Advertisement

ಇದು ರಸ್ತೆಯೋ ಮಳೆ ನೀರಿನ ಹೊಳೆಯೋ?

10:26 PM Jun 14, 2019 | mahesh |

ಸುಬ್ರಹ್ಮಣ್ಯ: ಜಿಲ್ಲೆಯ ವಿವಿಧೆಡೆ ಮಳೆಗಾಲದ ತಯಾರಿಯನ್ನು ಇಲಾಖೆಗಳು ನಡೆಸಿಲ್ಲ ಎಂಬ ಅಂಶ ಆರಂಭದ ಮಳೆಗೇ ಮನದಟ್ಟಾಗಿದೆ. ಬಹುತೇಕ ರಸ್ತೆಗಳು ಚರಂಡಿ ಕಾಣದೆ ಮಳೆನೀರು ರಸ್ತೆಯಲ್ಲಿ ಹರಿಯುತ್ತಿದೆ. ಅಲ್ಲಲ್ಲಿ ರಸ್ತೆ ಬದಿ ಮರ ಉರುಳಿ ಸಂಚಾರಕ್ಕೂ ಅಡಚಣೆ ಉಂಟು ಆಗುತ್ತಿದೆ.

Advertisement

ಎಲ್ಲ ರಾಜ್ಯ ಹೆದ್ದಾರಿ ಸಹಿತ ಬಹುತೇಕ ರಸ್ತೆಗಳ ನಿರ್ವಹಣೆಯನ್ನು ಲೊಕೋಪಯೋಗಿ ಇಲಾಖೆ ಸಂಪೂರ್ಣ ನಿರ್ಲಕ್ಷಿಸಿದೆ. ಮಾನ್ಸೂನ್‌ ಪೂರ್ವ ಮಳೆ ಆರಂಭಗೊಂಡು ಮಳೆಗಾಲದ ಮುನ್ಸೂಚನೆ ನೀಡಿ ಮಳೆ ಬಿರುಸು ಪಡೆದು ಸುರಿದರೂ ಇಲಾಖೆ ಇನ್ನೂ ಎಚ್ಚರವಾದಂತಿಲ್ಲ.

ಮೈಸೂರು- ಸುಳ್ಯ- ಮಡಿಕೇರಿ, ಜಾಲೂರು- ಸುಬ್ರಹ್ಮಣ್ಯ, ಸುಳ್ಯ- ಗುತ್ತಿಗಾರು- ಸುಬ್ರಹ್ಮಣ್ಯ, ಬೆಳ್ಳಾರೆ- ಪಂಜ- ಸುಬ್ರಹ್ಮಣ್ಯ, ಸುಬ್ರಹ್ಮಣ್ಯ- ಪಂಜ- ಕಾಣಿಯೂರು ಇತ್ಯಾದಿ ರಾಜ್ಯ ಹೆದ್ದಾರಿಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲದೆ ಭಾರೀ ಪ್ರಮಾಣದಲ್ಲಿ ನೀರು ರಸ್ತೆಯಲ್ಲೇ ದಾಸ್ತಾನು ಆಗುವುದರ ಜತೆಗೆ ರಸ್ತೆ ಎರಡೂ ಬದಿ ಮರದ ರೆಂಬೆಗಳನ್ನು ಕತ್ತರಿಸದೆ ಅಪಾಯ ಆಹ್ವಾನಿಸುವಂತಿದೆ.

ಸುಳ್ಯ – ಸುಬ್ರಹ್ಮಣ್ಯ ರಸ್ತೆ ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ರಸ್ತೆಗೆ ಗುಡ್ಡದ ನೀರು ಹರಿದು ರಸ್ತೆಯಲ್ಲೆ ಹೂಳು ತುಂಬಿಕೊಂಡಿದೆ. ಅಲ್ಲಲ್ಲಿ ಮರಗಳು ರಸ್ತೆಗೆ ಬಾಗಿಕೊಂಡು ಅಪಾಯದ ಸ್ಥಿತಿ ಇದೆ. ವಾಹನ ಸಂಚಾರರರಲ್ಲಿ ಭೀತಿ ಹುಟ್ಟಿಸುತ್ತಿದೆ.

