Advertisement

ಶಿಲೆಯಲ್ಲ ಈ ಗುಡಿಯು…

10:06 PM Oct 18, 2019 | Lakshmi GovindaRaju |

ಹೊಸನಗರದ ಉಮಾ ಮಹೇಶ್ವರ ದೇಗುಲದ ಶಿಲ್ಪಲೋಕದಲ್ಲಿ ಜೀವಂತರೂಪಗಳೇ ಇವೆಯೇನೋ! ಕೆತ್ತನೆಗಳಲ್ಲಿಯೇ ಕಥೆ ಹೇಳುತ್ತಾ, ಮೋಡಿಗೊಳಿಸುತ್ತವೆ…

Advertisement

ಕೊಡಚಾದ್ರಿಯ ಚಾಚಿಕೊಂಡ ಹಸಿರು. ನಡುವೆ ಪುಟ್ಟ ದೇಗುಲ. ಅದರ ಕಂಬಗಳಲ್ಲಿ, ಗೋಡೆಗಳಲ್ಲಿ ಶಿಲ್ಪಗಳದ್ದೇ ಕಥಾವೈಭವ. ಗಣಪತಿ, ಪಾರ್ವತಿ, ಸುಂದರ ದ್ವಾರಪಾಲಕರು, ಕಲ್ಲಿನ ಮೇಲೆ ಚಿತ್ರಿತಗೊಂಡು, ಏನನ್ನೋ ಹೇಳುತ್ತಿದ್ದಾರೆ. ಹೊಸನಗರದ ಉಮಾ ಮಹೇಶ್ವರಿ ದೇಗುಲದ ಆ ಶಿಲ್ಪಲೋಕದಲ್ಲಿ ಜೀವಂತರೂಪಗಳೇ ಇವೆಯೇನೋ!

ವಿಜಯನಗರ- ಕೆಳದಿ ವಾಸ್ತುಶಿಲ್ಪದ ಕೊಡುಗೆ ಈ ದೇಗುಲ. 3 ಆಡಿ ಎತ್ತರದ ಜಗತಿಯ ಮೇಲೆ 18 ಆಡಿ ಉದ್ದದಷ್ಟು ವಿಸ್ತಾರ. ಗರ್ಭಗುಡಿ, ಅಂತರಾಳ ಹಾಗೂ ಮುಖಮಂಟಪದ ಚೆಲುವು ಹೃದಯಸ್ಪರ್ಶಿಯಾಗಿದೆ. ಗರ್ಭಗುಡಿಯಲ್ಲಿ ಸುಂದರ ಶಿವಲಿಂಗವಿದ್ದು, ದ್ವಾರದಲ್ಲಿ ಗಣಪತಿ ತನ್ನ ರೂಪವೈಭವದಿಂದಲೇ ಸೆಳೆಯುತ್ತಾನೆ. ಎಡಭಾಗದಲ್ಲಿ ಪಾರ್ವತಿಯ ಶಿಲಾಕೃತಿ. ವಿತಾನದಲ್ಲಿ ಕಮಲದ ಕೆತ್ತನೆ ಇದೆ. ಪ್ರವೇಶ ದ್ವಾರದಲ್ಲಿ ಮೂರೂವರೆ ಅಡಿ ಎತ್ತರದ ಸುಂದರ ಶೈವ ದ್ವಾರಪಾಲಕರು ರಾಜಭಕ್ತಿ ಮೆರೆಯುತ್ತಿರುವಂತೆ ತೋರುತ್ತಾರೆ.

