Advertisement

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

02:18 PM Nov 29, 2024 | Team Udayavani |

ಹೊಸದಿಲ್ಲಿ: ಚಾಂಪಿಯನ್ಸ್ ಟ್ರೋಫಿ (Champions Trophy) ಗಾಗಿ ಪಾಕಿಸ್ತಾನಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸದಿರುವ ಭಾರತದ ನಿರ್ಧಾರದ ಕುರಿತಾದ ಗಲಾಟೆ ರಾಜಕೀಯ ವಲಯದಲ್ಲಿ ಪ್ರತಿಧ್ವನಿಸಿದೆ. ಹಲವಾರು ವಿರೋಧ ಪಕ್ಷದ ನಾಯಕರು ಕ್ರೀಡೆಯಿಂದ ರಾಜಕೀಯವನ್ನು ದೂರವಿಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.

Advertisement

ಇದೀಗ ಆರ್‌ ಜೆಡಿ ನಾಯಕ, ಮಾಜಿ ಕ್ರಿಕೆಟಿಗ ತೇಜಸ್ವಿ ಯಾದವ್‌ ಕೂಡಾ ಈ ಬಗ್ಗೆ ಮಾತನಾಡಿದ್ದು, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಬಹುದಾದರೆ, ಬಹುರಾಷ್ಟ್ರಗಳ ಪಂದ್ಯಾವಳಿಗಾಗಿ ತಂಡವು ಗಡಿ ದಾಟಿ ಯಾಕೆ ಹೋಗಬಾರದು” ಎಂದು ಪ್ರಶ್ನಿಸಿದ್ದಾರೆ.

“ಕ್ರೀಡೆಯಲ್ಲಿ ರಾಜಕೀಯ ಬೇಡ, ಅವರು (ಪಾಕಿಸ್ತಾನ) ನಮ್ಮ ದೇಶಕ್ಕೆ ಬರಬೇಕು, ನಮ್ಮ ಆಟಗಾರರೂ ಅಲ್ಲಿಗೆ ಹೋಗಬೇಕು. ಕ್ರೀಡೆಗೆ ಏನು ತೊಂದರೆ? ಕ್ರೀಡೆಯಲ್ಲಿ ಯುದ್ಧವೇನು ನಡೆಯುತ್ತಿಲ್ಲವಲ್ಲ. ಭಾರತ ಯಾಕೆ ಹೋಗಬಾರದು? ಪ್ರಧಾನಿ ಮೋದಿಯವರು ಪಾಕಿಸ್ತಾನಕ್ಕೆ ಬಿರಿಯಾನಿ ತಿನ್ನಲು ಹೋದರೆ ಅದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ, ಆದರೆ ಭಾರತ ತಂಡವು ಪಾಕಿಸ್ತಾನಕ್ಕೆ ಆಡಲು ಹೋದರೆ, ಅದನ್ನು ತಪ್ಪಾಗಿ ನೋಡಲಾಗುತ್ತದೆ. ಇದು ಸರಿಯಲ್ಲ” ಎಂದು ರಾಜ್ಯ ಮಟ್ಟದ ಕ್ರಿಕೆಟ್‌ನಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸಿರುವ ತೇಜಸ್ವಿ ಹೇಳಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ತೆರಳಲು ಭಾರತ ನಿರಾಕರಿಸಿದೆ. ಹೀಗಾಗಿ ಇದೀಗ ಟೂರ್ನಿಯ ಪಾಕಿಸ್ತಾನದಲ್ಲಿ ನಡೆಯುವುದು ಅನುಮಾನವಾಗಿದೆ. ಭಾರತವು ತನ್ನ ಪಂದ್ಯಗಳಿಗೆ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಿದೆ. ಅದರನ್ವಯ ತಟಸ್ಥ ಸ್ಥಳವಾದ ಶ್ರೀಲಂಕಾ ಅಥವಾ ಯುಎಇನಲ್ಲಿ ಭಾರತ ಪಂದ್ಯ ನಡೆಸಲು ಕೇಳಿಕೊಂಡಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದನ್ನು ಒಪ್ಪುತ್ತಿಲ್ಲ. ಬಿಕ್ಕಟ್ಟನ್ನು ಕೊನೆಗೊಳಿಸಲು ಐಸಿಸಿ ಶುಕ್ರವಾರ ಎಲ್ಲಾ ಪ್ರಮುಖ ಮಂಡಳಿಯ ಸಭೆಗೆ ಕರೆದಿದೆ.

ಭಾರತ ಕ್ರಿಕೆಟ್ ತಂಡ 2008ರಲ್ಲಿ ಏಷ್ಯಾಕಪ್‌ ಗಾಗಿ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಸಾಂಪ್ರದಾಯಿಕ ವೈರಿಗಳು ಕೊನೆಯ ಬಾರಿಗೆ 2012-13ರಲ್ಲಿ ಭಾರತದಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿದ್ದರು. ಆದಾಗ್ಯೂ, ರಾಜಕೀಯ ಸಂಬಂಧಗಳ ಹದಗೆಟ್ಟ ನಂತರ ಉಭಯ ತಂಡಗಳು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next