Advertisement

ಬಡ ವಿದ್ಯಾರ್ಥಿಗಳ ದೇವಾಲಯ ಈ ಗ್ರಂಥಾಲಯ

12:55 PM Oct 25, 2019 | Suhan S |

ಕುಂದಗೋಳ: ತಾಲೂಕಿನ ಸಂಶಿ ಗ್ರಾಮದ ಸಾರ್ವಜನಿಕ ಗ್ರಂಥಾಲಯವು ವಿಶಿಷ್ಟ ರೀತಿಯಿಂದ ಗಮನ ಸೆಳೆಯುತ್ತಿದ್ದು, ಮಾದರಿ ಗ್ರಂಥಾಲಯವಾಗಿ ರೂಪುಗೊಂಡಿದೆ.

Advertisement

ಸೌಲಭ್ಯಗಳಿಲ್ಲ, ಪುಸ್ತಕಗಳಿಲ್ಲ, ಓದುಗರಿಲ್ಲ ಎಂಬಿತ್ಯಾದಿ ಬೇಡಿಕೆಗಳಿಗೆ ಸಡ್ಡು ಹೊಡೆದು ಇಚ್ಛಾಶಕ್ತಿಯ ಪ್ರತೀಕವಾಗಿ ಅಭಿವೃದ್ಧಿ ಕಂಡಿದೆ. ಗ್ರಾಮದ ಬಸ್‌ನಿಲ್ದಾಣದಿಂದ ಅನತಿ ದೂರದಲ್ಲಿರುವ ಈ ಗ್ರಂಥಾಲಯ 2016ರಲ್ಲಿ ಸ್ವಂತ ಕಟ್ಟಡ ಹೊಂದಿದ್ದು, ಓದುಗರನ್ನು ಕೈಬೀಸಿ ಕರೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾಗಿ ಬೇಕಾಗುವ ಬೆಲೆಬಾಳುವ ಪುಸ್ತಕಗಳು ಈ ಗ್ರಂಥಾಲಯದಲ್ಲಿ ದೊರೆಯುತ್ತಿದ್ದು, ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಗ್ರಂಥಾಲಯವಾಗಿದೆ.

ವಿಶಿಷ್ಟತೆ ಹಾದಿ: ವಿವಿಧ ಕಾದಂಬರಿ, ಕಥೆ-ಕಾವ್ಯ ಸೇರಿದಂತೆ 4,650 ಪುಸ್ತಕಗಳನ್ನು ಸರ್ಕಾರದಿಂದ ನೀಡಲಾಗಿದೆ. ಆದರೆ ಇವೆಲ್ಲವೂ ಸಾಹಿತ್ಯದ ಓದಿಗೆ ಪೂರಕವಾದ ಪುಸ್ತಕಗಳಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳ್ಳುವ ವಿದ್ಯಾರ್ಥಿಗಳು ಕೇವಲ ದೈನಂದಿನ ಪತ್ರಿಕೆಗಳನ್ನು ಓದುತ್ತಿದ್ದರು.

ಗ್ರಾಮದ ಕೆಎಲ್‌ಇ ಕಾಲೇಜಿನ ಪ್ರೊ| ರಮೇಶ ಅತ್ತಿಗೇರಿಯವರು ಈ ಗ್ರಂಥಾಲಯದಲ್ಲಿ ಕುಳಿತು ಓದುತ್ತಿರುವಾಗ ಬಡ ವಿದ್ಯಾರ್ಥಿಗಳಿಗೆ ಉಪಯುಕ್ತ ಪುಸ್ತಕಗಳು ದೊರೆತರೆ ಇನ್ನಷ್ಟು ಅನುಕೂಲವಾಗುತ್ತದೆ ಎಂಬ ಚಿಂತನೆ ಮೊಳಕೆಯೊಡೆಯಿತು. ಕೂಡಲೇ ಬಡ ವಿದ್ಯಾರ್ಥಿಗಳಿಗಾಗಿ 2017ರಲ್ಲಿ ಏಳು ಜನರನ್ನೊಳಗೊಂಡ ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶಿ ಪುಸ್ತಕ ಸಂಗ್ರಹಣಾ ಸಮಿತಿಯೊಂದನ್ನು ಕಟ್ಟಿದರು. ಗ್ರಂಥಾಲಯದ ಗ್ರಂಥಪಾಲಕರಾದ ಸಕ್ರಮ್ಮ ಕಾಳೆ ಅವರನ್ನು ಸಮಿತಿಯ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದಾಗ ಅವರೂ ಕೂಡ ಅತ್ತಿಗೇರಿ ಅವರ ತುಡಿತಕ್ಕೆ ಸ್ಪಂದಿಸಿದರು.

