ಒಬ್ಬ ಸಾಧು ನಿತ್ಯವೂ ಸ್ವಲ್ಪ ಹೊತ್ತು ವನಪ್ರದೇಶದಲ್ಲಿ ಕುಳಿತು ಪಕ್ಷಿಗಳ ಚಿಲಿಪಿಲಿ ನಾದವನ್ನು ಆಲಿಸುತ್ತಲಿದ್ದ. ಒಮ್ಮೆ ಬೇಡನೊಬ್ಬ ಬಲೆ ಹರಡಿ ಹಕ್ಕಿಗಳನ್ನು ಹಿಡಿದೊಯ್ದುದ್ದನ್ನು ನೋಡಿದ. ಆತ ಮರುದಿನವೂ ಬೇಟೆಗೆ ಬರುತ್ತಾನೆ ಎಂಬುದನ್ನರಿತ ಸಾಧುವು, ಉಳಿದಿರುವ ಹಕ್ಕಿಗಳಿಗಾದರೂ ಅಪಾಯದ ಕುರಿತು ಎಚ್ಚರಿಸೋಣ ಎಂದು ಯೋಚಿಸಿ- “ನಾಳೆಯೂ ಬೇಡ ಬಂದು ಬಲೆ ಹರಡಿ ನಿಮ್ಮನ್ನು ಹಿಡಿಯುತ್ತಾನೆ. ಎಚ್ಚರಿಕೆಯಿಂದಿರಿ’ ಎಂದು ಹಕ್ಕಿಗಳಿಗೆ ಹೇಳಿದ.
ತನ್ನ ಮಾತು ಹಕ್ಕಿಗಳಿಗೆ ಅರ್ಥವಾಗಿದೆ ಎಂದು ಖಚಿತಪಡಿಸಿ ಕೊಳ್ಳಲು ಅವುಗಳನ್ನು ಕೇಳಿದ- “ನಾನು ಏನು ಹೇಳಿದೆ ಹೇಳಿ?’ ಆಗ ಹಕ್ಕಿಗಳೆಲ್ಲವೂ ಒಕ್ಕೊರಲಿಂದ ನುಡಿದವು- “ಬೇಡ ಬರುತ್ತಾನೆ ಬಲೆ ಹರಡಲು, ಎಚ್ಚರಿಕೆ, ಎಚ್ಚರಿಕೆ…’ ಅದನ್ನು ಕೇಳಿದ ಸಾಧುವು ತೃಪ್ತನಾಗಿ ಹಿಂದಿರುಗಿದ. ಮರುದಿನ ಬೇಡ ಬರುತ್ತಿದ್ದಂತೆಯೇ ಹಕ್ಕಿಗಳು- “ಬೇಡ ಬರುತ್ತಾನೆ ಬಲೆ ಹರಡಲು. ಎಚ್ಚರಿಕೆ, ಎಚ್ಚರಿಕೆ’ ಎಂದು ಕೂಗಿಕೊಂಡವು. ನಿನ್ನೆಯಂತೆಯೇ ಇಂದೂ ಹಕ್ಕಿಗಳು ಸಿಗುತ್ತಾವೆಂಬ ನಿರೀಕ್ಷೆಯಲ್ಲಿದ್ದ ಬೇಡ, ಹಕ್ಕಿಗಳ ಮಾತು ಕೇಳಿ ನಿರಾಶನಾದ.
ಹೇಗೂ ಹಕ್ಕಿಗಳು ಸಿಗುವುದಿಲ್ಲ ಎಂದು ಬಲೆ ಹರಡಿ ಧಾನ್ಯದ ಕಣಗಳನ್ನು ಎರಚಿ, ಅಲ್ಲೇ ವಿಶ್ರಮಿಸಿದ. ಆದರೆ, ನಿದ್ರೆಯಿಂದ ಎಚ್ಚೆತ್ತು ನೋಡಿದವನಿಗೆ ಅಚ್ಚರಿ ಕಾದಿತ್ತು. ಎಲ್ಲ ಹಕ್ಕಿಗಳೂ ಬಲೆಯ ಮೇಲೆಯೇ ಕುಳಿತು ಕಾಳುಗಳನ್ನು ತಿನ್ನುತ್ತಾ “ಬೇಡ ಬರುತ್ತಾನೆ ಎಚ್ಚರಿಕೆ’ ಎಂದು ಅರಚುತ್ತಲಿದ್ದವು! ಬೇಡನು ತಡೆಯಲಾರದ ನಗುವಿನೊಡನೆ ಹಕ್ಕಿಗಳನ್ನು ಹೊತ್ತು ಮನೆಗೆ ತೆರಳಿದ. ಹಕ್ಕಿಗಳು ಪಾರಾಗಿರುತ್ತವೆಂಬ ನಿಶ್ಚಯ ದಿಂದ ಬಂದ ಸಾಧುವು ಆ ದೃಶ್ಯವನ್ನು ಕಂಡು ದಂಗಾದ. ಬೇಡನ ಬಲೆಯಲ್ಲಿದ್ದ ಹಕ್ಕಿಗಳು “ಬೇಡ ಬರುತ್ತಾನೆ ಎಚ್ಚರಿಕೆ’ ಎಂದು ಅರಚುತ್ತ ಲೇ ಇದ್ದವು. ಮಾತನಾಡಬಲ್ಲ ಹಕ್ಕಿಗಳಿಗೆ ಮಾತನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ (ಸಂಸ್ಕಾರ)ವಿರಲಿಲ್ಲವಷ್ಟೆ!
ಇದು ಹಿಂದೊಮ್ಮೆ ಎಲ್ಲೋ ಕೇಳಿದ ಕಥೆ ಯಾದರೂ, ಪ್ರಸ್ತುತ ನಮ್ಮ ಕಥೆಯೂ ಹೌದು. ಜ್ಞಾನಿಗಳು ಹೃದಯ ಗುಹೆಯಲ್ಲಿ ಅನುಭವಿಸಿ ದ ಆತ್ಮದರ್ಶನ, ತತ್ಪರಿಣಾಮ ವಾದ ಪರಮಾ ನಂದವು ಭಾಷಾ (ಮಂತ್ರ- ಸ್ತೋತ್ರ- ಸಾಹಿತ್ಯಗಳ) ರೂಪದಲ್ಲಿ ಹೊರ ಹೊಮ್ಮಿವುದುಂಟು. ಶ್ರೀರಂಗ ಮಹಾಗುರುಗಳ ಆಶಯವೆಂದರೆ ಪದಾರ್ಥದ ಅನುಭವದಿಂದ ಪದವೂ, ಭಾವದಿಂದ ಭಾಷೆಯೂ ಹೊರಡುತ್ತ ವೆ. ಕೇಳುವವರಿಗೆ ತಕ್ಕ ಸಂಸ್ಕಾರವಿದ್ದಾಗ ಪದವು- ಪದಾರ್ಥದೆಡೆಗೂ, ಭಾಷೆಯು- ಭಾವದೆಡೆಗೂ ಒಯ್ಯುತ್ತವೆ.
* ಮೈಥಿಲೀ ರಾಘವನ್, ಸಂಸ್ಕೃತ ಚಿಂತಕಿ