Advertisement

ಇದೇನು ಗೋಪಾಲಪ್ಪನ ಛತ್ರವಾ…

12:47 AM Feb 25, 2020 | Lakshmi GovindaRaj |

ಬೆಂಗಳೂರು: ಇಷ್ಟ ಬಂದಾಗ ಬರೋಕೆ, ಹೋಗೋಕೆ ಇದೇನು ಗೋಪಾಲಪ್ಪನ ಛತ್ರವಲ್ಲ ಎಂದು ಅಧಿಕಾರಿಗಳನ್ನು ಸಚಿವ ಕೆ.ಗೋಪಾಲಯ್ಯ ತರಾಟೆಗೆ ತೆಗೆದುಕೊಂಡರು. ನಗರದ ಕನ್ನಿಂಗ್‌ ಹ್ಯಾಮ್‌ ರಸ್ತೆಯಲ್ಲಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕಚೇರಿಗೆ ಸೋಮವಾರ ಭೇಟಿ ನೀಡಿದ ಅವರು, ಹಾಜರಾತಿ ಪುಸ್ತಕ ಪರಿಶೀಲಿಸಿದರು. ಈ ವೇಳೆ ಪ್ರತಿ ಸಿಬ್ಬಂದಿಯ ಹೆಸರು ಕರೆದರು.

Advertisement

ಅರ್ಧದಷ್ಟು ಸಿಬ್ಬಂದಿ ಗೈರಾಗಿದ್ದನ್ನು ಕಂಡು ಗರಂ ಆದರು. ಸರಿಯಾದ ಸಮಯಕ್ಕೆ ಕಚೇರಿಗೆ ಬರಲಿಲ್ಲವೆಂದರೆ ಹೇಗೆ? ಇದೇನು ಗೋಪಾಲಪ್ಪನ ಛತ್ರವೇ ಎಂದು ಪ್ರಶ್ನಿಸಿದರು. ಇಲಾಖೆಯ ಆಯುಕ್ತರ ಕಚೇರಿ, ಜಂಟಿ ನಿರ್ದೇಶಕರು, ಉಪ ನಿರ್ದೇಶಕರ ಕಚೇರಿ, ನಿಯಂತ್ರಣ ಕೊಠಡಿಗೆ ತೆರಳಿ ಅಲ್ಲಿನ ಅವ್ಯವಸ್ಥೆ ಗಮನಿಸಿದರು. ನಿರುಪಯುಕ್ತ ಪ್ರಿಂಟರ್‌, ಟೇಬಲ್‌ಗ‌ಳನ್ನು ವಿಲೇವಾರಿ ಮಾಡದೇ ಕಚೇರಿಯಲ್ಲಿರುವುದನ್ನು ಕಂಡು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

ಸಹಾಯವಾಣಿಗೆ ಪ್ರತಿದಿನ ಎಷ್ಟು ಕರೆಗಳು ಬರುತ್ತವೆ. ಜನರು ಯಾವ-ಯಾವ ಸಮಸ್ಯೆ ಹೇಳುತ್ತಾರೆ. ಅದಕ್ಕೆ ಪರಿಹಾರ ನೀಡಲಾಗಿದೆಯೇ ಎಂಬ ವರದಿಯನ್ನು ಪ್ರತಿದಿನ ಆಯುಕ್ತರಿಗೆ, ತಮಗೆ ನೀಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಗೆ ಬಂದ ಕರೆಯನ್ನು ಸ್ವೀಕರಿಸಿದ ಸಚಿವರು, ಸಮಸ್ಯೆ ಆಲಿಸಿ, ಮಾಹಿತಿ ನೀಡಿದರು. ಜನರು ನೀಡುವ ದೂರುಗಳನ್ನು ಬರೆದುಕೊಳ್ಳಲು ಪ್ರತ್ಯೇಕ ಪುಸ್ತಕ ಬಳಸುವಂತೆ ಸೂಚನೆ ನೀಡಿದರು.

