Advertisement

ಓದುಗರ ಮೆಚ್ಚುಗೆ ತಾಣ ಈ ಗ್ರಂಥಾಲಯ

01:19 PM Nov 20, 2019 | Team Udayavani |

ಗದಗ: ಸ್ಥಳೀಯರ ಒತ್ತಾಯದ ಮೇರೆಗೆ ಆರಂಭಗೊಂಡಿರುವ ಇಲ್ಲಿನ ಆದರ್ಶ ನಗರದ ಬಯಲು ಆಂಜನೇಯ ದೇವಸ್ಥಾನ ಆವರಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಓದುಗರ ಮೆಚ್ಚುಗೆಯ ತಾಣವಾಗಿದೆ. ಆದರೆ, ಕೂರಲು ಸ್ಥಳದ ಅಭಾವವಿದ್ದರೂ ದೇವರ ದರ್ಶನದೊಂದಿಗೆ ಜ್ಞಾನವೂ ಸಿಗುತ್ತದೆಂದು ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಿರುವುದು ಇಲ್ಲಿನ ವಿಶೇಷ.

Advertisement

ಬಹುತೇಕ ಕಡೆ ವಿಶಾಲವಾದ ಆಲಯ, ಕೂರಲು ವ್ಯವಸ್ಥಿತವಾದ ಪೀಠೊಪಕರಣ, ಅಸಂಖ್ಯಾತ ಪುಸ್ತಕಗಳಿದ್ದರೂ ಓದುಗರ ಕೊರತೆಯೇ ಕಂಡು ಬರುತ್ತದೆ. ಆದರೆ, ಇಲ್ಲಿ ಪುಟ್ಟ ಕೊಠಡಿಯಲ್ಲೇ ಕಾರ್ಯ ನಿರ್ವಹಿಸುತ್ತಿರುವ ಈ ವಾಚನಾಲಯ ನಿತ್ಯ ನೂರಾರು ಓದುಗರಿಂದ ತುಂಬಿರುತ್ತದೆ.

ಅವಳಿ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಆದರ್ಶ ನಗರವೂ ಪ್ರಮುಖವಾದದ್ದು. ಸರಕಾರಿ ಅಧಿಕಾರಿಗಳು, ನೌಕರರು ಹಾಗೂ ಸ್ಥಿತಿವಂತರೇ ಹೆಚ್ಚು ಇಲ್ಲಿ ವಾಸಿಸುತ್ತಿದ್ದಾರೆ. ಜತೆಗೆ ಸಮೀಪದಲ್ಲೇ ವಿವಿಧ ನರ್ಸಿಂಗ್‌ ಕಾಲೇಜು, ಡಿ.ದೇವರಾಜ ಅರಸು ವಸತಿ ನಿಲಯ, ಕನಕದಾಸ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಶೈಕ್ಷಣಿಕ ಕೇಂದ್ರಗಳು ಇರುವುದರಿಂದ ನೂರಾರು ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದೆ. ಹೀಗಾಗಿ ರಜಾ ದಿನಗಳು ಸೇರಿದಂತೆ ಪ್ರತಿ ಶನಿವಾರ ಓದುಗರಿಂದ ತುಂಬಿ ತುಳುಕಿರುತ್ತದೆ ಎಂದು ಹೇಳಲಾಗಿದೆ.

ಸ್ಥಳೀಯರ ಬೇಡಿಕೆಯಿಂದ ಆರಂಭ: ಸ್ಥಳೀಯರ ಒತ್ತಾಯ ಮೇರೆಗೆ ಇದೇ ಬಡಾವಣೆಯಲ್ಲಿ ವಾಸವಿದ್ದ ಅಂದಿನ ಶಾಸಕ ಶ್ರೀಶೈಲಪ್ಪ ಬಿದರೂರ ಅವರ ಅವಧಿಯಲ್ಲಿ ಬಯಲು ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ 2011ರಲ್ಲಿ ಈ ಗ್ರಂಥಾಲಯ ಆರಂಭಿಸಲಾಗಿದೆ. ಪ್ರತಿನಿತ್ಯ ಬೆಳಗ್ಗೆ 8.30 ರಿಂದ 11 ಗಂಟೆವರೆಗೆ ಹಾಗೂ ಸಂಜೆ 4 ರಿಂದ 8 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ, ವಾರ್ಷಿಕ ಪುಸ್ತಕಗಳು, ಕಥೆ, ಕಾದಂಬರಿ, ನಾಟಕ, ಪ್ರವಾಸ ಕಥನ, ಕಾವ್ಯ ಸೇರಿದಂತೆ 3831 ಗ್ರಂಥಗಳಿವೆ. ಪ್ರತಿನಿತ್ಯ 11 ದಿನಪತ್ರಿಕೆಗಳು, 13 ಮ್ಯಾಗ್‌ಜಿನ್‌ ಪೂರೈಕೆಯಾಗುತ್ತಿವೆ.