ಸಮಿತಿಯ ಮೂಲಕ ದಾನಿಗಳಿಂದ ಬಡ ವಿದ್ಯಾರ್ಥಿಗಳಿಗಾಗಿ ಉಪಯುಕ್ತ ಪುಸ್ತಕಗಳನ್ನು ದೇಣಿಗೆ ಪಡೆಯುವ ಕಾರ್ಯ ನಡೆಯಿತು. ಸುಮಾರು 45 ಸಾವಿರ ರೂ. ಬೆಲೆಬಾಳುವ ಕೆಎಎಸ್‌, ಐಎಎಸ್‌ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಪುಸ್ತಕಗಳನ್ನು ದಾನಿಗಳಿಂದ ಸಂಗ್ರಹಿಸಿ ಇಟ್ಟಿದ್ದು, ಗ್ರಂಥಾಲಯಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಂತಾಗಿದೆ.

Advertisement

ಮನೆ ಮನೆಗೆ ತೆರಳಿ ಸಂಗ್ರಹ: ಪುಸ್ತಕ ಸಂಗ್ರಹಾ ಸಲಹಾ ಸಮಿತಿಯವರು ಮನೆ ಮನೆಗೆ ತೆರಳಿ ದಾನಿಗಳಿಂದ ಪುಸ್ತಕಗಳನ್ನು ತಂದು ಗ್ರಂಥಾಲಯದಲ್ಲಿ ಸಂಗ್ರಹಿಸುತ್ತಿದ್ದಾರೆ. ಸಂಘ-ಸಂಸ್ಥೆಗಳು ಹಾಗೂ ಗ್ರಾಪಂ ನೆರವಿನೊಂದಿಗೆ ಇದೀಗ ಬೆಲೆಬಾಳುವ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಈಗಾಗಲೇ ಈ ಪುಸ್ತಕಗಳನ್ನು ಅಧ್ಯಯನ ಮಾಡಿದ 9 ಜನರು ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರು ತಿಂಗಳ ಹಿಂದಷ್ಟೆ ಪೊಲೀಸ್‌ ಇಲಾಖೆಗೆ ಸೇರಿದ ಶ್ರೀಧರ ಬಡಿಗೇರ ಅವರನ್ನು ಮಾತನಾಡಿಸಿದಾಗ, ಹುಬ್ಬಳ್ಳಿ-ಧಾರವಾಡದ ಗ್ರಂಥಾಲಯದಲ್ಲಷ್ಟೇ ದೊರೆಯುವ ಇಂತಹ ಬೆಲೆಬಾಳುವ ಪುಸ್ತಕಗಳು ನಮ್ಮ ಗ್ರಂಥಾಲಯದಲ್ಲಿ ದೊರೆಯುತ್ತಿರುವುದು ನಮ್ಮ ಭಾಗ್ಯ ಎಂದರು.

ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ ಮೂರಪಂತಣ್ಣವರ ಮಾತನಾಡಿ, ಈ ಗ್ರಂಥಾಲಯು ನಮ್ಮಂತವರಿಗೆ ದಾರಿದೀಪವಾಗಿದೆ. ಸಮಿತಿಯವರಿಗೆ ಚಿರಋಣಿ ಆಗಿರುತ್ತೇನೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಇಲ್ಲಗಳ ಮಧ್ಯೆ ಗ್ರಾಮಸ್ಥರ ಸಹಕಾರದಿಂದಾಗಿ ಸಂಶಿ ಗ್ರಂಥಾಲಯ ಉತ್ತಮ ಗ್ರಂಥಾಲಯವಾಗಿ ಜ್ಞಾನ ಮಂದಿರವಾಗಿದೆ.

 

-ಶೀತಲ ಎಸ್‌. ಮುರಗಿ

Advertisement

Udayavani is now on Telegram. Click here to join our channel and stay updated with the latest news.

Next