Advertisement

ಇದೇ ನನ್ನ ಕ್ರಿಕೆಟ್‌ ಪ್ರಯಾಣದ ಪ್ರಾರಂಭ: ಅಗರ್ವಾಲ್‌

12:30 AM Jan 10, 2019 | Team Udayavani |

ಹೊಸದಿಲ್ಲಿ: “ಆಸ್ಟ್ರೇಲಿಯ ಪ್ರವಾಸ ಒಂದು ರೋಮಾಂಚಕಾರಿ ಅನುಭವ, ಇಲ್ಲಿಂದ ನನ್ನ ನಿಜವಾದ ಕ್ರಿಕೆಟ್‌ ಪ್ರಯಾಣ ಪ್ರಾರಂಭವಾಗಿದೆ’ ಎಂಬುದಾಗಿ ಟೀಮ್‌ ಇಂಡಿಯಾ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಹೇಳಿದ್ದಾರೆ.

Advertisement

“ಸರಣಿ ನಡುವೆ ಕರೆ ಪಡೆದದ್ದು, ಮೆಲ್ಬರ್ನ್ನಲ್ಲಿ ಟೆಸ್ಟ್‌ ಕ್ಯಾಪ್‌ ಪಡೆದದ್ದೆಲ್ಲ ನನ್ನ ಕ್ರಿಕೆಟ್‌ ಬದುಕಿನ ಸ್ಮರಣೀಯ ಕ್ಷಣಗಳು. ಇಲ್ಲಿಂದಲೇ ನನ್ನ ಕ್ರಿಕೆಟ್‌ ಪ್ರಯಾಣ ಆರಂಭವಾಗಿದೆ ಎಂಬುದು ನನ್ನ ನಂಬಿಕೆ’ ಎಂದು ಸಂದರ್ಶನವೊಂದರಲ್ಲಿ ಅಗರ್ವಾಲ್‌ ಹೇಳಿದರು.

“ಆಸ್ಟ್ರೇಲಿಯದಲ್ಲಿ ಕ್ರಿಕೆಟ್‌ ಆಡುವುದು ಯಾತ್ತೂ ದೊಡ್ಡ ಸವಾಲು, ವಿಭಿನ್ನ ಅನುಭವ. ಇಲ್ಲಿ ಸ್ಪರ್ಧೆ ಯಾವತ್ತೂ ತೀವ್ರವಾಗಿರುತ್ತದೆ. ಅದೊಂದು ಕ್ರಿಕೆಟಿನ ಅಗ್ರ ತಂಡಗಳಲ್ಲೊಂದು. ನಾನು ಈವರೆಗೆ ಆಡಿರುವ ಎಲ್ಲ ಕ್ರಿಕೆಟ್‌ಗಿಂತ ಇದು ವಿಭಿನ್ನ. ಪರಿಸ್ಥಿತಿ, ಒತ್ತಡಗಳೆಲ್ಲ ಟೆಸ್ಟ್‌ ಕ್ರಿಕೆಟಿನ ನೈಜ ಸೊಗಸಿಗೆ ಸಾಕ್ಷಿ. ನನ್ನ ದೇಶಿ ಕ್ರಿಕೆಟಿನ ಸಾಧನೆ ಇಲ್ಲಿ ಆಡುವಾಗ ಹೊಸ ಆತ್ಮವಿಶ್ವಾಸ ಮೂಡಿಸಿತು’ ಎಂದರು.

ಬಹಳ ನರ್ವಸ್‌ ಆಗಿದ್ದೆ…
ಪ್ಯಾಡ್‌ ಕಟ್ಟಿ, ಬ್ಯಾಟ್‌ ಹಿಡಿದು ಮೊದಲ ಸಲ ಅಂಗಳಕ್ಕಿಳಿದ ಅನುಭವವನ್ನು ಹೇಳಿಕೊಂಡ ಅಗರ್ವಾಲ್‌, ಆಗ ತಾನು ಬಹಳ ನರ್ವಸ್‌ ಆಗಿದ್ದೆ ಎಂದರು. “ಮೆಲ್ಬರ್ನ್ ಕ್ರೀಡಾಂಗಣವೆಂಬುದು ಬೃಹತ್‌ ಕೊಲೋಸಿಯಂ ಇದ್ದ ಹಾಗೆ. ಭಾರೀ ಸಂಖ್ಯೆಯ ವೀಕ್ಷಕರು. ಅವರ ಕೂಗಾಟ, ಆ ಸದ್ದು… ಬೃಹತ್‌ ಸಮಾರಂಭವೊಂದರ ಅನುಭವವಾಗುತ್ತದೆ. ಮೊದಲ ಸಲ ಅಂಗಳಕ್ಕಿಳಿದಾಗ ನಿಜಕ್ಕೂ ನರ್ವಸ್‌ ಆಗಿದ್ದೆ. ಆದರೆ, ಮಾಯಾಂಕ್‌… ನೀನು ದೊಡ್ಡ ಸಾಧನೆಗೈಯಲು ಇಲ್ಲಿ ನಿಂತಿದ್ದಿ ಎಂದು ಮನಸ್ಸು ಹೇಳುತ್ತಿತ್ತು’ ಎಂದರು.

