Advertisement

ಇದು ಮಠವಲ್ಲ…ಮಹಾಂತ ತೀರ್ಥವೆಂಬ ನಿಸರ್ಗ ದೇಗುಲ

01:40 PM Jun 07, 2019 | Suhan S |

ಬಾಗಲಕೋಟೆ: ಶಿರೂರ ಸಮೀಪದ ಮಹಾಂತ ತೀರ್ಥದ ಡಾ|ಬಸವಲಿಂಗ ಸ್ವಾಮೀಜಿ ತಾವಿರುವ ಮಠದ ಆವರಣವನ್ನು ಅದ್ಭುತ ಅರಣ್ಯ ಪ್ರದೇಶವನ್ನಾಗಿ ಮಾಡಿದ್ದು, ಪರಿಸರ ಸಂರಕ್ಷಣೆಗೆ ಅಹರ್ನಿಶಿ ಶ್ರಮಿಸುತ್ತಿದ್ದಾರೆ.

Advertisement

ಬರದ ನಾಡಿನಲ್ಲಿ ಬತ್ತದ ‘ಮಹಾಂತ ತೀರ್ಥ’ ಪರಿಸರದಲ್ಲಿ ಕಲ್ಲು ಮುಳ್ಳುಗಳಿಂದ ಕೂಡಿದ ಗುಡ್ಡದ ಸುಮಾರು 8 ರಿಂದ 10 ಎಕರೆ ಪ್ರದೇಶವನ್ನು ಸ್ವಚ್ಛಗೊಳಿಸಿ ಒಂದು ಕುಟೀರ ಕಟ್ಟಿಕೊಂಡು ಚಿಕ್ಕು, ಮಾವು, ತೆಂಗು, ಲಿಂಬೆ, ದಾಳಿಂಬೆ, ಸೀತಾಫಲ, ನೇರಳೆ, ಬೆಟ್ಟದ ನೆಲ್ಲಿ, ಪೇರಲ, ಅಂಜುರ, ಕಾಜು, ಕಿತ್ತಳೆ, ಮೋಸಂಬಿ ಸೇರಿದಂತೆ ಉಪಯುಕ್ತ ಸುಗಂಧ ದ್ರವ್ಯ ಉತ್ಪಾದಿಸುವ ಅಪರೂಪದ ಸಸ್ಯಗಳನ್ನು ಬೆಳೆಸಿದ್ದಾರೆ. ಹೀಗಾಗಿ ಮಠದ ಪ್ರವೇಶ ದ್ವಾರದಲ್ಲಿ ಕಾಲಿಟ್ಟರೆ ಸಾಕು ಮಲೆನಾಡಿನಲ್ಲಿ ಹೊರಟಂತೆ ಭಾಸವಾಗುತ್ತದೆ.

ಕೇವಲ ಎರಡು ಇಂಚು ನೀರಿನಲ್ಲಿ 8 ಎಕರೆ ಪ್ರದೇಶ ಭೂಮಿಗೆ ನೀರುಣಿಸಲಾಗುತ್ತಿದ್ದು, ಸಾವಯವ ಕೃಷಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಗೋಬರ ಗ್ಯಾಸ್‌, ಎರೆಹುಳು ಸಾಕಾಣಿಕೆ ಮಾಡುವುದರ ಜತೆಗೆ ಅಮೂಲ್ಯವಾದ ನೀರು ಪೋಲಾಗದಂತೆ ಪ್ರತಿಯೊಂದು ಗಿಡಗಳಿಗೆ ಉಣಿಸಲಾಗುತ್ತಿದೆ. ಈ ಚಟುವಟಿಕೆ ಜತೆಗೆ ಕೃಷಿ ಉಪ ಕಸಬುಗಳಾದ ಜಾನುವಾರು ಸಾಕಾಣಿಕೆ ಮಾಡಲಾಗುತ್ತಿದ್ದು, ಬೆಕ್ಕು, ನಾಯಿ, ಆಕಳು, ಜಿಂಕೆ ಮುಂತಾದ ಪ್ರಾಣಿಗಳಿಗೂ ಇಲ್ಲಿ ಆಶ್ರಯ ಕಲ್ಪಿಸಲಾಗಿದೆ.

ಡಾ|ಬಸವಲಿಂಗ ಸ್ವಾಮೀಜಿ ಯೋಗ, ಧ್ಯಾನ, ಆಧ್ಯಾತ್ಮಿಕ ಹಾಗೂ ವನೌಷಧಿಗಳ ಉಪಯುಕ್ತ ಮಾಹಿತಿ ನೀಡುವುದರ ಜತೆಗೆ ನೊಂದವರಿಗೆ ಆಶ್ರಯದಾತರಾಗಿದ್ದಾರೆ. ಇಲ್ಲಿಗೆ ಬರುವ ಭಕ್ತರಿಗೆ ಫಲಾಪೇಕ್ಷೆಯಿಲ್ಲದೇ ಉಪಚಾರ ಮಾಡುತ್ತಾರೆ. 1980ರಿಂದ ಇಲ್ಲಿಯವರೆಗೆ ಈ ಕಾರ್ಯ ನಡೆದುಕೊಂಡು ಬಂದಿದೆ.