ನಂತರ ಯಶವಂತಪುರ ಮೆಟ್ರೋ ನಿಲ್ದಾಣದ ಬಳಿ ಇರುವ ಬೆಂಗಳೂರು ಪಶ್ಚಿಮ ಆಹಾರ ವಲಯದ ಕೆಎಫ್ಸಿಎಸ್‌ಸಿ ವಿಜಯನಗರ-2 ಸಗಟು ಗೋದಾಮಿಗೆ ಭೇಟಿ ನೀಡಿದ ಸಚಿವ ಕೆ. ಗೋಪಾಲಯ್ಯ, ಎಷ್ಟು ಮೂಟೆ ಅನ್ನಭಾಗ್ಯ ಅಕ್ಕಿ ಇದೆ ಎಂಬುದನ್ನು ಪರಿಶೀಲಿಸಿದರು. ಗೋದಾಮಿನಲ್ಲಿ ಹೆಗ್ಗಣ, ಇಲಿಗಳು ಅಕ್ಕಿ ಮೂಟೆಗಳಿಗೆ ಹಾನಿ ಮಾಡಿರುವುದನ್ನು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ವಚ್ಛತೆ ಕಾಪಾಡುವಲ್ಲಿ ವಿಫ‌ಲರಾಗಿದ್ದು, ಗೋದಾಮಿಗಿಂತ ದನದ ಕೊಟ್ಟಿಗೆ ಚೆನ್ನಾಗಿರುತ್ತದೆ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ಕಚೇರಿಗೆ ತಡವಾಗಿ ಬಂದ ಸಿಬ್ಬಂದಿ, ಕರ್ತವ್ಯದಲ್ಲಿ ಲೋಪ ಎಸಗುವವವರಿಗೆ ನೋಟಿಸ್‌ ನೀಡಿ ಕಠಿಣ ಕ್ರಮಕೈಗೊಳ್ಳಲು ಆಯುಕ್ತರಿಗೆ ತಿಳಿಸಲಾಗಿದ್ದು, ಇಲಾಖೆಯನ್ನು ಸದೃಢಪಡಿಸಿ, ಜನರಿಗೆ ನ್ಯಾಯ ದೊರಕಿಸಲು ಶ್ರಮಿಸಲಾಗುವುದು.

Advertisement

ಯಶವಂತಪುರ ಮೆಟ್ರೊ ನಿಲ್ದಾಣ ಬಳಿ ಇರುವ ಗೋದಾಮನ್ನು ಕೆಡವಿ 15 ಅಂತಸ್ತಿನ ಆಹಾರ ಭವನ ನಿರ್ಮಿಸಲು ಬಜೆಟ್‌ನಲ್ಲಿ ಅನುದಾನ ನೀಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು. ಫೆ.25ರಂದು ಎಲ್ಲ ಜಿಲ್ಲೆಗಳ ಜಂಟಿ ನಿರ್ದೇಶಕರು, ಉಪನಿರ್ದೇಶಕರು ಮತ್ತು ಆಯುಕ್ತರೊಂದಿಗೆ ಸಭೆ ನಡೆಸಿ ಇಲಾಖೆ ಕಾರ್ಯನಿರ್ವಹಣೆಯ ಬಗ್ಗೆ ಪರಾಮರ್ಶೆ ನಡೆಸ‌ಲಾಗುವುದು ಎಂದು ತಿಳಿಸಿದರು.

ಅಧಿವೇಶನ ನಂತರ ಜಿಲ್ಲೆಗಳಿಗೆ ಭೇಟಿ: ಅನಿರೀಕ್ಷಿತ ಭೇಟಿಯಿಂದ ಅಧಿಕಾರಿಗಳ ಕಾರ್ಯವೈಖರಿ, ಗೋದಾಮುಗಳ ಸ್ಥಿತಿ ತಿಳಿಯಲಾಯಿತು. ಆಹಾರ ಇಲಾಖೆಗೆ ಕಾಯಕಲ್ಪ ನೀಡಬೇಕಿದೆ. ವಿಧಾನಮಂಡಲ ಅಧಿವೇಶನದ ನಂತರ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಲಾಗುವುದು ನ್ಯಾಯಬೆಲೆ ಅಂಗಡಿಗಳು, ಗೋದಾಮುಗಳನ್ನು ಪರಿಶೀಲನೆ ಮಾಡಲಾಗುವುದು. ಭೇಟಿ ನೀಡುವುದಕ್ಕೂ ಮುನ್ನ ಅವ್ಯವಹಾರದ ಬಗ್ಗೆ ಮಾಹಿತಿ ಪಡೆಯಲಾಗುವುದು. ತಿಂಗಳ ಮೊದಲ ವಾರದಲ್ಲಿಯೇ ಫ‌ಲಾನುಭವಿಗಳಿಗೆ ಪಡಿತರ ನೀಡುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕಳಪೆ ಧಾನ್ಯಗಳನ್ನು ವಿತರಣೆ ಮಾಡುವ ಬಗ್ಗೆ ದೂರುಗಳು ಬಂದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಅನ್ನ ಭಾಗ್ಯ ಯೋಜನೆಯಡಿ ವಿತರಣೆಯಾಗುವ ಅಕ್ಕಿಯನ್ನು 7ರಿಂದ 5 ಕೆ.ಜಿಗೆ ಇಳಿಸುವ ಚಿಂತನೆ ಇಲ್ಲ.
-ಕೆ.ಗೋಪಾಲಯ್ಯ, ಆಹಾರ – ನಾಗರಿಕ ಸರಬರಾಜು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next