ಪ್ರವಾಸದ ದಿನಕ್ಕಿಂತ ಮೊದಲ ಎರಡು ದಿನಗಳ ನಿದ್ದೆ, ಪ್ರವಾಸದ ಬಗೆಗಿನ ಕನಸುಗಳಿಗೇ ಅರ್ಪಿತವಾಗಿತ್ತು. ಅವ್ವ ಪ್ರವಾಸದ ದಿನ ನಾಲ್ಕು ಗಂಟೆಗೆ ಅರಿಶಿನ ಬಣ್ಣದ ಚಿತ್ರಾನ್ನ ಮಾಡಿ, ನನ್ನ ಮೈ ತೊಳೆಸಿ, ದೀಪಾವಳಿಗೆ ತಂದಿದ್ದ ಹೊಸ ಅಂಗಿ ತೋಡಿಸಿ, ಕ್ರಾಪ್ ಬಾಚಿ ಶಾಲೆಯ ಅಂಗಳಕ್ಕೆ ತಂದು ನಿಲ್ಲಿಸಿ, ಕೈಯಲ್ಲಿ ಎರಡು ರೂಪಾಯಿ ಕೊಟ್ಟು ಹೋಗಿದ್ದಳು.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತಿದು. ನಾನು ಐದನೆಯ ತರಗತಿಯಲ್ಲಿದ್ದಾಗ, ಜೋಗ ಜಲಪಾತಕ್ಕೆ ನಮ್ಮ ಶಾಲೆಯಿಂದ ಒಂದು ದಿನದ ಪ್ರವಾಸ ಹೊರಟಿದ್ದೆವು. ಪ್ರವಾಸದ ಮೊತ್ತವಾಗಿ ಮೂವತ್ತು ರೂಪಾಯಿ ಕೊಡಬೇಕಿತ್ತು. ಅಷ್ಟೊಂದು ಹಣ ಕೊಡಲಾಗದು ಎಂದು ಮನೆಯಲ್ಲಿ “ನೀನು ಹೋಗುವುದು ಬೇಡ’ ಅಂದುಬಿಟ್ಟರು. ನಾನು ಹೋಗಲೇಬೇಕು ಎಂದ ಹಠ ಹಿಡಿದು ಕುಳಿತೆ.
ಮೂವತ್ತು ರೂಪಾಯಿ ಪಡೆಯಲು ಮನೆಯಲ್ಲಿ ಒಂದು ವಾರ ಮುಷ್ಕರ ಹೂಡಿದ್ದೆ. ಮೈಯೊಳಗೆ ದೆವ್ವ ಮೆಟ್ಟಿಕೊಂಡವನಂತೆ ಆಡುತ್ತಿದ್ದೆ. ಮನೆಯಲ್ಲಿ ಮೂವತ್ತು ರೂಪಾಯಿಗೂ ಕಷ್ಟವಿತ್ತು ಎಂಬುದು ನನಗೆ ಆಗ ಅರ್ಥವಾಗಿರಲಿಲ್ಲ. ಯಾವಾಗ ಕನಸಿನಲ್ಲೂ “ನಾನೂ ಟೂರ್ ಹೋಗ್ಬೇಕು… ಹೂಂ ಹೂಂ…’ ಎಂದು ಕನವರಿಸಲು ಆರಂಭಿಸಿದೆನೋ, ಅದನ್ನು ನೋಡಲಾಗದೆ, ಅವ್ವ ಯಾರದೋ ಬಳಿ ಸಾಲ ಮಾಡಿ ಮೂವತ್ತು ರೂಪಾಯಿ ಹೊಂದಿಸಿ, ನನ್ನ ಬದುಕಿನ ಮೊದಲ ಪ್ರವಾಸ ಮತ್ತು ಮರೆಯದ ಅದ್ಭುತ ಪ್ರವಾಸಕ್ಕೆ ಕಳಿಸಿದ್ದಳು.