ದೇವಾಲಯದ ಸೌಂದರ್ಯ ಅಡಗಿರುವುದೇ ಮುಖಮಂಟಪ ಹಾಗೂ ಹೊರಭಿತ್ತಿಯಲ್ಲಿನ ಕೆತ್ತನೆಗಳಲ್ಲಿ. ಪ್ರವೇಶ ದ್ವಾರದ ಎರಡೂ ಬದಿಯ ಮೂಲೆಯಲ್ಲಿ, ವಿಜಯನಗರ ಶೈಲಿಯ ಹಿಂಗಾಲಿನ ಮೇಲೆ ನಿಂತಿರುವ ಸಿಂಹದ ಕೆತ್ತನೆ ಇದ್ದರೆ, ಇದಕ್ಕೆ ಹೊಂದಿಕೊಂಡಂತೆ ಇರುವ ಪ್ರತ್ಯೇಕ ಎರಡು ಕಂಬಗಳ ನಾಲ್ಕು ದಿಕ್ಕಿನಲ್ಲಿ ಸಿಂಹದ ಕೆತ್ತನೆ, ಚೆಲುವು ತುಂಬಿಕೊಂಡಿದೆ. ಮುಖಮಂಟಪದಲ್ಲಿ ಭುವನೇಶ್ವರಿ, ಭವ್ಯರೂಪಿ. ಅಷ್ಟ ದಿಕ್ಬಾಲಕರ ಉಬ್ಬು ಶಿಲ್ಪದ ಕೆತ್ತನೆಗೆ, ಕಣ್ಮನ ಸೋಲದೇ ಇರದು. ಕೆಳದಿ ಅರಸರ ಕಾಲದ ವಾಸ್ತುಶೈಲಿಗೆ ಇವೆಲ್ಲ ಸಾಕ್ಷಿಯಂತಿವೆ.

ದೇಗುಲದ ಸುತ್ತಲಿನ 9 ಕಂಬಗಳಲ್ಲಿ, ಪ್ರತಿ ಕಂಬದ ಮೇಲೂ ಹಿಂಗಾಲಿನ ಮೇಲೆ ನಿಂತ ಭಂಗಿಯ ಸುಂದರ ಸಿಂಹದ ಕೆತ್ತನೆಗಳಿವೆ. ವಿಷ್ಣುವಿನ ದಶಾವತಾರದ ಬೃಹತ್‌ ಕೆತ್ತನೆಗಳ ವೈಭವವಂತೂ ಅಪಾರ ಚೆಲುವಿನಿಂದ ಕೂಡಿದೆ. ಇಲ್ಲಿನ ವರಾಹ ಮೂರ್ತಿಯ ಪ್ರಭಾವಳಿ ಕಲಾತ್ಮಕವಾಗಿದ್ದು, ಮತ್ಸಾéವತಾರದ ಮೇಲೆ ಸುಂದರ ತೋರಣವನ್ನು ಗುರುತಿಸಬಹುದು. ಶಿವಲಿಂಗದ ರಚನೆಯೂ ಇಲ್ಲಿದ್ದು, ಪರಶುರಾಮನ ಪಕ್ಕದಲ್ಲಿ ನಾಟ್ಯ ಭಂಗಿಯಲ್ಲಿರುವ ಸುಂದರ ಸ್ತ್ರೀ ನಿಜಕ್ಕೂ ಕಲಾಸುಂದರಿ.

Advertisement

ಶಿಲ್ಪ ರಚನೆಯಿಂದಲೇ ಸೆಳೆಯುವ, ಈ ದೇಗುಲ ನಿರ್ಮಾಣದ ಕಾಲ ಯಾರಿಗೂ ತಿಳಿದಿಲ್ಲ. ಆದರೂ, ಇದರ ವಾಸ್ತುಶಿಲ್ಪದ ಶೈಲಿ, 15 ಅಥವಾ 16ನೇ ಶತಮಾನದ ಕಾಲಘಟ್ಟಕ್ಕೆ ಹೋಲಿಕೆಯಾಗುವಂತಿವೆ.

ದರುಶನಕೆ ದಾರಿ…: ಹೊಸನಗರದಿಂದ ಕುಂದಾಪುರ ರಸ್ತೆಯಲ್ಲಿ ಸಾಗುವಾಗ, 2 ಕಿ.ಮೀ. ದೂರದಲ್ಲಿ ಬಲಕ್ಕೆ ತಿರುಗಿದರೆ ಸಿಗುವುದೇ “ಸುತ್ತ’ ಎಂಬ ಗ್ರಾಮ. ಈ ದೇಗುಲವಿರುವುದು ಇಲ್ಲಿಯೇ. ಸಮೀಪದಲ್ಲಿಯೇ ಕಾರಣಗಿರಿ ಇದ್ದು, ಸಿದ್ಧಿ ವಿನಾಯಕನನ್ನೂ ದರ್ಶಿಸಬಹುದು.

* ಶ್ರೀನಿವಾಸ ಮೂರ್ತಿ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next