Advertisement

Kerala:8 ವರ್ಷಗಳಿಂದ ಕೇರಳದ ಈ ಪುಟ್ಟ ಪಟ್ಟಣ ಇಸ್ರೇಲ್‌ ಪೊಲೀಸ್‌ ಪಡೆಗಾಗಿ ಕೆಲಸ ಮಾಡ್ತಿದೆ!

12:35 PM Oct 19, 2023 | ನಾಗೇಂದ್ರ ತ್ರಾಸಿ |

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧದ ಬಗ್ಗೆ ರಾಜಕೀಯ ಪಕ್ಷಗಳು, ಮುಖಂಡರು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಕ್ಟೋಬರ್‌ 7ರಂದು ಹಮಾಸ್‌ ಭಯೋತ್ಪಾದಕರು ಇಸ್ರೇಲ್‌ ನಾಗರಿಕರ ಮೇಲೆ ಮಾರಣಾಂತಿಕ ದಾಳಿಗಿಂತಲೂ ಮೊದಲು ಉತ್ತರ ಕೇರಳದ ಪುಟ್ಟ ಪಟ್ಟಣದ ಜನರ ಗುಂಪೊಂದು ಇಸ್ರೇಲ್‌ ಗಾಗಿ ಕಳೆದ ಎಂಟು ವರ್ಷಗಳಿಂದ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದೆ!

Advertisement

ಇದನ್ನೂ ಓದಿ:Leo: ಥಿಯೇಟರ್ ಸ್ಕ್ರೀನ್ ಮುಂದೆಯೇ ಹಾರ,ಉಂಗುರ ಬದಲಾಯಿಸಿಕೊಂಡ ದಳಪತಿ ಫ್ಯಾನ್ಸ್

ಇದೇನಪ್ಪಾ ಅಂತ ಹುಬ್ಬೇರಿಸುತ್ತಿದ್ದೀರಾ…ಹೌದು ಕೇರಳದ ಕಣ್ಣೂರಿನ ಸ್ಥಳೀಯ ಉಡುಪು ತಯಾರಿಕಾ ಘಟಕದ ಸಾವಿರಾರು ಮಂದಿ ಟೈಲರ್‌ ಗಳು ಇಸ್ರೇಲ್‌ ಪೊಲೀಸ್‌ ಪಡೆಗಾಗಿ ಎಂಟು ವರ್ಷಗಳಿಂದ ಸಮವಸ್ತ್ರ(ಯೂನಿಫಾರ್ಮ್)‌ ಸಿದ್ಧಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ರಾಜಕೀಯ ವಿಚಾರದಲ್ಲಿ ದಿಢೀರನೆ ಭುಗಿಲೇಳುವ ಕಣ್ಣೂರು ಸಾಂಪ್ರದಾಯಿಕ ಕೈಮಗ್ಗ ಮತ್ತು ಜವಳಿ ರಫ್ತಿಗೆ ಹೆಸರುವಾಸಿಯಾಗಿದೆ. ಜಿಲ್ಲೆಯ ಮಾರ್ಯಾನ್‌ ಅಪರೆಲ್‌ ಪ್ರೈವೇಟ್‌ ಲಿಮಿಟೆಡ್‌ ನ ಟೈಲರ್‌ ಗಳು ಮತ್ತು ಉದ್ಯೋಗಿಗಳು ಇಸ್ರೇಲ್‌ ಪೊಲೀಸ್‌ ಪಡೆಯ ತಿಳಿ ನೀಲಿ, ಉದ್ದನೆಯ ತೋಳಿನ ಸಮವಸ್ತ್ರವನ್ನು ಸಿದ್ಧಪಡಿಸುವ ಕಾಯಕದಲ್ಲಿ ತೊಡಗಿದ್ದಾರೆ.

Advertisement

ಮಾರ್ಯಾನ್‌ ಅಪರೆಲ್‌ ಕೇವಲ ಇಸ್ರೇಲ್‌ ಪಡೆಯ ಡಬಲ್‌ ಪಾಕೆಟ್‌ ಶರ್ಟ್‌, ಪ್ಯಾಂಟ್‌ ಗಳನ್ನು ಮಾತ್ರ ಸಿದ್ದಪಡಿಸುತ್ತಿಲ್ಲ, ಜತೆಗೆ ಸಮವಸ್ತ್ರದ ತೋಳಿನ ಮೇಲಿನ ಟ್ರೇಡ್‌ ಮಾರ್ಕ್‌ ಲಾಂಛನಗಳನ್ನು ಕೂಡಾ ವಿನ್ಯಾಸಗೊಳಿಸುತ್ತಿದೆ.

ಮುಂಬೈ ಮೂಲದ ಕೇರಳ ಉದ್ಯಮಿ ಥಾಮಸ್‌ ಒಲಿಕಾಲ್‌ ಎಂಬವರು ಸಮವಸ್ತ್ರ ತಯಾರಿಕಾ ಘಟಕದ ಮಾಲೀಕರಾಗಿದ್ದು, ಅಂದಾಜು 1,500ಕ್ಕೂ ಅಧಿಕ ತರಬೇತು ಪಡೆದ ನೌಕರರನ್ನು ನೇಮಿಸಿಕೊಂಡಿದ್ದಾರೆ.

