Advertisement

ಇದು ನನ್ನ ಶ್ರೇಷ್ಠ ಇನ್ನಿಂಗ್ಸ್‌: ಹೆಟ್‌ಮೈರ್‌

10:02 AM Dec 18, 2019 | sudhir |

ಚೆನ್ನೈ: ಚೆನ್ನೈ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಮೂಲಕ 139 ರನ್‌ ಸಿಡಿಸಿದ ಶಿಮ್ರನ್‌ ಹೆಟ್‌ಮೈರ್‌, ಇದು ತನ್ನ ಶ್ರೇಷ್ಠ ಇನ್ನಿಂಗ್ಸ್‌ ಎಂದು ಹೇಳಿದ್ದಾರೆ.

Advertisement

“ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನನ್ನ ಅತ್ಯಧಿಕ ಸ್ಕೋರ್‌. ಅಲ್ಲದೇ ಚೇಸಿಂಗ್‌ ವೇಳೆ ಇಂಥದೊಂದು ಅಮೋಘ ಇನ್ನಿಂಗ್ಸ್‌ ದಾಖಲಾಗಿದೆ. ಹೀಗಾಗಿ ಇದು ನನ್ನ ಪಾಲಿಗೆ ಸ್ಮರಣೀಯ’ ಎಂದು ಹೆಟ್‌ಮೈರ್‌ ಖುಷಿಯಿಂದ ಹೇಳಿದರು. ಆದರೆ ತನ್ನಿಂದ ಪಂದ್ಯವನ್ನು ಫಿನಿಶ್‌ ಮಾಡಲು ಸಾಧ್ಯವಾಗದೇ ಇದ್ದುದಕ್ಕೆ ಅಸಮಾಧಾನವಿದೆ ಎಂದೂ ಹೇಳಿದರು.

“ನನ್ನ ಮತ್ತು ಹೋಪ್‌ ನಡುವೆ ಉತ್ತಮ ಹೊಂದಾಣಿಕೆ ಇದ್ದುದರಿಂದ ಇಂಥದೊಂದು ಇನ್ನಿಂಗ್ಸ್‌ ಸಾಧ್ಯವಾಯಿತು. ಹೋಪ್‌ ಯಾವತ್ತೂ ನಿಧಾನ ಗತಿಯಲ್ಲಿ ಆಡುತ್ತ ಹೋಗುತ್ತಾರೆ. ನಾನು ಆಕ್ರಮಣಕಾರಿ ಆಟಕ್ಕೆ ಇಳಿಯುತ್ತೇನೆ’ ಎಂದು ತಮ್ಮ ಆಟದ ಶೈಲಿಯ ಬಗ್ಗೆ ಹೇಳಿದರು.

ಐಪಿಎಲ್‌ ಬಗ್ಗೆ ಚಿಂತೆ ಇಲ್ಲ
ಡಿ.19ರ ಐಪಿಎಲ್‌ ಹರಾಜಿಗೆ ಕೆಲವೇ ದಿನಗಳಿರುವಾಗ ಶಿಮ್ರನ್‌ ಹೆಟ್‌ಮೈರ್‌ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದ್ದು, ಇದರಿಂದ ಅವರು ಉತ್ತಮ ಬೆಲೆಗೆ ಮಾರಾಟವಾಗುವ ನಿರೀಕ್ಷೆ ಇದೆ. ಆದರೆ ಹರಾಜಿನ ಬಗ್ಗೆ ತಾನು ಯೋಚಿಸುತ್ತಿಲ್ಲ ಎಂದರು.

“ನಾನು ಯಾವತ್ತೂ ಬ್ಯಾಟಿಂಗನ್ನು ಆನಂದಿಸುತ್ತೇನೆ. ಕೆಲವೊಮ್ಮೆ ರನ್‌ ಹರಿದು ಬರುತ್ತದೆ, ಕೆಲವೊಮ್ಮೆ ವೈಫ‌ಲ್ಯ ಕಾಣಬೇಕಾಗುತ್ತದೆ. 2019ರ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಪ್ರತೀ ಸಲವೂ ಬಲಿಷ್ಠನಾಗಿ ಮರಳಲು ನನ್ನ ಪ್ರಯತ್ನ ಸಾಗುತ್ತಿರುತ್ತದೆ’ ಎಂದರು.

Advertisement

22ರ ಹರೆಯದ ಎಡಗೈ ಆಟಗಾರನಾಗಿರುವ ಶಿಮ್ರನ್‌ ಹೆಟ್‌ಮೈರ್‌ ಕಳೆದ ಐಪಿಎಲ್‌ನಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದರು. 5 ಪಂದ್ಯಗಳಿಂದ ಕೇವಲ 90 ರನ್‌ ಮಾಡಿದ ಕಾರಣ ಅವರನ್ನು ಆರ್‌ಸಿಬಿ ಕೈಬಿಟ್ಟಿದೆ. ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಸಿಪಿಎಲ್‌) ಗಯಾನಾ ಅಮೆಜಾನ್‌ ವಾರಿಯರ್ ತಂಡವನ್ನು ಪ್ರತಿನಿಧಿಸುತ್ತಾರೆ.