ಓದುಗರಿಗೆ ಕೂರಲು ಜಾಗವಿಲ್ಲ: ಇಲ್ಲಿನ ಆದರ್ಶ ನಗರದಲ್ಲಿ 2011ರಲ್ಲಿ ಗ್ರಂಥಾಲಯ ಸ್ಥಾಪನೆಗಾಗಿ ಬಯಲು ಆಂಜನೇಯ ದೇವಸ್ಥಾನದಿಂದಉಚಿತ ಒಂದು ಕೊಠಡಿ ನೀಡಲಾಗಿದ್ದು, ಇಂದಿಗೂ ಅದೇ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. 8×10 ಅಳತೆಯ ಪುಟ್ಟ ಕೊಠಡಿಯಲ್ಲಿ ಪುಸ್ತಕಗಳನ್ನು ತುಂಬಿರುವ ಎರಡು ರ್ಯಾಕ್‌ ಹಾಗೂ ಒಂದು ಕಪಾಟು ಇಡಸಲಾಗಿದೆ. ಓದುಗರಿಗೆ ಎರಡು ಮೇಜು, 10 ಕುರ್ಚಿಗಳ ಪೈಕಿ ಒಂದು ಟೇಬಲ್‌ ಮತ್ತು ಮೂರು ಕುರ್ಚಿಗಳನ್ನು ಪುಸ್ತಕಗಳೇ ಆಕ್ರಮಿಸಿಕೊಂಡಿವೆ.

Advertisement

ಇನ್ನುಳಿದ 7 ಕುರ್ಚಿಗಳನ್ನು ಓದುಗರಿಗೆ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ ಏಳಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಓದುಗರಿಗೆ ಮುಂಭಾಗದ ಕಟ್ಟೆ, ಗಿಡದ ನೆರಳನ್ನೇ ಆಶ್ರಯಿಸಬೇಕು. ಹೀಗಾಗಿ ಗ್ರಂಥಾಲಯಕ್ಕೆ ಪ್ರತ್ಯೇಕ ವಿಶಾಲವಾದ ಕೊಠಡಿ ಒದಗಿಸಬೇಕು. ಇಲ್ಲವೇ ಸರಕಾರದಿಂದ ಸ್ಥಳ ಗುರುತಿಸಿಕೊಟ್ಟರೆ, ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಶಾಸಕರು, ಸಂಸದರಿಗೆ ಅನುದಾನ ಕೋರಲು ಸಾಧ್ಯವಾಗುತ್ತದೆ ಎಂಬುದು ಸ್ಥಳೀಯ ಅಭಿಪ್ರಾಯ. ಒಟ್ಟಾರೆ, ಸ್ಥಳಾಭಾವ ಹೊರತಾಗಿಯೂ ಓದುಗರಿಂದ ಉತಮ್ಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಸುಳ್ಳಲ್ಲ.

ವಾಚನಾಲಯ ತಕ್ಕ ಮಟ್ಟಿಗೆ ಚೆನ್ನಾಗಿದೆ. ಆದರೆ, ಸ್ಥಳಾವಕಾಶ ಕೊರತೆಯಿಂದ ಹೆಚ್ಚಿನ ಓದುಗರು ಕೂರಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಈ ಭಾಗದಲ್ಲಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಕನಿಷ್ಠ ಪಕ್ಷ ನಾಗರಿಕ ಮೀಸಲು ನಿವೇಶನ ಒದಗಿಸಿ ಕೊಟ್ಟರೆ, ದಾನಿಗಳ ನೆರವಿನಿಂದಾದರೂ ಕಟ್ಟಡ ನಿರ್ಮಿಸಬಹುದು. ಜಿ.ವಿ.ಮಳಲಿ, ಸ್ಥಳೀಯರು.

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next