ಇಡುಕ್ಕಿ ಜಿಲ್ಲೆಯ ತೊಡುಪುಳದ ಥಾಮಸ್‌ ಅವರು ಮಲಯಾಳಂ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತ, ಇಸ್ರೇಲ್‌ ಪೊಲೀಸರು ಯುದ್ಧ ಆರಂಭವಾದ ಮೇಲೂ ಕಂಪನಿಯನ್ನು ಸಂಪರ್ಕಿಸಿದ್ದು, ಹೆಚ್ಚಿನ ಸಮವಸ್ತ್ರ ತಯಾರಿಸುವಂತೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ.

ಈ ವರ್ಷ ಹೊಸ ಸಮವಸ್ತ್ರ ತಯಾರಿಕೆಗೆ ಬೇಡಿಕೆ ಇಟ್ಟಿದ್ದು, ಡಿಸೆಂಬರ್‌ ನಲ್ಲಿ ಮೊದಲ ಹಂತದ ಸಮವಸ್ತ್ರ ರಫ್ತು ಮಾಡಲಾಗುವುದು. ಪೊಲೀಸ್‌ ತರಬೇತಿಗಾಗಿ ಕಾರ್ಗೊ ಪ್ಯಾಂಟ್ಸ್‌ ಮತ್ತು ಶರ್ಟ್‌ ಒಳಗೊಂಡ ಸಮವಸ್ತ್ರಕ್ಕೆ ಬೇಡಿಕೆ ಇಟ್ಟಿರುವುದಾಗಿ ಥಾಮಸ್‌ ಅವರು ವಿವರಣೆ ನೀಡಿದ್ದಾರೆ.

“ಕಳೆದ ಎಂಟು ವರ್ಷಗಳಿಂದ ನಾವು ಪ್ರತಿ ವರ್ಷ ಒಂದು ಲಕ್ಷ ಯೂನಿಫಾರ್ಮ್‌ ಅನ್ನು ಇಸ್ರೇಲ್‌ ಪೊಲೀಸರಿಗೆ ಸರಬರಾಜು ಮಾಡುತ್ತಿದ್ದೇವೆ. ಇಸ್ರೇಲ್‌ ನಂತಹ ಬಲಿಷ್ಠ ಪೊಲೀಸ್‌ ಪಡೆಗೆ ಸಮವಸ್ತ್ರವನ್ನು ಸಿದ್ದಪಡಿಸಿ ಸರಬರಾಜು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದು ಥಾಮಸ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಸಮವಸ್ತ್ರ ರಫ್ತು ವಿಚಾರಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ ಪೊಲೀಸ್‌ ಪಡೆಯ ಪ್ರತಿನಿಧಿಗಳು ಮುಂಬೈಗೆ ಆಗಮಿಸಿ ಮಾತುಕತೆ ನಡೆಸಿದ್ದರು. ನಂತರ ಹಿರಿಯ ಅಧಿಕಾರಿಗಳು ಕಣ್ಣೂರಿನ ಫ್ಯಾಕ್ಟರಿಗೆ ಭೇಟಿ ನೀಡಿ, ವಿನ್ಯಾಸ, ಗುಣಮಟ್ಟವನ್ನು ಪರೀಕ್ಷಿಸಿದ್ದರು. ಸುಮಾರು 10 ದಿನಗಳ ಕಾಲ ಅವರು ಕೇರಳದಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಥಾಮಸ್‌ ಮಾಹಿತಿ ನೀಡಿದ್ದಾರೆ.

ಈ ಕಂಪನಿ ಸೇನೆ, ಪೊಲೀಸ್‌ ಪಡೆ, ಸೆಕ್ಯುರಿಟಿ ಆಫೀಸರ್ಸ್‌, ಹೆಲ್ತ್‌ ವರ್ಕರ್ಸ್‌ ಸೇರಿದಂತೆ ಜಾಗತಿಕವಾಗಿ ವಿವಿಧ ದೇಶಗಳಿಗೆ ಸಮವಸ್ತ್ರಗಳನ್ನು ಸಿದ್ಧಪಡಿಸಿ ರಫ್ತು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಷ್ಟೇ ಅಲ್ಲ ಶಾಲಾ ಮಕ್ಕಳ ಸಮವಸ್ತ್ರ, ಸೂಪರ್‌ ಮಾರ್ಕೆಟ್‌ ಸಿಬಂದಿಗಳ ಸಮವಸ್ತ್ರ, ವೈದ್ಯರ ಕೋಟ್‌ ಗಳನ್ನು ಸಿದ್ಧಪಡಿಸುತ್ತಿರುವುದಾಗಿ ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next