ಪರಿಸರ ಸಂದೇಶ: ಶಾಲಾ ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಪ್ರಕೃತಿಯತ್ತ ಆಕರ್ಷಕರಾಗಲು ತಿಂಗಳಿಗೊಮ್ಮೆ ಜಿಲ್ಲೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ವನಭೋಜನದೊಂದಿಗೆ ಪರಿಸರ ಸಂದೇಶ ಅರಿತುಕೊಳ್ಳುತ್ತಾರೆ.

Advertisement

ಬಾಲ್ಯ: ಶರಣ ದಂಪತಿಗಳಾದ ಮರುಗೆಪ್ಪ ಹಾಗೂ ಈರವ್ವನವರ ಉದರದಲ್ಲಿ 1952 ಜೂನ್‌ 12ರದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಜನಿಸಿದ ಪೂಜ್ಯರು,ಕಡು ಬಡತನ ಕುಟುಂಬದಲ್ಲಿ ಬೆಳೆದು ಬಂದವರು.ಅಥಣಿಯ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮುಗುಸಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ, ಅಥಣಿಯ ಜಾಧವಜಿ ಆನಂದಜಿ ಹೈಸ್ಕೂಲಿನಲ್ಲಿ ಮಗಿಸಿದರು.

ಆಯುರ್ವೇದ ಅಧ್ಯಯನ: ಬಡತನ ಕಾರಣದಿಂದ ದುಡಿಮೆಯೊಂದಿಗೆ ಪದವಿ ಶಿಕ್ಷಣ ಮುಂದುವರಿಸಿದ ಪೂಜ್ಯರು ಮುದ್ರಣಾಲಯ ಕಾಯಕದಲ್ಲಿ ತೊಡಗಿದ್ದರು. ಓವರ್‌ ಟೈಮ್‌ ಕೆಲಸದಿಂದ ಸ್ವಾಮಿಗಳ ಆರೋಗ್ಯ ಹದಗೆಟ್ಟಿತ್ತು ಸಾಕಷ್ಟು ಬಾರಿ ಚಿಕಿತ್ಸೆ ತೆಗೆದುಕೊಂಡರೂ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಹೋಯ್ತು. ಕಡೆಯ ಪ್ರಯತ್ನವೆಂಬಂತೆ ಬೆಳಗಾವಿ ನಿಸರ್ಗ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿ 35ರೂ. ಶುಲ್ಕ ನೀಡಿ 15 ದಿನಗಳ ಕೋರ್ಸ್‌ ಮುಗಿಸಿದರು. ಆರೋಗ್ಯದಲ್ಲಿ ಅಗಾಧವಾದ ಚೇತರಿಕೆ ಕಂಡು ಬಂತು. ಇದರಿಂದ ಪ್ರೇರಿತರಾದ ಶ್ರೀಗಳು ಆಯುರ್ವೇದ ಪದ್ಧ್ದತಿ ಅಧ್ಯಯನಕ್ಕಾಗಿ 1978ರ ಜನವರಿಯಿಂದ 1979 ಜನವರಿಯವರೆಗೆ ಯೋಗ ಮತ್ತು ನಿಸರ್ಗ ಚಿಕಿತ್ಸೆ ಡಾಕ್ಟರ್‌ ಆಫ್‌ ಯೋಗ ಮತ್ತು ನೇಚರ ಕ್ಯೂರ್‌ ಕೋರ್ಸ್‌ಗೆ ಉತ್ತರ ಪ್ರದೇಶದ ಆನಂದಾಶ್ರಮ ನಕಟಿಯಾ ಬರೇಲಿಯಲ್ಲಿ ಪ್ರವೇಶ ಪಡೆದರು. ಒಂದು ವರ್ಷದ ಕೋಸ್‌ ಪೂರ್ಣಗೊಳಿಸಿ ಪ್ರಾವೀಣ್ಯತೆ ಪಡೆದರು. ಅಂದಿನಿಂದ ಇಂದಿನವರೆಗೂ ನಿಸರ್ಗ ಕುರಿತು ಅಪಾರ ಒಲವು ಹೊಂದುವ ಮೂಲಕ ಪರಿಸರ ಸಂರಕ್ಷಣೆ, ಜಾಗೃತಿ, ಕುರಿತು ಅಪಾರ ಸಾಧನೆ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next