ದುಡ್ಡಿಗಾಗಿ ಹಠ ಮಾಡಿದ್ದರಿಂದ ಹಿಡಿದು, ಪ್ರವಾಸ ಮುಗಿಸಿಕೊಂಡು ಚಿತ್ರಾನ್ನದ ಖಾಲಿ ಬಾಕ್ಸನ್ನು ತಂದು ಮನೆಯಲ್ಲಿಡುವವರೆಗಿನ ಎಲ್ಲ ಘಟನೆಗಳೂ ಮಬ್ಟಾಗದಂತೆ ಇನ್ನೂ ನೆನಪಿನಲ್ಲಿವೆ. ನಮ್ಮ ಊರಿಂದ ಅಷ್ಟೊಂದು ದೂರಕ್ಕೆ ಬಸ್ಸಿನಲ್ಲಿ ಹೋಗಿದ್ದು ಅದೇ ಮೊದಲು. ಪ್ರವಾಸದ ದಿನಕ್ಕಿಂತ ಮೊದಲ ಎರಡು ದಿನಗಳ ನಿದ್ದೆ, ಪ್ರವಾಸದ ಬಗೆಗಿನ ಕನಸುಗಳಿಗೇ ಅರ್ಪಿತವಾಗಿತ್ತು. ಅವ್ವ ಪ್ರವಾಸದ ದಿನ ನಾಲ್ಕು ಗಂಟೆಗೆ ಅರಿಶಿನ ಬಣ್ಣದ ಚಿತ್ರಾನ್ನ ಮಾಡಿ, ನನ್ನ ಮೈ ತೊಳೆಸಿ, ದೀಪಾವಳಿಗೆ ತಂದಿದ್ದ ಹೊಸ ಅಂಗಿ ತೋಡಿಸಿ, ಕ್ರಾಪ್ ಬಾಚಿ ಶಾಲೆಯ ಅಂಗಳಕ್ಕೆ ತಂದು ನಿಲ್ಲಿಸಿ, ಕೈಯಲ್ಲಿ ಎರಡು ರೂಪಾಯಿ ಕೊಟ್ಟು ಹೋಗಿದ್ದಳು. ಇಡೀ ಪ್ರವಾಸದಲ್ಲಿ ನಾವೇ ಕಿರಿಯರು. ಬಸ್ ಬಂದು ಶಾಲಾ ಅಂಗಳದಲ್ಲಿ ನಿಂತಾಗಲಂತೂ ನಮ್ಮ ಉತ್ಸಾಹ ತುಂಬಿ ತುಳುಕುತ್ತಿತ್ತು. ಸಣ್ಣ ಹುಡುಗರು ಅಂತ ಐದೈದು ಮಕ್ಕಳಿಗೆ ಒಂದು ಸೀಟ್‌ನಲ್ಲಿ ಕೂರಬೇಕಿತ್ತು. ಕೈಯಲ್ಲಿ ತಿಂಡಿ ಬಾಕ್ಸ್, ಓಡುವ ಬಸ್, ರಾಜಕುಮಾರ್ ಅವರ ಸಿನಿಮಾ ಹಾಡುಗಳು, ನಮ್ಮ ಮೇಲಿನ ತರಗತಿಯ ಅಣ್ಣಂದಿರು ಕೂಗುತ್ತಿದ್ದ ಪ್ರವಾಸದ ಘೋಷಣೆಗಳು, ನುಗ್ಗಿ ಬರುತ್ತಿದ್ದ ತಂಗಾಳಿ, ಹಿಂದಕ್ಕೆ ಓಡುತ್ತಿದ್ದ ಮರಗಿಡಗಳು… ಇವೆಲ್ಲವೂ ನಮಗೆ ಹೊಸದು. ಬಸ್ಸು ಹೊರಟ ಅರ್ಧ ಗಂಟೆಗೆ ನಾವು ಚಿತ್ರಾನ್ನದ ಬಾಕ್ಸ್ ತೆಗೆದು ತಿನ್ನಲು ಆರಂಭಿಸಿದ್ದೆವು.
