Advertisement
* ಮುನಿರತ್ನ ಅವರು ಮುಂದಿನ ಚುನಾವಣೆಯ ಪ್ರಚಾರಕ್ಕಾಗಿ ಈ ಚಿತ್ರ ಮಾಡುತ್ತಿದ್ದಾರೆ ಎಂದು ಸುದ್ದಿ ಇದೆ. ನಿಜವೇ?ಖಂಡಿತಾ ಸುಳ್ಳು. ರಾಜಕೀಯಕ್ಕೂ, ಚುನಾವಣೆಗೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ರಾಜಕಾರಣಿಯಾಗಿ ಈ ಚಿತ್ರ ಮಾಡುತ್ತಿಲ್ಲ. ಸಿನಿಮಾ ನಿರ್ಮಾಪಕನಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ನಮ್ಮಲ್ಲಿ ಮಹಾಭಾರತದ ಕುರಿತು ಚಿತ್ರ ಬಂದಿರಲಿಲ್ಲ. ಮಹಾಭಾರತದ ಕುರಿತು ಒಂದು ಚಿತ್ರ ಮಾಡುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರುತ್ತಿದೆ. ಇದು ಬಿಟ್ಟರೆ, ಈ ಚಿತ್ರಕ್ಕೂ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇಷ್ಟಕ್ಕೂ ಈ ಚಿತ್ರವನ್ನು ಸಂಕ್ರಾಂತಿಗೆ ಬಿಡುಗಡೆ ಮಾಡಬೇಕು ಅಂತ ತೀರ್ಮಾನಿಸಿದ್ದೇನೆ. ಅದಾದ ಮೇಲೆ ಚುನಾವಣೆಗಳು. ಹಾಗಿರುವಾಗ ಇದಕ್ಕೂ, ಚುನಾವಣೆಗೂ ಏನು ಸಂಬಂಧ?
ಖಂಡಿತಾ ಇಲ್ಲ. ಬೇರೆ ಭಾಷೆಯಲ್ಲಿ ದೊಡ್ಡ ದೊಡ್ಡ ಬಜೆಟ್‌ನ ಚಿತ್ರಗಳು ಬರುತ್ತಿವೆ. ನಾವು ಯಾಕೆ ಮಾಡಬಾರದು. ನಮಗೂ ದೊಡ್ಡ ಚಿತ್ರಗಳನ್ನು ಮಾಡುವ ಸಾಮರ್ಥ್ಯ ಇದೆ. ನಾವು ಸಹ ಯಾರಿಗೂ ಕಡಿಮೆ ಇಲ್ಲ. ನಾವು ಸಹ ಸಮರ್ಥರು ಎಂಬ ಸಂದೇಶವನ್ನು ರವಾನಿಸಬೇಕಿತ್ತು. ಇಡೀ ದೇಶ ತಿರುಗಿ ನೋಡುವಂತಹ ಚಿತ್ರವೊಂದನ್ನು ಮಾಡಬೇಕಿತ್ತು. ಅದೇ ಕಾರಣಕ್ಕೆ ಈ ಚಿತ್ರ ಮಾಡುತ್ತಿದ್ದೇನೆ. * ಚಿತ್ರಕ್ಕೆ “ಮುನಿರತ್ನ ಕುರುಕ್ಷೇತ್ರ’ ಎಂಬ ಹೆಸರು ಇಟ್ಟಿದ್ದು ಏಕೆ?
