ಹಿರೇಕೆರೂರ: ತಟ್ಟನೆ ನೋಡಿದರೆ ಪುಟ್ಟ ಅರಮನೆಯಂತೆ ಗೋಚರಿಸುತ್ತದೆ. ಆದರೆ, ಇದು ಅರಮನೆಯಲ್ಲ. ನಮ್ಮ ನಿಮ್ಮ ನಡುವೆ ಇರುವ ಸರ್ಕಾರಿ ಆಸ್ಪತ್ರೆ.!
ಹೌದು, ಜನಪದ ಕಲೆ, ಗ್ರಾಮೀಣ ಸೊಗಡು, ಎತ್ತ ನೋಡಿದರೂ ಮೌಲ್ಯಯುತ ಹಾಗೂ ಆರೋಗ್ಯವಂತ ಬದುಕು ಹೇಗಿರಬೇಕು ಎನ್ನವು ಸಂದೇಶ ಸಾರುವ ವರ್ಲಿ ಕಲೆ. ನಿಜವಾಗಿಯೂ ಇದು ಸರ್ಕಾರಿ ಆಸ್ಪತ್ರೆಯೇ ಎಂದು ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳುವಂಥ ವಾತಾವರಣ ರಟ್ಟೀಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರೆ ಅನ್ನಿಸದಿರದು. ಆಸ್ಪತ್ರೆ ಒಳಗೆ ಕಾಲಿಡುತ್ತಿದ್ದಂತೆ ಸುಂದರವಾದ ಚಿತ್ರಗಳು ಸ್ವಾಗತಿಸುತ್ತಿದ್ದು, ರೋಗಿಗಳ ಮನಸ್ಸಿಗೆ ಮುದ ನೀಡುವ ಜತೆಗೆ ಆಸ್ಪತ್ರೆ ಕಲಾ ಕೇಂದ್ರದಂತೆ ಕಂಗೊಳಿಸುತ್ತಿದೆ. ವರ್ಲಿ ಚಿತ್ರ ಕಲೆಯ ಚಿತ್ತಾರದಿಂದ ಶೃಂಗಾರಗೊಂಡ ಗೋಡೆಗಳು ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿ, ಮನಸ್ಸಿನ ದುಗಡನ್ನು ದೂರಮಾಡಿ, ಶಾಂತಿ ನೆಮ್ಮದಿ ನೀಡುವಲ್ಲಿ ಸಹಕಾರಿಯಾಗಿವೆ.
ನೇಶ್ವಿ ಸರ್ಕಾರಿ ಪ್ರೌಢ ಶಾಲೆಯ ಗೋಡೆಗಳಲ್ಲಿ ಬರೆಯಲಾಗಿದ್ದ ವರ್ಲಿ ಚಿತ್ರದ ಕಲೆಯ ಬಗ್ಗೆ ತಿಳಿದುಕೊಂಡಿದ್ದ ವೈದ್ಯಾಧಿಕಾರಿ ಡಾ| ಲೋಕೇಶಕುಮಾರ ಅವರು, ಆಸ್ಪತ್ರೆಯ ಆವರಣದಲ್ಲೂ ಇಂಥ ವಿಭಿನ್ನ ಪ್ರಯೋಗ ಮಾಡಲು ಯೋಚಿಸಿ, ವರ್ಲಿ ಚಿತ್ರಕಲೆ ಬರೆಸಲು ಆಸಕ್ತಿ ವಹಿಸಿ ಆರೋಗ್ಯ ಇಲಾಖೆಯ ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಸಹಕಾರ ಪಡೆದು ಸ್ವಚ್ಛ ಭಾರತ ಅಭಿಯಾನ ಕಾಯಕಲ್ಪ ಯೋಜನೆಯಲ್ಲಿ ಡಾ| ಲೋಕೇಶಕುಮಾರ ಅವರು ವರ್ಲಿ ಚಿತ್ರ ಬಿಡಿಸಲು ಸರ್ಕಾರಿ ಶಾಲೆಗಳ ಚಿತ್ರಕಲಾ ಶಿಕ್ಷಕರ ತಂಡವನ್ನು ಭೇಟಿ ಮಾಡಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಕಲಾ ಶಿಕ್ಷಕರು ಇದಕ್ಕೆ ಸ್ಪಂದಿಸಿ ಶಾಲಾ ರಜೆ ದಿನಗಳಲ್ಲಿ ನಿತ್ಯ ಸಂಜೆ ಬಂದು ಆಸ್ಪತ್ರೆ ಒಳಗೋಡೆಗಳ ಮತ್ತು ರೋಗಿಗಳ ಕೊಠಡಿಗಳ ಒಳಗೆ ವಿವಿಧ ಬಗೆಯ ಚಿತ್ರಗಳನ್ನು ಬಿಡಿಸಿದ್ದಾರೆ.
ಇಂಥ ಚಿತ್ರಗಳ ಮೂಲಕ ರೋಗಿಗಳಿಗೆ ಆರೋಗ್ಯ ಶಿಕ್ಷಣ, ಪ್ರಕೃತಿ ಸೌಂದರ್ಯ, ಜನಪದ ಶೈಲಿಯ ಕುರಿತು ತಿಳಿಸುವ ಕಾರ್ಯ ಮಾಡಲಾಗಿದೆ. ಈ ಎಲ್ಲ ಕಲ್ಪನೆಗೆ ಕಾಯಕಲ್ಪ ಕಾರ್ಯಕ್ರಮದಡಿ ಉತ್ತಮ ಮನೋಭಾವದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ವರ್ಲಿಚಿತ್ರವನ್ನು ಬಿಡಿಸಿಕೊಟ್ಟ ಸರ್ಕಾರಿ ಶಾಲೆಯ ಕಲಾ ಶಿಕ್ಷಕರಾದ ಪರಮೇಶ್ವರ ಹುಲ್ಮನಿ, ಪ್ರಶಾಂತ ಕಠಾರೆ, ಬಸವರಾಜ ಗುಡಿಹಿಂದ್ಲರ, ಬಾಬುಗೌಡ ದಳವಾಯಿ, ರಮೇಶ ಗುಡ್ಡಪ್ಪನವರ ಹಾಗೂ ಮಕರಿ ಗ್ರಾಮದ ಮನೋಜ ಹುಲ್ಮನಿ ಈ ಚಿತ್ರ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
•ಸಿದ್ಧಲಿಂಗಯ್ಯ ಗೌಡರ್