ಬಳಿಕ ಸಿನಿಮಾಕ್ಕಾಗಿ ಚಿತ್ರ ಕಥೆ ಬರೆಯಲು ಕೇಳಿಕೊಂಡಿದ್ದಾಗ ಮೂರು ದಿನಗಳಲ್ಲಿಯೇ ಒಂದು ಸಾವಿರ ಪುಟಗಳಷ್ಟು ಚಿತ್ರಕಥೆ ಬರೆದುಕೊಟ್ಟಿದ್ದರು ಅಣ್ಣಾದೊರೈ! ನಂತರ ಈ ಸಿನಿಮಾ 1963ರಲ್ಲಿ ಕನ್ನಡದಲ್ಲಿ ತೆರೆಕಂಡಿತ್ತು.

Advertisement

ಈ ಸಿನಿಮಾ ತಮಿಳು ಸಿನಿಮಾರಂಗದ ಇತಿಹಾಸದಲ್ಲಿಯೇ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಅಷ್ಟೇ ಅಲ್ಲ ತಮಿಳು ಸಿನಿಮಾ ಕ್ಷೇತ್ರಕ್ಕೆ ಹೊಸ ದಿಕ್ಕನ್ನು ನೀಡಿದ್ದ ಸಿನಿಮಾ ಇದಾಗಿತ್ತು. ಸಿನಿಮಾ ಚಿತ್ರಕಥೆ ಬರೆಯುವವರು ನಟನಿಗಿಂತ ದೊಡ್ಡ ಸ್ಟಾರ್ ಎಂಬುದನ್ನು ಸಾಬೀತುಪಡಿಸಿತ್ತು. ಆ ನಿಟ್ಟಿನಲ್ಲಿ ಸಿನಿಮಾ ಟೈಟಲ್ ಗಿಂತ ಮೇಲೆ ಕಥೆಗಾರರ ಹೆಸರು ಮೊದಲು ಬರುವಂತಾಗಿತ್ತು! ಸಿನಿಮಾದಲ್ಲಿ ಹೀರೋ ಆಗಿ ನಟಿಸಿದವರು ಅಣ್ಣಾದೊರೈ ಗೆಳೆಯ ಕೆಆರ್ ರಾಮಸಾಮಿ, ಟಿಎಸ್ ಬಾಲಯ್ಯ, ಎಂಎನ್ ನಂಬಿಯಾರ್, ಡಿ.ಬಾಲಸುಬ್ರಮಣಿಯಂ, ಎಂವಿ ರಾಜಮ್ಮಾ, ವಿಎನ್ ಜಾನಕಿ ಸೇರಿದಂತೆ ಘಟಾನುಘಟಿ ನಟ, ನಟಿಯರು ನಟಿಸಿದ್ದರು.

1949ರಲ್ಲಿ ಬಿಡುಗಡೆಗೊಂಡಿದ್ದ ವೇಲೈಕ್ಕಾರಿ ಸಿನಿಮಾ ನೂರು ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಕೋರ್ಟ್ ರೂಂ ಸೀನ್ ತೋರಿಸಿದ ಮೊತ್ತ ಮೊದಲ ತಮಿಳು ಸಿನಿಮಾ ವೇಲೈಕ್ಕಾರಿ. ನಂತರ ಬಂದ ಸಿನಿಮಾಗಳಲ್ಲಿ ಕೋರ್ಟ್ ದೃಶ್ಯ ಬಳಕೆ ಟ್ರೆಂಡ್ ಆಗಿಬಿಟ್ಟಿತ್ತು. ಸಿನಿಮಾದಲ್ಲಿನ ಅದ್ಭುತ ಡೈಲಾಗ್ ನಿಂದಾಗಿ ತಮಿಳು ಸಿನಿಮಾ ಡೈಲಾಗ್ ಬರಹಗಾರರಿಗೆ ಹೆಚ್ಚಿನ ಆದ್ಯತೆ ತಂದುಕೊಟ್ಟಿತ್ತು.