ಚಿತ್ರಕ್ಕೆ “ಕುರುಕ್ಷೇತ್ರ’ ಎಂಬ ಹೆಸರು ಇಡಬೇಕು ಎಂಬ ಆಸೆ ಇತ್ತು. ಆ ಹೆಸರು ಬೇರೆ ಯಾರಲ್ಲೋ ಇದ್ದುದರಿಂದ, ಹೆಸರು ಸಿಗಲಿಲ್ಲ. ಕೊನೆಗೆ ಚೇಂಬರ್‌ನವರು ಈ ಹೆಸರು ಕೊಟ್ಟರು. “ರಾಜಮೌಳಿ ಬಾಹುಬಲಿ’ ಎಂಬ ಹೆಸರಿಟ್ಟರೆ ಯಾರೂ ಯಾಕೆ ಪ್ರಶ್ನೆ ಮಾಡುವುದಿಲ್ಲ. ನಾನು ಮಾಡಿದರೆ, ಯಾಕೆ ಇಂತಹ ಪ್ರಶ್ನೆ ಉದ್ಭವವಾಗುತ್ತದೆ.
Related Articles
ಟೈಟಲ್ “ಮುನಿರತ್ನ ಕುರುಕ್ಷೇತ್ರ’ ಎಂದಿರುವುದರಿಂದ, ಇದು ನನ್ನ ಕಲ್ಪನೆಯ ಕುರುಕ್ಷೇತ್ರ ಇರಬಹುದು ಎಂಬ ಗೊಂದಲ ಇರಬಹುದು. ಆದರೆ, ಖಂಡಿತಾ ಇದು ನನ್ನ ಕಲ್ಪನೆಯ ಕಥೆಯಲ್ಲ, ಮಹಾಭಾರತದ ಕುರುಕ್ಷೇತ್ರದ ಕಥೆಯೇ.
Advertisement
* ಈ ಚಿತ್ರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್‌ಗಳಿರುತ್ತಾರೆ ಎಂದು ಹೇಳಿದ್ದಿರಿ. ದರ್ಶನ್, ರವಿಚಂದ್ರನ್ ಅವರನ್ನು ಹೊರತುಪಡಿಸಿದರೆ ಮಿಕ್ಕಂತೆ ದೊಡ್ಡ ಸ್ಟಾರ್‌ಗಳು ಕಾಣುವುದಿಲ್ಲವಲ್ಲಾ?ಅದು ಸರಿ. ಬಹುಶಃ ಮುಂಚೆಯೇ ಪ್ಲಾನ್ ಮಾಡಿದ್ದರೆ, ಖಂಡಿತಾ ಕನ್ನಡದ ಎಲ್ಲಾ ದೊಡ್ಡ ಸ್ಟಾರ್‌ಗಳೂ ಇರುತ್ತಿದ್ದರು. ಆದರೆ, ಎರಡೇ ತಿಂಗಳಲ್ಲಿ ಎಲ್ಲವೂ ಪ್ಲಾನ್ ಆಯಿತು. ಹಾಗಾಗಿ ಬಹಳಷ್ಟು ಸ್ಟಾರ್‌ಗಳ ಡೇಟ್ಸ್ ಹೊಂದಿಸಲಾಗಲಿಲ್ಲ. ನಿಜ ಹೇಳಬೇಕೆಂದರೆ, ಕರ್ಣನ ಪಾತ್ರವನ್ನು ಶಿವಣ್ಣ ಮಾಡಿದರೆ ಚೆನ್ನ ಎಂದು ದರ್ಶನ್ ಅವರಿಗೆ ಬಹಳ ಆಸೆ ಇತ್ತು. ಆದರೆ, ನಾವು ಯಾವ ಡೇಟ್ಸ್ ಕೇಳಿದ್ದೆವೋ, ಆ ಡೇಟ್ಸ್‌ಗಳನ್ನು ಅವರು ಬೇರೆ ಚಿತ್ರಗಳಿಗೆ ಕೊಟ್ಟಿದ್ದರು. ಹಾಗಾಗಿ ಅವರು ನಟಿಸುವುದು ಸಾಧ್ಯವಾಗಲಿಲ್ಲ. ಆಗಲೇ ಹೇಳಿದೆನಲ್ಲ, ಎರಡೇ ತಿಂಗಳಲ್ಲಿ ಪ್ಲಾನ್ ಆದ ಚಿತ್ರ ಇದು ಎಂದು. ಬಹುಶಃ ಸ್ವಲ್ಪ ಪ್ಲಾನ್ ಮಾಡಿದ್ದರೆ, ಎಲ್ಲಾ ಸ್ಟಾರ್‌ಗಳೂ ಇರುತ್ತಿದ್ದರು. * ಎರಡೇ ತಿಂಗಳಲ್ಲಿ ಇವೆಲ್ಲಾ ಪ್ಲಾನ್ ಆಯಿತು ಅಂತೀರಿ. ಈ ಆತುರ ಯಾಕೆ?