“ಭಾರತಕ್ಕೆ ಮೊದಲು ಬ್ಯಾಟಿಂಗ್‌ ಲಭಿಸಿದ್ದು ನನ್ನ ಅದೃಷ್ಟವೆಂದೇ ಹೇಳಬೇಕು. ಆಗ ಯಾವುದೇ ಒತ್ತಡ ಇರುವುದಿಲ್ಲ. ಕ್ರೀಸಿನಲ್ಲಿ ನಿಂತು ಕೆಲವು ಎಸೆತಗಳನ್ನು ಎದುರಿಸಿದ ಬಳಿಕ ಹಿಂಜರಿಕೆ ನಿಧಾನವಾಗಿ ಕರಗತೊಡಗಿತು. ಎಸೆತಗಳ ಯೋಗ್ಯತೆ ನೋಡಿ ಬ್ಯಾಟಿಂಗ್‌ ನಡೆಸುತ್ತ ಹೋದೆ. ನನ್ನ ಕ್ರಿಕೆಟ್‌ ಪ್ರಯಾಣ ಆರಂಭಗೊಂಡಿತ್ತು…’ ಎಂದರು ಮಾಯಾಂಕ್‌.

Advertisement

ಟಿಪ್ಸ್‌ ನೀಡಿದ ರಾಹುಲ್‌
ಕರ್ನಾಟಕದ “ರನ್‌ ಯಂತ್ರ’ವೆಂದೇ ಗುರುತಿಸಲ್ಪಟ್ಟಿರುವ ಮಾಯಾಂಕ್‌ ಅಗರ್ವಾಲ್‌, ರಾಜ್ಯದ ಮತ್ತೋರ್ವ ಆಟಗಾರ ಕೆ.ಎಲ್‌. ರಾಹುಲ್‌ ಅವರ ವೈಫ‌ಲ್ಯದಿಂದಾಗಿ ತಂಡದಲ್ಲಿ ಸ್ಥಾನ ಸಂಪಾದಿಸಿದ್ದರು. ಈ ಸಂದರ್ಭದಲ್ಲಿ ರಾಹುಲ್‌ ಕುರಿತು ಪ್ರಶಂಸೆ ವ್ಯಕ್ರಪಡಿಸಿದ ಅಗರ್ವಾಲ್‌, ತಾವಿಬ್ಬರು ಉತ್ತಮ ಗೆಳೆಯರು ಎಂದರು.

“ಒಟ್ಟಿಗೇ ಕಾಫಿಗೆ ಹೋದಾಗ ರಾಹುಲ್‌ ಆಸ್ಟ್ರೇಲಿಯದ ಬೌಲಿಂಗ್‌ಆ ಕ್ರಮಣ, ಅವರ ಯೋಜನೆ, ಅವರು ಚೆಂಡೆಸುವ ಏರಿಯಾ ಬಗ್ಗೆ ಕೂಲಂಕಷವಾಗಿ ಹೇಳಿದರು. ನನ್ನನ್ನು ಟಾರ್ಗೆಟ್‌ ಮಾಡುವ ಕುರಿತೂ ಎಚ್ಚರಿಸಿದರು. ಎಲ್ಲರೂ ನನ್ನನ್ನು ತಂಡಕ್ಕೆ ಸ್ವಾಗತಿಸಿದರು. ಡ್ರೆಸ್ಸಿಂಗ್‌ ರೂಮ್‌ ವಾತಾವರಣ ಅತ್ಯಂತ ಆಹ್ಲಾದಕರವಾಗಿತ್ತು. ಹೀಗಾಗಿ ಉತ್ತಮ ಎನ್ನಬಹುದಾದ ಆರಂಭ ಪಡೆಯಲು ಸಾಧ್ಯವಾಯಿತು’ ಎಂದು ಹೇಳಿದರು.

ಶತಕ ತಪ್ಪಿದ ಬೇಸರ…
“ಎರಡೂ ಟೆಸ್ಟ್‌ಗಳಲ್ಲಿ ನನಗೆ ಶತಕ ಬಾರಿಸುವ ಅವಕಾಶ ಎದುರಾಗಿತ್ತು. ಇದು ತಪ್ಪಿದಾಗ ಬೇಸರವಾದದ್ದು ಸಹಜ. ಮೆಲ್ಬರ್ನ್ನಲ್ಲಿ 70ರ ಗಡಿ ದಾಟಿ ಔಟಾದಾಗ ಅಷ್ಟೊಂದು ನಿರಾಶೆ ಆಗಿರಲಿಲ್ಲ. ಆದರೆ ಸಿಡ್ನಿಯಲ್ಲಿ ಔಟಾದ ರೀತಿಯಿಂದ ನಿಜಕ್ಕೂ ಬೇಸರವಾಯಿತು. ಲಿಯೋನ್‌ ಅವರನ್ನು ಕೌಂಟರ್‌ ಮಾಡುವುದು ನನ್ನ ಯೋಜನೆಯಾಗಿತ್ತು. ಆದರೆ ಇದು ವಿಫ‌ಲವಾಯಿತು. ಹೋಗಲಿ, ಇವೆಲ್ಲ ನನ್ನ ಪಾಲಿಗೆ ಪಾಠಗಳಾಗಿವೆ’ ಎಂಬುದಾಗಿ ಅಗರ್ವಾಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next