Advertisement
ಟೈಮ್ ಅನ್ನೋದು ಸರಿ ಇಲ್ಲದಿದ್ದಾಗ, ಎಷ್ಟೆಲ್ಲಾ ಎಡವಟ್ಟುಗಳಾಗುತ್ತವೆ ಎಂಬುದಕ್ಕೊಂದು ಸ್ಪಷ್ಟ ಉದಾಹರಣೆ “ಹೀಗೊಂದು ದಿನ’. ಇಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣುತ್ತೆ. ಅವರ ಪರಿಕಲ್ಪನೆಯೂ ಇಷ್ಟವಾಗುತ್ತೆ. ಆದರೆ, ಹೇಳಿದ್ದನ್ನೇ, ಹೇಳಿಸಿ, ತೋರಿಸಿದ್ದನ್ನೇ ತೋರಿಸುವುದು ಮಾತ್ರ ಸ್ವಲ್ಪ ತಾಳ್ಮೆಗೆಡಿಸುತ್ತದೆ. ಮನುಷ್ಯ ನಿತ್ಯದ ಜಂಜಾಟದಲ್ಲಿ ಇನ್ನೇನು ಸೋತೆ ಅಂತ ನಂಬಿಕೆ ಕಳಕೊಂಡು ಹತಾಶನಾದಾಗ, ಬದಕಲ್ಲಿನ್ನೂ ಆಟ ಬಾಕಿ ಇದೆ ಎಂದು ಗೊತ್ತಾಗಿ, ಪುನಃ ನಂಬಿಕೆಯಲ್ಲೇ ಗುರಿ ತಲುಪಲು ಶ್ರಮಿಸಿದರೆ ಸಿಗುವ ಫಲ ಏನೆಂಬುದನ್ನು ಇಲ್ಲಿ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.
Related Articles
Advertisement
ಮೊದಲರ್ಧ ಅವಳದೇ ನೋಟ, ಇತರರ ಜೊತೆ ಮಾತುಕತೆಯಲ್ಲೇ ಮುಗಿದು ಹೋಗುತ್ತದೆ. ದ್ವಿತಿಯಾರ್ಧದಲ್ಲೇನಾದರೂ ಕಥೆ “ತಿರುವು’ ಪಡೆದುಕೊಳ್ಳುತ್ತಾ ಅಂದರೆ, ರಸ್ತೆಯ ತಿರುವುಗಳಲ್ಲೇ ಆಕೆಯ ಓಡಾಟ, ಮತ್ತದೇ ಮಾತುಕತೆ ಮುಂದುವರೆಯುತ್ತದೆ. ಸಣ್ಣ ಅವಧಿಯಲ್ಲೇ ಚಿತ್ರ ಮುಗಿಯುತ್ತಾದರೂ, ಆ ಅವಧಿಯಲ್ಲೂ ನೋಡುಗ ಸೀಟಿಗೆ ಒರಗಿಕೊಳ್ಳುವಷ್ಟರ ಮಟ್ಟಿಗೆ ಚಿತ್ರ ನಿಧಾನವೆನಿಸುತ್ತೆ.
ಅಲ್ಲಲ್ಲಿ ಬರುವ ಹಿನ್ನೆಲೆ ಹಾಡು ಸ್ವಲ್ಪ ಚೇತರಿಕೆ ತರುವುದು ಬಿಟ್ಟರೆ “ಹಾಗೊಂದು ಕಥೆ’ ಹೆಚ್ಚೇನೂ ಪ್ರಭಾವ ಬೀರುವುದಿಲ್ಲ. ಜಾಹ್ನವಿಗೆ ತಾನೊಬ್ಬ ನಟಿ ಆಗಬೇಕೆಂಬ ಆಸೆ. ಅವಳ ಅಮ್ಮನಿಗೆ ಮದುವೆ ಮಾಡಬೇಕೆಂಬ ಯೋಚನೆ. ಅಂದು ಹುಡುಗಿ ನೋಡಲು ಗಂಡು ಬರುವ ದಿನ. ಆದರೆ, ಜಾಹ್ನವಿಗೊಂದು ಮುಖ್ಯವಾದ ಕೆಲಸ. ಮುಂಜಾನೆ 6 ಕ್ಕೆ ಎದ್ದವಳೇ ಮನೆಯಲ್ಲಿ ಅಮ್ಮನಿಗೊಂದು ಸುಳ್ಳು ಹೇಳಿ ಹೊರಡುತ್ತಾಳೆ.