“ಸಿಪಿಎಲ್‌ನಲ್ಲಿ ಆಡುವುದೊಂದು ವಿಶೇಷ ಅನುಭವ. ಅಂತಾರಾಷ್ಟ್ರೀಯ ಮಟ್ಟದ ಶ್ರೇಷ್ಠ ಆಟಗಾರರೊಂದಿಗೆ ಆಡುವ ಅವಕಾಶ ಇಲ್ಲಿ ಸಿಕ್ಕಿದೆ. ವಿಶ್ವ ಕ್ರಿಕೆಟಿನ ಶ್ರೇಷ್ಠ ಫಿನಿಶರ್‌ ಆಗಿರುವ ಕೈರನ್‌ ಪೊಲಾರ್ಡ್‌ ಜತೆ ಸದಾ ಬ್ಯಾಟಿಂಗ್‌ ಟಿಪ್ಸ್‌ ಪಡೆಯುತ್ತೇನೆ. ಬ್ಯಾಟಿಂಗ್‌ ಹೇಗೆ ಆರಂಭಿಸಬೇಕೆಂಬ ಬಗ್ಗೆ ಕ್ರಿಸ್‌ ಗೇಲ್‌ ಹೇಳಿಕೊಟ್ಟಿದ್ದಾರೆ. ನನ್ನ ಶೈಲಿಯಲ್ಲಿ ನಾನು ಬ್ಯಾಟ್‌ ಬೀಸುತ್ತ ಹೋಗುತ್ತೇನೆ’ ಎಂದು ಪಂದ್ಯಶ್ರೇಷ್ಠನಾಗಿ ಮೂಡಿಬಂದ ಹೆಟ್‌ಮೈರ್‌ ಹೇಳಿದರು.

ನಿಧಾನಗತಿಯ ಓವರ್‌: ವಿಂಡೀಸಿಗೆ ದಂಡ
ಚೆನ್ನೈ: ರವಿವಾರದ ಚೆನ್ನೈ ಏಕದಿನ ಪಂದ್ಯದ ವೇಳೆ ಓವರ್‌ ಗತಿ ಕಾಯ್ದುಕೊಳ್ಳಲು ವಿಫ‌ಲವಾದ ವೆಸ್ಟ್‌ ಇಂಡೀಸಿಗೆ ಭಾರೀ ದಂಡ ಹೇರಲಾಗಿದೆ. ಆಟಗಾರರಿಗೆಲ್ಲ ಪಂದ್ಯದ ಸಂಭಾವನೆಯ ಶೇ. 80ರಷ್ಟು ಮೊತ್ತದ ಜುಲ್ಮಾನೆ ವಿಧಿಸಲಾಗಿದೆ.

ವೆಸ್ಟ್‌ ಇಂಡೀಸ್‌ ನಿಗದಿತ ಅವಧಿಯಲ್ಲಿ 4 ಓವರ್‌ಗಳ ಹಿನ್ನಡೆಯಲ್ಲಿತ್ತು. ಇದನ್ನು ಪರಿಗಣಿಸಿದ ಐಸಿಸಿ ಮ್ಯಾಚ್‌ ರೆಫ್ರಿ ಡೇವಿಡ್‌ ಬೂನ್‌, ಪ್ರತೀ ಓವರಿಗೆ ಶೇ. 20ರಷ್ಟು ಪಂದ್ಯದ ಸಂಭಾವನೆಯನ್ನು ದಂಡವಾಗಿ ವಿಧಿಸಿದರು. ಹೀಗಾಗಿ ಗೆಲುವಿನ ಸಂಭ್ರಮದಲ್ಲಿದ್ದ ವಿಂಡೀಸಿಗರು ನಿರಾಸೆ ಅನುಭವಿಸಿದಂತಾಯಿತು.
ಮೈದಾನದ ಅಂಪಾಯರ್‌ಗಳಾದ ನಿತಿನ್‌ ಮೆನನ್‌, ಶಾನ್‌ ಜಾರ್ಜ್‌, ತೃತೀಯ ಅಂಪಾಯರ್‌ ರಾಡ್ನಿ ಟ್ಯುಕರ್‌ ಮತ್ತು 4ನೇ ಅಂಪಾಯರ್‌ ಅನಿಲ್‌ ಚೌಧರಿ ಅವರ ಹೇಳಿಕೆ ಆಲಿಸಿದ ಬಳಿಕ ಮ್ಯಾಚ್‌ ರೆಫ್ರಿ ಆಸ್ಟ್ರೇಲಿಯದ ಡೇವಿಡ್‌ ಬೂನ್‌ ಯಾವುದೇ ವಿಚಾರಣೆ ನಡೆಸದೆ ದಂಡ ಹೇರುವ ನಿರ್ಧಾರಕ್ಕೆ ಬಂದರು.

Advertisement

Udayavani is now on Telegram. Click here to join our channel and stay updated with the latest news.

Next