ಚಂಡೀಗಡ:ತಮ್ಮ ಕರ್ಮಭೂಮಿಯಾದ ಪಂಜಾಬ್ ರಾಜ್ಯದಲ್ಲಿ ಪಂಜಾಬಿ ಭಾಷೆಗೆ ಹೆಚ್ಚಿನ ಮಾನ್ಯತೆ ಸಿಗಬೇಕು ಎಂಬ ಉದ್ದೇಶದಿಂದ ಕಾಲೇಜು ಪ್ರೊಫೆಸರ್‌ವೊಬ್ಬರು ಹಗಲಿರುಳು ಶ್ರಮಿಸುತ್ತಿದ್ದಾರೆ. ಹಾಗಂತ, ಈ ಪ್ರೊಫೆಸರ್ ಪಂಜಾಬ್‌ನವರಲ್ಲ, ಬದಲಿಗೆ ಕರ್ನಾಟಕದವರು!
ಹೌದು, ಕರ್ನಾಟಕದ ಬಿಜಾಪುರ ಜಿಲ್ಲೆಯವರಾದ ಪಂಡಿತ್ ರಾವ್ ಧರೆನ್ನವರ್ 2003ರಲ್ಲೇ ಶಿಕ್ಷಕ ವೃತ್ತಿ ಅರಸಿ ಪಂಜಾಬ್‌ಗ ಹೋದವರು. ಪ್ರಸ್ತುತ ಅವರು ಚಂಡೀಗಡದ ಸ್ನಾತಕೋತ್ತರ ಸರ್ಕಾರಿ ಕಾಲೇಜಿನ ಸಹಾಯಕ ಪ್ರೊಫೆಸರ್.
ಅವರು ಈಗ ಪ್ರತಿದಿನ “ಎಲ್ಲರೂ ಅವರವರ ತಾಯ್ನುಡಿಗೆ ಗೌರವ ಕೊಡಬೇಕು. ನೀವೆಲ್ಲರೂ ನಿಮ್ಮ ಅಂಗಡಿಗಳ ಫಲಕಗಳಲ್ಲಿ ಆದ್ಯತೆ ಮೇರೆಗೆ ಪಂಜಾಬಿಯನ್ನೇ ಬಳಸಬೇಕು’ ಎಂದು ಬರೆದಿರುವ ಪ್ಲೆಕಾರ್ಡ್ ಹಿಡಿದು ರಾಜ್ಯಾದ್ಯಂತ ಸುತ್ತಾಡುತ್ತಿದ್ದಾರೆ. ಖಾಸಗಿ ವಿವಿಗಳಿಗೂ ಮನವಿ ಸಲ್ಲಿಸಿದ್ದಾರೆ.
ಧರೆನ್ನವರ್ ಈಗಾಗಲೇ ಸಿಖ್ ಧಾರ್ಮಿಕ ಗ್ರಂಥ “ಜಪ್‌ಜೀ ಸಾಹಿಬ್’ ಅನ್ನು ಕನ್ನಡ ಭಾಷೆಗೂ, ಕನ್ನಡದ ವಚನಗಳನ್ನು ಪಂಜಾಬಿ ಭಾಷೆಗೂ ತರ್ಜುಮೆ ಮಾಡಿದ್ದಾರೆ. ಕರ್ನಾಟಕದ ಮಾದರಿಯಲ್ಲೇ ಪಂಜಾಬ್‌ನಲ್ಲಿ ಭಾಷಾಂತರ ಕೇಂದ್ರವಿರಬೇಕು. ಶ್ರೀಮಂತ ಪಂಜಾಬಿ ಸಾಹಿತ್ಯವು ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಗೊಳ್ಳಬೇಕು ಎನ್ನುತ್ತಾರೆ ಧರೆನ್ನವರ್.
ಫೆ.21ರ ಅಂತಾರಾಷ್ಟ್ರೀಯ ತಾಯ್ನುಡಿ ದಿನಕ್ಕೂ ಮುನ್ನ ರಾಜ್ಯದ ಎಲ್ಲ ಖಾಸಗಿ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಪಂಜಾಬಿ ಭಾಷೆಯ ಫಲಕಗಳೇ ರಾರಾಜಿಸಬೇಕು. ಇದೊಂದು ಚಳವಳಿಯಾಗಿ ರೂಪುಗೊಳ್ಳಬೇಕು ಎಂದು ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಇತ್ತೀಚೆಗೆ ಕರೆ ನೀಡಿದ್ದರು.