ಕನ್ನಡ, ಹಿಂದಿ, ತೆಲುಗಿನಲ್ಲಿ ತೆರೆಕಂಡಿತ್ತು:

Advertisement

1949ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ ವೇಲೈಕ್ಕಾರಿ ಸಿನಿಮಾ ನಂತರ 1956ರಲ್ಲಿ ಬಾಲಿವುಡ್ ನಲ್ಲಿ “ನಯಾ ಆದ್ಮಿ” ಹೆಸರಿನಲ್ಲಿ ಪ್ರದರ್ಶನ ಕಂಡಿತ್ತು. 1955ರಲ್ಲಿ ತೆಲುಗಿನಲ್ಲಿ “ಸಂತೋಷಂ” ಹೆಸರಿನಲ್ಲಿ ತೆರೆ ಕಂಡಿದ್ದು, ಎನ್ ಟಿ ರಾಮರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆದರೆ ತೆಲುಗಿನಲ್ಲಿ ಸಿನಿಮಾ ಯಶಸ್ವಿಯಾಗಲಿಲ್ಲವಾಗಿತ್ತು. 1963ರಲ್ಲಿ ಕನ್ನಡದಲ್ಲಿಯೂ “ಮಲ್ಲಿ ಮದುವೆ” ಹೆಸರಿನಲ್ಲಿ ತೆರೆಕಂಡಿದ್ದು, ಡಾ.ರಾಜ್ ಕುಮಾರ್, ಉದಯ್ ಕುಮಾರ್, ಲೀಲಾವತಿ ಸೇರಿದಂತೆ ಹಲವು ಘಟಾನುಘಟಿಯರು ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಗಳಿಸಿತ್ತು.

ಕನ್ನಡದಲ್ಲಿ ಹಿಟ್ ಆಗಿದ್ದ “ಮಲ್ಲಿ ಮದುವೆ” ಡಾ.ರಾಜ್ ದ್ವಿಪಾತ್ರ ಹೇಗಿತ್ತು?

ಕನ್ನಡ, ಹಿಂದಿ, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ದ್ವಿಪಾತ್ರ ಪ್ರೇಕ್ಷಕರ ಮನಗೆದ್ದಿದ್ದು ಸುಳ್ಳಲ್ಲ. ಬಾಲಿವುಡ್ ನಲ್ಲಿ ಮೊತ್ತ ಮೊದಲು ದ್ವಿಪಾತ್ರದಲ್ಲಿ ನಟಿಸಿದ್ದು ಅಶೋಕ್ ಕುಮಾರ್. ಅದು 1943ರಲ್ಲಿ ತೆರೆಕಂಡಿದ್ದ “ಕಿಸ್ಮತ್” ಸಿನಿಮಾದಲ್ಲಿ. ಆ ನಂತರದಲ್ಲಿ ದೇವ್ ಆನಂದ್, ಧರ್ಮೇಂದ್ರ, ರಾಜೇಶ್ ಖನ್ನಾ ದ್ವಿಪಾತ್ರದಲ್ಲಿ ನಟಿಸಿದ್ದರು. 1960ರಲ್ಲಿ ತೆಲುಗು ಸ್ಟಾರ್ ನಟ ಎನ್ ಟಿ ರಾಮರಾವ್ ಕೂಡಾ ದ್ವಿಪಾತ್ರದಲ್ಲಿ ಮಿಂಚಿದ್ದರು.

ಕನ್ನಡದಲ್ಲಿ ತೆರೆಕಂಡಿದ್ದ “ಮಲ್ಲಿ ಮದುವೆ” (ವೇಲೈಕ್ಕಾರಿ) ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದರು. ಆದರೆ ಅದನ್ನು ಪ್ರೇಕ್ಷಕನನ್ನು ತಲುಪಿರಲಿಲ್ಲವಾಗಿತ್ತು. 1963ರಲ್ಲಿ ಡಾ.ರಾಜ್ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಿದ್ದ ಪಾತ್ರ ಅದು. ಆದರೆ ಆ ಪಾತ್ರ ಸಿನಿಮಾದಲ್ಲಿ ತೋರಿಸಲ್ಪಟ್ಟಿದ್ದು ಕೇವಲ ಮೂರು ಸೆಕೆಂಡ್ಸ್! ಇದು ಇಡೀ ಚಿತ್ರಕಥೆಗೆ ತಿರುಕೊಟ್ಟ ಪಾತ್ರ ಅದಾಗಿತ್ತು. ನಂತರ ಡಾ.ರಾಜ್ ಅವರು ಬಾಳು ಬೆಳಗಿತು, ಅದೇ ಕಣ್ಣು ಸೇರಿ ಹಲವಾರು ಚಿತ್ರಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿ ಅಪಾರ ಜನಮನ್ನಣೆ ಪಡೆದಿದ್ದರು. ಶಂಕರ್ ಗುರು ಸಿನಿಮಾದಲ್ಲಿ ರಾಜ್ ಅವರು ತ್ರಿಪಾತ್ರದಲ್ಲಿ ಅಭಿನಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next