Advertisement

ಇದೇ ಮೊದಲ ಬಾರಿಗೆ ಜ.15ಕ್ಕೆ ಮಕರ ಸಂಕ್ರಾಂತಿ

11:14 PM Jan 14, 2020 | mahesh |

ಗೋಳಿಯಂಗಡಿ: ನಾಗಲೋಕದ ದೊರೆ ಶಂಖ ಚೂಡನ ಐವರು ಪುತ್ರಿಯರ ಪೈಕಿ ಒಬ್ಬಳಾದ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಿ ನೆಲೆಸಿರುವ ಶ್ರೀ ಕ್ಷೇತ್ರ ನಾಗೇರ್ತಿಯಲ್ಲಿ ಶ್ರೀ ಮಕರ ಸಂಕ್ರಮಣ ದಿನವಾದ ಜ.15ರಂದು ವಾರ್ಷಿಕ ಜಾತ್ರೋತ್ಸವದ ಸಂಭ್ರಮ. ಮಾರಣಕಟ್ಟೆ ಸೇರಿದಂತೆ ನಾಗೇರ್ತಿ, ಅರಸಮ್ಮನಕಾನು ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಜ. 14ರ ಬದಲು ಒಂದು ದಿನ ತಡವಾಗಿ ಜಾತ್ರೆ ನಡೆಯುತ್ತಿದೆ. ಹಿಂದೂ ಧರ್ಮದ ಗಣಿತ ಪದ್ಧತಿ ಪ್ರಕಾರ ಇದೇ ಮೊದಲು ಜ.15ಕ್ಕೆ ಮಕರ ಸಂಕ್ರಾಂತಿ ನಡೆಯುತ್ತಿರುವುದು ವಿಶೇಷ.

Advertisement

ಅರಸಮ್ಮನ ಕಾನುವಿನಲ್ಲಿ ದೇವರತಿ ದೇವಿ, ಚೋರಾಡಿಯಲ್ಲಿ ಚಾರುರತಿ, ನಾಗೇರ್ತಿಯಲ್ಲಿ ನಾಗರತಿ, ಮಂದಾರ್ತಿ ಯಲ್ಲಿ ಮಂದಾರತಿ ಹಾಗೂ ನೀಲಾವರ ಕ್ಷೇತ್ರದಲ್ಲಿ ನೀಲರತಿ ಹೀಗೆ ನಾಗ ಲೋಕದ ದೊರೆ ಶಂಖ ಚೂಡನ ಪುತ್ರಿಯರಾದ ಪಂಚ ಕನ್ಯೆಯರು ಭೂಲೋಕದ ಐದು ಕಡೆಗಳಲ್ಲಿ ಭಕ್ತರನ್ನು ಉದ್ಧರಿಸುವ ಸಲುವಾಗಿ ನೆಲೆ ನಿಲ್ಲುತ್ತಾರೆ. ಈ ಐವರ ಪೈಕಿ ದೇವರತಿ ಹಾಗೂ ನಾಗೇರ್ತಿ ದೇವಿಗೆ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ವಾರ್ಷಿಕ ಉತ್ಸವ ನೆರವೇರುತ್ತದೆ.

ತೊಟ್ಟಿಲು ಕಟ್ಟದ ಊರು ನಾಗೇರ್ತಿ
ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಿ ನೆಲೆ ನಿಂತಿರುವ ಹಿಲಿಯಾಣ ಗ್ರಾಮದ ನಾಗೇರ್ತಿಯು ತೊಟ್ಟಿಲು ಕಟ್ಟದ ಊರು ಎಂದೇ ಪ್ರಸಿದ್ಧಿ ಪಡೆದಿದೆ. ಈ ಊರಿನ ಮಕ್ಕಳಿಗೆ ತೊಟ್ಟಿಲು ಕಟ್ಟಿದರೆ ಹಾವು ಅಂದರೆ ನಾಗೇರ್ತಿ ದೇವಿ ಪ್ರತ್ಯಕ್ಷವಾಗುತ್ತಾಳೆ ಎನ್ನುವ ಪ್ರತೀತಿಯಿದೆ. ಇದು ನಿಜವಾಗಿದ್ದೂ ಇದೆ ಎನ್ನುತ್ತಾರೆ ಊರವರು.

ಮಕ್ಕಳಿಗೆ ವಿಶೇಷ ಪ್ರಾಶಸ್ತ್ಯ
ನಾಗೇರ್ತಿಯಲ್ಲಿ ವಾರ್ಷಿಕ ಜಾತ್ರೋತ್ಸವ ವೇಳೆ 6 ವರ್ಷದೊಳಗಿನ ಮಕ್ಕಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತಿದೆ.

ಜ.15 ಕ್ಕೆ ಏಕೆ ಸಂಕ್ರಾಂತಿ?
ಪ್ರತಿ ವರ್ಷ ಮಕರ ಸಂಕ್ರಾಂತಿ ಜ.14ಕ್ಕೆ ನಡೆಯುತ್ತಿತ್ತು. ಆದರೆ ಈ ವರ್ಷ ಜ. 15ಕ್ಕೆ ಸಂಕ್ರಾಂತಿ ನಡೆಯುತ್ತಿದೆ. ಹಿಂದೂ ಗಣಿತ ಪದ್ಧತಿ ಪ್ರಕಾರ ಇದೇ ಮೊದಲ ಬಾರಿಗೆ ಜ.15ಕ್ಕೆ ಸಂಕ್ರಾಂತಿ ನಡೆಯುತ್ತಿದೆ. 1989 ರಲ್ಲಿ ಜ.13ಕ್ಕೆ, 130 ವರ್ಷಗಳ ಹಿಂದೆ ಜ.12ಕ್ಕೆ ಮಕರ ಸಂಕ್ರಾಂತಿ ನಡೆದಿದೆ. ಮಕರ ಸಂಕ್ರಾಂತಿಯೆಂದರೆ ಮಕರಕ್ಕೆ ರವಿ ಹೋಗುವುದು ಎಂದರ್ಥ. ಅದು ಈ ಬಾರಿ ಜ.15ಕ್ಕೆ ನಡೆಯುತ್ತಿದೆ. ಭಾರತೀಯ ಗಣಿತ ಪದ್ಧತಿ ಹಾಗೂ ಇಂಗ್ಲಿಷರ ಕ್ಯಾಲೆಂಡರ್‌ಗೆ ಸಂಬಂಧವಿಲ್ಲದ್ದರಿಂದ ಈ ರೀತಿಯ ವ್ಯತ್ಯಾಸವಾಗುತ್ತಿದೆ. ಇನ್ನು ಮುಂದಿನ 20 ವರ್ಷದ ಅನಂತರ ಜ.15ಕ್ಕೆ ಪ್ರತಿ ವರ್ಷ ಮಕರ ಸಂಕ್ರಾಂತಿ ನಡೆಯಬಹುದು. ನಮ್ಮ ಗಣಿತ ಪದ್ಧತಿ ಸೂರ್ಯ, ಚಂದ್ರರ ಚಲನವಲನವನ್ನು ಅವಲಂಬಿಸಿರುವುದರಿಂದ ಅದರ ಆಧಾರದಲ್ಲೇ ಇದು ನಿರ್ಧಾರವಾಗುತ್ತದೆ.
– ವಾಸುದೇವ ಜೋಯಿಸರು, ತಟ್ಟುವಟ್ಟು ಪಂಚಾಂಗಕರ್ತ, ಹಾಲಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next