ಆತುರ ಅಂತೇನಿಲ್ಲ. ಇಂಥದ್ದೊಂದು ಚಿತ್ರ ಮಾಡಬೇಕು ಅಂತನಿಸಿತು. ಮಾಡುತ್ತಿದ್ದೀನಿ. * ಸಂಕ್ರಾಂತಿಗೆ ಚಿತ್ರ ಬಿಡುಗಡೆ ಅನ್ನುತ್ತಿದ್ದೀರಿ. ಅಷ್ಟು ಬೇಗ ಚಿತ್ರ ಮುಗಿಯುತ್ತದಾ?
ಖಂಡಿತಾ. ಅದೇ ರೀತಿ ಪ್ಲಾನ್ ಮಾಡುತ್ತಿದ್ದೀವಿ. ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಸೆಟ್ ಹಾಕಲಾಗಿದೆ. ಒಟ್ಟೊಟ್ಟಿಗೆ ಮೂರ¾ರು ಕಡೆ ಚಿತ್ರೀಕರಣ ಆಗುತ್ತಿರುತ್ತದೆ. 100ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ನಡೆಯಲಾಗಿದೆ. ಡಿಸೆಂಬರ್ ಹೊತ್ತಿಗೆ ಚಿತ್ರದ ಹಾಡುಗಳ ಬಿಡುಗಡೆಯಾಗುತ್ತದೆ. ಇಡೀ ದಕ್ಷಿಣ ಭಾರತ ಚಿತ್ರರಂಗ ನೋಡುವಂತ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಾಡುವ ಆಸೆ ಇದೆ. * ಈ ಚಿತ್ರ ಬೇರೆ ಭಾಷೆಗೆ ಡಬ್ ಆಗುತ್ತದಾ?
ಸದ್ಯಕ್ಕೆ ಆ ತರಹದ ಯಾವ ಯೋಚನೆಯೂ ಇಲ್ಲ. ಈ ಚಿತ್ರವನ್ನು ನಮ್ಮ ಜನರ ಖುಷಿಗಾಗಿ ಮಾಡುತ್ತಿದ್ದೀನಿ. ಹಾಗಾಗಿ ಕನ್ನಡದಕ್ಕೆ ಹೊಂದುವಂತಹ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. * ಚಿತ್ರದ ಬಜೆಟ್ ಎಷ್ಟಾಗಬಹುದು?
ಒಬ್ಬ ಮನುಷ್ಯ ಊಟಕ್ಕೆ ಕೂತಾಗ, ಅವನಿಗೆ ಎಷ್ಟು ಬೇಕೋ ಅಷ್ಟು ಬಡಿಸುವುದು ನಮ್ಮ ಧರ್ಮ. ಅವನು ಹೊಟ್ಟೆ ತುಂಬಾ ತಿಂದು, ಸಂತುಷ್ಟನಾಗುವುದು ಮುಖ್ಯ. ಅದೇ ರೀತಿ ಈ ಸಿನಿಮಾ ಏನು ಡಿಮ್ಯಾಂಡ್ ಮಾಡುತ್ತದೋ, ಅಷ್ಟು ಕೊಡುವುದು ನಮ್ಮ ಧರ್ಮ. ಈ ಚಿತ್ರದ ಬಜೆಟ್ ಎಷ್ಟಾಗಬಹುದು ಎಂದು ಈಗಲೇ ತೀರ್ಮಾನಿಸುವುದು ಕಷ್ಟ.