ಈ ಹಿಂದೆ ರಸ್ತೆ ನಿರ್ವಹಣೆಗೆ ಗ್ಯಾಂಗ್‌ಮನ್‌ಗಳನ್ನು ನೇಮಿಸುತ್ತಿದ್ದ ಲೋಕೋಪಯೋಗಿ ಇಲಾಖೆ ಈ ವ್ಯವಸ್ಥೆಯನ್ನು ಸಂಪೂರ್ಣ ಕೈಬಿಟ್ಟಿದೆ. ಇಲಾಖೆಯೂ ರಸ್ತೆ ನಿರ್ವಹಣೆ ಕಾರ್ಯ ನಡೆಸುತ್ತಿಲ್ಲ. ರಸ್ತೆ ನಿರ್ವಹಣೆಗೆ ಸ್ಥಳಿಯ ಆಡಳಿತವನ್ನು ಆಶ್ರಯಿಸಬೇಕಾದ ದುರ್ಗತಿ ಒದಗಿ ಬಂದಿದೆ. ಸಮಸ್ಯೆ ಬಂದಾಗ ಲೋಕೋಪಯೋಗಿ ಇಲಾಖೆ ಸ್ಥಳೀಯಾಡಳಿತದ ಕಡೆ ಸ್ಥಳೀಯಾಡಳಿತ ಪಿಡಬ್ಲ್ಯುಡಿ ಕಡೆಗೆ ಬೆರಳು ತೋರಿಸುತ್ತಿದ್ದಾರೆ.

Advertisement

ಗುಡ್ಡ ಪ್ರದೇಶದಿಂದ ಮಳೆ ನೀರಿನ ಜತೆ ಕಲ್ಲು, ಮಣ್ಣುಗಳು ರಸ್ತೆಗೆ ಹರಿಯುತ್ತವೆ. ರಸ್ತೆ ಮಧ್ಯೆ ಅಲ್ಲಲ್ಲಿ ಕೆಸರು ಮಣ್ಣು ಸಂಗ್ರಹಗೊಳ್ಳುತ್ತದೆ. ಮಳೆಗೆ ತಗ್ಗು ಪ್ರದೇಶಗಳತ್ತ ನೀರು ಹರಿದು ರಸ್ತೆಗಳು ಕೆರೆಗಳಾಗಿ ಪರಿವರ್ತನೆ ಆಗುತ್ತಿದೆ. ರಸ್ತೆ ಎರಡು ಬದಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಸಂಚಾರದಲ್ಲಿ ಭಾರೀ ವ್ಯತ್ಯಯ ಜತೆಗೆ ಅಪಾಯಕ್ಕೂ ಆಹ್ವಾನ ನೀಡುತ್ತದೆ. ರಸ್ತೆ, ಹೊಳೆ ಯಾವುದು ಎನ್ನುವ ಅನುಮಾನ ಬರುತ್ತದೆ.

ಇಲಾಖೆ ಚರಂಡಿ ನಿರ್ವಹಣೆ, ರೆಂಬೆ ತೆರವಿಗೆ ಪ್ರತ್ಯೇಕ ಫ‌ಂಡ್‌ ಲಭ್ಯವಾಗುತ್ತಿಲ್ಲ ಎಂಬ ನೆಪವೊಡ್ಡಿ ನುಣುಚಿಕೊಳ್ಳುತ್ತಿದೆ. ಒಟ್ಟಿನಲ್ಲಿ ಚಾಲಕರು ಹಾಗೂ ಪ್ರಯಾಣಿಕರ ಸ್ಥಿತಿ ಅತಂತ್ರವಾಗಿದೆ. ಕೆಲವು ಕಡೆ ರಸ್ತೆ ಕಿರಿದಾಗಿದ್ದು ಕೆಲವೊಂದು ಕಡೆ ರಸ್ತೆ ತೀರಾ ತಿರುವಿನಿಂದ ಕೂಡಿದೆ. ರಸ್ತೆಯ ಡಾಮರು ಎದ್ದು ಹೋಗಿ ರಸ್ತೆಯಲ್ಲಿ ಹೂಳು ತುಂಬಿಕೊಂಡಿದೆ. ರಸ್ತೆಯಲ್ಲೆ ಮಳೆ ನೀರು ಹರಿದು ಡಾಮರು ಕೊಚ್ಚಿಕೊಂಡು ಹೋಗಿ ಸುಸ್ತಿಯ ರಸ್ತೆ ಕೂಡ ಕೆಟ್ಟು ಹೋಗುತ್ತಿದೆ.