ಭೋರ್ಗರೆದು ಸುರಿಯುತ್ತಿರುವ ನೀರಿನ ಮುಂದೆ ನಿಲ್ಲಿಸಿ, “ನೋಡಿ, ಇದೇ ಜೋಗ್ ಜಲಪಾತ’ ಅಂದರು ಮೇಷ್ಟ್ರು. ಬರೀ ಮಂಜು ಮಂಜು, ಹಸಿರು ಹಸಿರು ನೀರು ಮೇಲಿಂದ ಬಂದು ಕೆಳಕ್ಕೆ ಸುರಿಯುತ್ತಿತ್ತು. ಎಷ್ಟು ಸುರಿದರೂ ಒಂದಿಷ್ಟೂ ಖಾಲಿಯಾಗದೆ ಸುರಿಯುತ್ತಿತ್ತು. ಇಷ್ಟೊಂದು ನೀರು ಕೆಳಗೆ ಬೀಳುತ್ತಿದೆಯಲ್ಲ, ಮೇಲೆ ಎಷ್ಟು ನೀರು ಇರಬಹುದು, ಅಲ್ಲಿಗೆ ಎಲ್ಲಿಂದ ನೀರು ಬರುತ್ತದೆ ಅನ್ನೋದು ನಮಗೆ ಆಗ ಯಕ್ಷ ಪ್ರಶ್ನೆಯಾಗಿತ್ತು.
ಮೊದಲ ಬಾರಿ ನಾನು ಫೋಟೋಗೆ ಪೋಸ್ ಕೊಟ್ಟಿದ್ದೂ ಅವತ್ತೇ. ನಮ್ಮ ಸರ್, ಹುಡುಗರು- ಹುಡುಗಿಯರನ್ನು ಸಾಲಾಗಿ ನಿಲ್ಲಲು, ಕೂರಲು ಹೇಳಿ, ತಾವು ದೂರದಲ್ಲಿ ನಿಂತು ತಮ್ಮ ಕ್ಯಾಮರಾದ ಕಡೆಗೆ ನೋಡಲು ಹೇಳಿ, ಬಟನ್ ಒತ್ತಿ, ಫಳಕ್ ಅನಿಸಿದ್ದರು. ಅವತ್ತು ಎಲ್ಲರೂ ಒಟ್ಟಾಗಿ ಕೂತು ಊಟ ಮಾಡಿದೆವು. ಅಲ್ಲಿಯೇ ಆಟ, ಹಾಡು, ಕುಣಿತ. ಹತ್ತಿರದ ಬೇರೆ ಸ್ಥಳಗಳನ್ನು ನೋಡಿ, ಮನೆಗೆ ಮರಳುವಾಗ ರಾತ್ರಿ ಹನ್ನೆರಡು ಗಂಟೆ.
ಸಾವಿರಾರು ರೂಪಾಯಿಗಳ ಪ್ಯಾಕೇಜ್ ಟೂರ್, ಗೆಳೆಯರೊಂದಿಗೆ ದೇಶದ ಗಡಿ ಮೀರಿದ ಅದ್ದೂರಿ ಪ್ರವಾಸ, ಹಿಮಾಲಯದ ತಪ್ಪಲಿನಲ್ಲಿ ನಿಂತು ಕೂಗಿದ ಆರ್ಭಟ… ಇವ್ಯಾವೂ ಕೂಡ ಆ ಮೂವತ್ತು ರೂಪಾಯಿ ಪ್ರವಾಸವನ್ನು ಮೀರಿಸಲಾರವು. ಈಗ ನಾನು ಶಿಕ್ಷಕನಾಗಿ, ಶಾಲೆಯ ಮಕ್ಕಳೊಂದಿಗೆ ಪ್ರವಾಸ ಹೊರಟಿದ್ದೇನೆ. ಮಕ್ಕಳ ಉತ್ಸಾಹವನ್ನು ನೋಡಿದಾಗ, ನನ್ನ ಬಾಲ್ಯದ ಮೊದಲ ಪ್ರವಾಸ ನೆನಪಾಯ್ತು.
ಸದಾಶಿವ್ ಸೊರಟೂರು