ಪ್ರೀತಿ… ಇದು ಎಲ್ಲರಿಗೂ ಅನ್ವಯಿಸುವ ಪದ. ಪ್ರೀತಿ ಎಂಬುದು ಒಂದಕ್ಕೆ ಸೀಮಿತವಾದುದಲ್ಲ. ಅದು ಹುಡುಗ, ಹುಡುಗಿಯ ಪ್ರೀತಿ, ಅಣ್ಣ, ತಮ್ಮನ, ಅಕ್ಕ, ತಂಗಿಯ, ಅಪ್ಪ, ಅಮ್ಮನ ಪ್ರೀತಿ ಹೀಗೆ ಎಲ್ಲಾ ಕಡೆಯೂ ಈ ಪ್ರೀತಿ ಇದ್ದೇ ಇರುತ್ತೆ. ಈಗ ಇಲ್ಲೇಕೆ ಪ್ರೀತಿ ಬಗ್ಗೆ ಇಷ್ಟೊಂದು ಪೀಠಿಕೆ ಎಂಬ ಪ್ರಶ್ನೆಗೆ ಕಾರಣ, “ಪ್ರೀತಿ ಇರಬಾರದೇ’ ಚಿತ್ರ. ಹೌದು, ಹೊಸಬರೇ ಸೇರಿ ಮಾಡಿದ ಚಿತ್ರವಿದು. ಈ ಚಿತ್ರಕ್ಕೆ ನವೀನ್ ನಯಾನಿ ನಿರ್ದೇಶಕರು. ಡಾ.ಲಿಂಗೇಶ್ವರ್ ನಿರ್ಮಾಣ ಮಾಡಿದ್ದಾರೆ. ಚಿತ್ರ ಪೂರ್ಣಗೊಂಡಿದ್ದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ವಿಶೇವೆಂದರೆ, ಇದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲೂ ತಯಾರಾಗಿದೆ. ಇತ್ತೀಚೆಗೆ ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡ ಪತ್ರಕರ್ತರ ಮಂದೆ ಬಂದಿತ್ತು.
ನಿರ್ದೇಶಕ ನವೀನ್ ನಯಾನಿ ಅವರಿಗೆ ಈ ಚಿತ್ರ ಎಲ್ಲರಿಗೂ ಹೆಸರು ತಂದುಕೊಡುತ್ತದೆ ಎಂಬ ನಂಬಿಕೆ ಇದೆಯಂತೆ. ಇದು ಈಗಿನ ಟ್ರೆಂಡ್ ಕಥೆ. ಪ್ರೀತಿ ಇರಬಾರದೇ ಎಂಬ ಶೀರ್ಷಿಕೆಯಲ್ಲೇ ಎಲ್ಲಾ ಅರ್ಥವಿದೆ. ನವಿರಾದ ಲವ್‌ಸ್ಟೋರಿಯಲ್ಲಿ ಸಾಕಷ್ಟು ಏರಿಳಿತಗಳಿವೆ. ಅಷ್ಟೇ ಅಲ್ಲ, ನೋವು-ನಲಿವು ಸೇರಿದಂತೆ ಎಲ್ಲಾ ಅಂಶಗಳು ಕಥೆಗೆ ಪೂರಕವಾಗಿವೆ. ಟೀನೇಜ್ ಹುಡುಗ, ಹುಡುಗಿಯ ಪ್ರೀತಿ ಕಥೆ ಚಿತ್ರದ ಜೀವಾಳ. ಕೆ.ಕಲ್ಯಾಣ್ ಇಲ್ಲಿ ಏಳು ಹಾಡುಗಳನ್ನು ಬರೆದಿದ್ದಾರೆ. ಸಬೂ ವರ್ಗೀಸ್ ಒಳ್ಳೆಯ ಸಂಗೀತ ಕೊಟ್ಟಿದ್ದಾರೆ ಎಂದರು ನವೀನ್ ನಯಾನಿ.
ನಿರ್ಮಾಪಕ ಡಾ.ಲಿಂಗೇಶ್ವರ್ ಅವರಿಗೆ ಇದು ಮೊದಲ ಚಿತ್ರ. ಈ ಸಿನಿಮಾದಲ್ಲೊಂದು ಸಂದೇಶವಿದೆ. ತಂದೆ- ಮಗಳ ಕಥೆ ಹೈಲೈಟ್ ಆಗಿದೆ. ಸಮಾಜದಲ್ಲಿ ನಡೆಯುವ ಘಟನೆಗಳು ಚಿತ್ರದಲ್ಲಿವೆ. ಒಬ್ಬ ತಂದೆ, ಮಗಳ ಪ್ರೀತಿ ವಾತ್ಸಲ್ಯ ಹೇಗೆಲ್ಲಾ ಇರಬೇಕೆಂಬುದನ್ನು ಇಲ್ಲಿ ಹೇಳಲಾಗಿದೆ. ಹೊಸಬರ ಪ್ರಯತ್ನಕ್ಕೆ ಬೆಂಬಲ ಇರಲಿ ಎಂದರು ಅವರು.
ನಾಯಕ ತರುಣ್ ತೇಜ್‌ಗೆ ಅವಕಾಶ ಸಿಕ್ಕ ಖುಷಿಯಂತೆ. ಇಲ್ಲಿ ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿರುವುದು ನನ್ನ ಅದೃಷ್ಟ. ನಿಮ್ಮೆಲ್ಲರ ಸಹಕಾರ ನಮಗೆ ಬೇಕು ಎಂದರು ತರುಣ್ ತೇಜ್. ನಾಯಕಿ ಲಾವಣ್ಯ ಅವರು ಅವಕಾಶ ಕೊಟ್ಟ ಎಲ್ಲರಿಗೂ ಥ್ಯಾಂಕ್ಸ್ ಎಂದಷ್ಟೇ ಹೇಳಿದರು. ಅಂದು ಹಾಡುಗಳ ಬಿಡುಗಡೆ ಕಾರ್ಯಕ್ರಮ ಇದ್ದುದರಿಂದ ಗೀತಸಾಹಿತಿ ನಾಗೇಂದ್ರಪ್ರಸಾದ್ ಅವರು, ಹೊಸಬರ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದರು. ಅಂದು ಮಂಡಳಿಯ ಭಾ.ಮಹರೀಶ್, ಅವಿನಾಶ್, ಸಾಬು ವರ್ಗೀಸ್ ಇತರರು ಇದ್ದರು.