ಕೆಂಪು ನೀರಿನ ಅಭಿಷೇಕ ಭಾಗ್ಯ
ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕುತ್ತ ರಸ್ತೆ ಬದಿ ತೆರಳುವಾಗ ರಸ್ತೆಯಲ್ಲಿ ವಾಹನಗಳು ಸಂಚರಿಸುವ ವೇಳೆ ರಸ್ತೆಯಲ್ಲಿ ನಿಂತ ಕೊಳಚೆ ನೀರು ಮಕ್ಕಳ ಬಟ್ಟೆ ಹಾಗೂ ಶರೀರಗಳಿಗೆ ಚಿಮ್ಮುತ್ತಿದೆ. ಮಕ್ಕಳಿಗೆ ಮಳೆಗಾಲ ಕೆಂಪು ನೀರಿನ ಅಭಿಷೇಕ ಆಗುತ್ತಿದೆ. ಇಷ್ಟೆಲ್ಲ ಸಮಸ್ಯೆಗಳು ಸನಿಹದಲ್ಲಿದ್ದರೂ ಇಲಾಖೆಗಳು ಮಾತ್ರ ಮೌನಕ್ಕೆ ಶರಣಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಪಾಯದ ಕರೆಗಂಟೆ
ಸಮರ್ಪಕ ಚರಂಡಿ ಕೊರತೆಯಿಂದ ರಸ್ತೆ ಮಧ್ಯೆ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಹೊಂಡದಲ್ಲಿ ನೀರು ನಿಂತ ಪರಿಣಾಮ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಳ್ಳುವಂತಾದರೆ ಬೇರೆ ವಾಹನಗಳ ತಳ ಭಾಗಕ್ಕೆ ಬಲವಾದ ಏಟು ಬಿದ್ದು ವಾಹನ ಜಖಂಗೊಳ್ಳುತ್ತಿದೆ. ಜತೆಗೆ ಅಪಘಾತಗಳು ಸಂಭವಿಸುತ್ತಿವೆ.

ಗುತ್ತಿಗೆದಾರರಿಗೆ ಸೂಚನೆ
ಮಳೆಗಾಲದ ಮುನ್ನಚ್ಚರಿಕೆ ಕ್ರಮವಾಗಿ ಚರಂಡಿಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಿದ್ದೇವೆ. ಈ ಸಂಬಂಧ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಶೀಘ್ರ ತಾಲೂಕಿನ ವಿವಿಧೆಡೆ ಹೂಳು ತೆಗೆಯುವ ಕೆಲಸ ನಡೆಯುತ್ತದೆ.
– ಎಸ್‌. ಸಣ್ಣೇಗೌಡ, ಕಾ.ನಿ. ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

 ಮುಂಜಾಗ್ರತೆ ವಹಿಸಿಲ್ಲ
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆ ಆಗಿದೆ. ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ. ನಗರ ಮತ್ತು ಹಳ್ಳಿ ಎಲ್ಲೆಡೆಯೂ ಚರಂಡಿ ಇಲ್ಲದಿರುವುದೇ ದೊಡ್ಡ ಸಮಸ್ಯೆ. ಇಲಾಖೆಗಳು ಕಾರೊನ್ಮುಖವಾಗಬೇಕು.
– ಶಿವಪ್ರಸಾದ್‌ ಪೆರಾಲು, ನಾಗರಿಕ

- ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next