ಒಂದು ಗುರಿ ಇಟ್ಟುಕೊಂಡು ಮನೆಯಿಂದ ಹೊರ ಹೋಗುವ ಜಾಹ್ನವಿ, ಸರಿಯಾದ ಸಮಯಕ್ಕೆ ತಾನಂದುಕೊಂಡ ಸ್ಥಳಕ್ಕೆ ಹೋಗಲು ಆಗಲ್ಲ. ದಾರಿ ಮಧ್ಯೆ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ, ಆಕಸ್ಮಿಕ ಘಟನೆಗಳು ನಡೆದು ಹೋಗುತ್ತವೆ. ಅವೆಲ್ಲವನ್ನೂ ದಾಟಿಕೊಂಡು ಕೊನೆಗೂ ಆಕೆ ಅಂದುಕೊಂಡ ಸ್ಥಳ ತಲುಪುತ್ತಾಳೆ. ಆದರೆ, ಅವಳ ಕೆಲಸ ಆಗುತ್ತೋ, ಇಲ್ಲವೋ ಎಂಬ ಉತ್ತರ ಬೇಕಿದ್ದರೆ ಚಿತ್ರ ನೋಡಬಹುದು.
ಸಿಂಧು ಲೋಕನಾಥ್ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎರಡು ಗಂಟೆಯ ಕಥೆ ಭಾರವನ್ನು ಅವರೇ ಹೊತ್ತಿರುವುದು ಖುಷಿ ಕೊಡುತ್ತೆ. ದಾರಿ ಮಧ್ಯೆ ಸಿಗುವ ಮಿತ್ರ, ಗಿರಿಜಾ ಲೋಕೇಶ್, ಶೋಭರಾಜ್, ಪ್ರವೀಣ್ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಎಂದಿನಂತೆ ಗುರುಪ್ರಸಾದ್ ಇಲ್ಲೂ ನಿರ್ದೇಶಕನ ಪಾತ್ರವನ್ನ ತಮ್ಮ ಶೈಲಿಯಲ್ಲೇ ನಿರ್ವಹಿಸಿದ್ದಾರೆ. ಅಭಿಲಾಶ್ ಗುಪ್ತ ಸಂಗೀತದಲ್ಲಿ ವಿಶೇಷಗುಣಗಳೇನೂ ಇಲ್ಲ. ವಿಕ್ರಮ್ ಯೋಗಾನಂದ್ ಛಾಯಾಗ್ರಹಣ ಬಗ್ಗೆ ಹೇಳುವಂಥದ್ದೇನೂ ಇಲ್ಲ.
ಚಿತ್ರ: ಹೀಗೊಂದು ದಿನನಿರ್ಮಾಣ: ಚಂದ್ರಶೇಖರ್
ನಿರ್ದೇಶನ: ವಿಕ್ರಂ ಯೋಗಾನಂದ್
ತಾರಾಗಣ: ಸಿಂಧು ಲೋಕನಾಥ್, ಪ್ರವೀಣ್, ಮಿತ್ರ, ಪದ್ಮಜಾರಾವ್, ಶೋಭರಾಜ್, ನಾಗೇಂದ್ರ ಶಾ, ಗಿರಿಜಾ ಲೋಕೇಶ್ ಮುಂತಾದವರು * ವಿಜಯ್ ಭರಮಸಾಗರ