Advertisement

ಇದು ಹೃದಯಾಘಾತವಲ್ಲ, ಹೃದಯವೇ ದಿಢೀರ್‌ ನಿಂತದ್ದು: ಡಾ|ರಮಣರಾವ್‌

12:08 AM Oct 31, 2021 | Team Udayavani |

ಬೆಂಗಳೂರು: ಪುನೀತ್‌ ರಾಜಕುಮಾರ್‌ ಆರೋಗ್ಯವಾಗಿದ್ದರು ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಅವರಿಗೆ ಹೃದಯಾಘಾತವಾಗಿದ್ದಲ್ಲ, ದಿಢೀರ್‌ ಹೃದಯವೇ ನಿಂತು ಹೋಗಿದ್ದು…

Advertisement

ಇದು ಡಾ|ರಾಜ್‌ಕುಮಾರ್‌ ಕುಟುಂಬ ವೈದ್ಯ ಡಾ|ರಮಣರಾವ್‌ ಅವರ ಭಾವುಕ ನುಡಿಗಳು.. ಶುಕ್ರವಾರ ಬೆಳಗ್ಗೆ 11.20ರ ಸುಮಾರಿಗೆ ನಮ್ಮ ಚಿಕಿತ್ಸಾಲಯ(ಕ್ಲಿನಿಕ್‌)ಕ್ಕೆ ಪುನೀತ್‌ ಹಾಗೂ ಅಶ್ವಿ‌ನಿ ಬಂದಿದ್ದರು. ತಕ್ಷಣ ಒಳಗೆ ಕರೆದು, ಏನಾಯಿತು ಅಪ್ಪು ಎಂದು ವಿಚಾರಿಸಿದೆ. ಆಗ ಅಪ್ಪು, ದೇಹಕ್ಕೆ ಸ್ವಲ್ಪ ಸುಸ್ತು ಹಾಗೂ ಆಯಾಸವಾದಂತಿದೆ ಎಂದರು. ಏಕೆ ಇಷ್ಟೊಂದು ಬೆವರುತ್ತಿದ್ದೀರಿ ಎಂದು ಕೇಳಿದಾಗ, ಜಿಮ್‌, ಬಾಕ್ಸಿಂಗ್‌ ಸಹಿತವಾಗಿ ನಿತ್ಯದ ವ್ಯಾಯಾಮ ಮುಗಿಸಿ ನೇರ ಇಲ್ಲಿಗೆ ಬಂದಿದ್ದೇನೆ. ವ್ಯಾಯಾಮ ಮಾಡಿದ ನಂತರ ಬೆವರುವುದು ಸಹಜ ಎಂದು ಹೇಳಿದರು. ನಂತರ ಅವರ ಆರೋಗ್ಯ ತಪಾಸಣೆ ಮಾಡಿದಾಗ ರಕ್ತದೊತ್ತಡ, ಹೃಯದ ಬಡಿತ ಇತ್ಯಾದಿ ನಾರ್ಮಲ್‌ ಇತ್ತು. ತಕ್ಷಣವೇ ಇ.ಸಿ.ಜಿ.ಯನ್ನೂ ಮಾಡಿಸಿದೆವು. ಆಗ ಹೃದಯ ಬಡಿತ ಸರಿಯಿದ್ದರೂ, ಸ್ಟ್ರೈನ್‌ ಕಾಣಿಸಿಕೊಂಡಿತು. ಕೂಡಲೇ ಮುಂದಿನ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು ಎಂದು ಡಾ|ರಮಣರಾವ್‌ ಮಾಹಿತಿ ನೀಡಿದರು.

ಮುಂದೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಪ್ಪು ಈಗ ನಮ್ಮೊಂದಿಗೆ ಇಲ್ಲ. ಆದರೆ, ಅಪ್ಪು ನೆನಪು ಶಾಶ್ವತವಾಗಿ ನಮ್ಮೆಲ್ಲರೊಂದಿಗೂ ಇರುತ್ತದೆ. ಅಪ್ಪುಗೆ ಹೃದಯಾಘಾತವಾಗಿದ್ದಲ್ಲ. ಬದಲಾಗಿ ಹೃದಯವೇ ನಿಂತು ಹೋಗಿದ್ದು. ಇದಕ್ಕೆ ವೈದ್ಯ ಭಾಷೆಯಲ್ಲಿ ಸಡನ್‌ ಡೆಟ್‌(ದಿಢೀರ್‌ ಸಾವು) ಅಥವಾ ಕಾರ್ಡಿಯಕ್‌ ಅರೆಸ್ಟ್‌ ಎನ್ನುತ್ತಾರೆ. ದಿಢೀರ್‌ ಸಾವಿಗೆ ಹಲವು ಕಾರಣಗಳು ಇರುತ್ತದೆ. ಅಪ್ಪು ಅವರು ಇಂತಹದ್ದೇ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಸಡನ್‌ ಡೆತ್‌ಗೆ ಮುನ್ಸೂಚನೆ ಇರುವುದಿಲ್ಲ. ಈ ಸಂದರ್ಭದಲ್ಲಿ ದಿಢೀರ್‌ಆಗಿ ವಿವಿಧ ಚಟುವಟಿಕೆ (ದೇಹದಂಡನೆ) ಮಾಡಿದರೆ, ಹೃದಯದಲ್ಲಿರುವ ಕರನರಿ ಆಟ್ರಿಸ್‌ ಒಳಗೆ ಮೈನರ್‌ ಟೇರ್‌, ರಫ‌cರ್‌ ಆಗುತ್ತದೆ. ಅದರ ಮೇಲೆ ಹೊಸದಾಗಿ ಕ್ಲಾಟ್‌(ಹೆಪ್ಪುಗಟ್ಟುವುದು) ಆಗುತ್ತದೆ. ಮುಂದಿನ ಒಂದು ಅಥವಾ ಎರಡು ಗಂಟೆಯಲ್ಲಿ ಕ್ಲಾಟ್‌ ದೊಡ್ಡದಾಗಿ ಬ್ಲಾಕ್‌ ಮಾಡಿ, ಸಮಸ್ಯೆ ಹೆಚ್ಚಿಸುತ್ತದೆ. ಪುನೀತ್‌ಗೆ ಈ ರೀತಿ ಆಗಲು ಸಾಧ್ಯವಿಲ್ಲ. ಕಾರಣ, ನಿತ್ಯವೂ ವ್ಯಾಯಾಮ ಮಾಡುತ್ತಿದ್ದರು ಹಾಗೂ ಎಷ್ಟು ಸಮಯ ಯಾವ ವ್ಯಾಯಾಮ ಮಾಡಬೇಕು ಎಂಬುದರ ಸ್ಪಷ್ಟತೆ ಅವರಿಗೆ ಇತ್ತು ಮತ್ತು ಅದನ್ನು ನಿತ್ಯ ಅನುಸರಿಸುತ್ತಿದ್ದರು. ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲರಿಲ್ಲ. ಹೀಗಾಗಿ ಕಾರಣ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಪುನೀತ್ ಅಂತಿಮ ನಮನ : ಪುತ್ರಿಯ ಕಂಡು ಕಂಠೀರವದಲ್ಲಿ ಕಣ್ಣೀರ ಕೋಡಿ

Advertisement

1987ರಿಂದಲೂ ಡಾ| ರಾಜ್‌ ಕುಟುಂಬ ವೈದ್ಯನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಡಾ| ರಾಜ್‌ಕುಮಾರ್‌ ಅವರು ಚಿಕಿತ್ಸೆಗೆ ಇಲ್ಲಿಗೆ ಬರುತ್ತಿದ್ದರು. ಅಪ್ಪು ಅವರು 8 ವರ್ಷ ಇದ್ದಾಗಿನಿಂದ ಇಲ್ಲಿಗೆ ಚಿಕಿತ್ಸೆಗೆ ಬರುತ್ತಿದ್ದರು. ಡಾ| ರಾಜ್‌ಕುಮಾರ್‌ ಆರೋಗ್ಯದ ವಿಷಯವಾಗಿ ಎಲ್ಲರಿಗೂ ಮಾದರಿಯಾಗಿದ್ದರು ಎಂದು ಭಾವುಕರಾದರು.

ಅಪ್ಪುಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿಲ್ಲ. ಆಗಿಂದಾಗೆ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಜ್ವರ, ಶೀತ ಬಂದಾಗ ಕ್ಲಿನಿಕ್‌ಗೆ ಬರುತ್ತಿದ್ದರು. ಅದನ್ನು ಬಿಟ್ಟರೆ ಹೆಚ್ಚಿನ ಪ್ರವಾಸ ಮಾಡಿದಾಗ ಕ್ಲಿನಿಕ್‌ಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆ ಇರಲಿಲ್ಲ. ಇಡೀ ಕುಟುಂಬದಲ್ಲೇ ಹೆಚ್ಚು ಆರೋಗ್ಯವಾಗಿದ್ದ ವ್ಯಕ್ತಿ ಅಪ್ಪು. ಅವರಿಗೆ ಹೀಗೆ ಆಗಿದೆ ಎಂದರೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ನೋವು ಹಂಚಿಕೊಂಡರು.

ಅಪ್ಪು ಆರೋಗ್ಯವಾಗಿದ್ದುದ್ದು ಮಾತ್ರವಲ್ಲ, ಅವನ ಚಿಂತನೆ, ಯೋಚನೆಗಳು ಸಂಪೂರ್ಣ ಸಕಾರಾತ್ಮಕವಾಗಿದ್ದವು. ನಕಾರಾತ್ಮಕ ಭಾವನೆ, ಯೋಚನೆ ಅವರಲ್ಲಿ ಇರಲೇ ಇಲ್ಲ. ಡಾ|ರಾಜ್‌ ಅವರ ಪ್ರತಿ ಗುಣವೂ ಅವರಲ್ಲಿತ್ತು ಮತ್ತು ಅಪ್ಪುವನ್ನು ನೋಡಿದಾಗಲೆಲ್ಲ ಅಣ್ಣಾವ್ರು (ಡಾ|ರಾಜ್‌ಕುಮಾರ್‌) ನೆನಪಾಗುತ್ತಿತ್ತು. ಅಪ್ಪು ನನ್ನ ಮಗನಂತಿದ್ದ. ಅವನಲ್ಲಿರುವ ವಿನಯತೆ ಎಲ್ಲರಿಗೂ ಸ್ಫೂರ್ತಿ, ಪ್ರೇರಣೆಯಾಗಿತ್ತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next