ಕರ್ನಾಟಕವು ಬೌದ್ಧರಿಗೆ ಆಸರೆ ನೀಡಿದ್ದಕ್ಕೆ ಮತ್ತು ಹೆಚ್ಚಾಗಿ ಕನ್ನಡಿಗ ಪ್ರವಾಸಿಗರು ಬರುವುದನ್ನು ಕಂಡು, ಲಡಾಖಿಗಳು ಕನ್ನಡವನ್ನು ಬಳಸಿ, ಕೃತಜ್ಞತೆ ತೋರುತ್ತಾರೆ…
ದೇಶದ ನೆತ್ತಿಯಲ್ಲಿರುವ ಲಡಾಖ್‌ಗೂ, ನಮ್ಮ ಕರ್ನಾಟಕಕ್ಕೂ ಏನಿಲ್ಲವೆಂದರೂ, 2400 ಕಿ.ಮೀ.ಗಳ ಅಂತರ. ಲಡಾಖ್ ಅನ್ನು ಮುಟ್ಟುವ ಹೊತ್ತಿಗೆ, ಕನ್ನಡಿಗ ಪ್ರವಾಸಿಗರು ಹತ್ತಾರು ರಾಜ್ಯಗಳನ್ನು ದಾಟುತ್ತಾರೆ. ಸುಮಾರು 50ಕ್ಕೂ ಅಧಿಕ ಭಾಷಾ ಸಂಸ್ಕೃತಿಗಳನ್ನು ದಾಟಿ, ಲಡಾಖ್ ಅನ್ನು ಮುಟ್ಟುತ್ತಾರೆ. ಅಚ್ಚರಿಯೆಂದರೆ, ಟಿಬೆಟಿಯನ್ ಮತ್ತು ಲಡಾಖಿ ಭಾಷೆ ಹೊಂದಿರುವ ಲಡಾಖ್‌ನಲ್ಲಿ ಕನ್ನಡದ ಕಂಪೂ ಹಬ್ಬಿದೆ. “ನಾನು ಕನ್ನಡಿಗ’ ಎಂದರೆ, “ನಮಸ್ತೇ ಬನ್ನಿ…’ ಎಂದು ಲಡಾಖಿ, ಅಚ್ಚಕನ್ನಡದಲ್ಲಿ ಸ್ವಾಗತಿಸುತ್ತಾನೆ!
ಹೌದು, ಲಡಾಖ್ ನಮ್ಮಿಂದ ಎಷ್ಟೇ ದೂರವಿದ್ದರೂ, ಅಲ್ಲೊಂದು ಪುಟ್ಟ ಕನ್ನಡ ಲೋಕವುಂಟು. ಅಲ್ಲಿ ಆಯಾ ಊರಿನ ಹೆಸರಿನಿಂದ ಕರೆಯಲ್ಪಡುವ ಅನೇಕ ಮಾನೆಸ್ಟರಿಗಳಿವೆ. ಡಿಸ್ಕಿತ್ ಮಾನೆಸ್ಟರಿ ಪ್ರವೇಶ ದ್ವಾರದಲ್ಲಿ, ಪ್ರವೇಶ ಟಿಕೆಟ್ ಪಡೆಯುವಾಗ, ಟಿಕೆಟ್ ನೀಡುತ್ತಿದ್ದ ಬೌದ್ಧನೊಬ್ಬ, “ನಮಸ್ಕಾರ… ನಿಮ್ಮದು ಎಷ್ಟು ಬೈಕುಗಳುಂಟು? ಎಷ್ಟು ಟಿಕೆಟ್ ಬೇಕು?’ ಎಂದು ಕೇಳಿದಾಗ, ನಮಗೆ ಅಚ್ಚರಿಯಾಗಿತ್ತು. ಕಣ್ಣರಳಿಸಿ, “ಓಹ್! ನಿಮಗೆ ಕನ್ನಡ ಬರುತ್ತಾ?’ ಎಂದು ಕೇಳಿದ್ದೆವು. ಅವರು ನಮ್ಮ ಬೈಕ್‌ನ “ಕೆ.ಎ. ರಿಜಿಸ್ಟರ್’ ನಂಬರ್ ಗಮನಿಸಿ, ಕನ್ನಡದಲ್ಲಿ ಮಾತಾಡಿದ್ದರು.
ಆ ಬೌದ್ಧ ವ್ಯಕ್ತಿ ಕೆಲ ಕಾಲ ಬೈಲುಕುಪ್ಪೆಯಲ್ಲಿ ಇದ್ದರಂತೆ. ಕರ್ನಾಟಕದವರು ಯಾರೇ ಸಿಕ್ಕರೂ, ಕನ್ನಡದಲ್ಲಿ ಮಾತಾಡುವುದು ಇವರಿಗೆ ಖುಷಿಯ ಸಂಗತಿ. ಬುದ್ಧನ ಎತ್ತರದ ಬೃಹತ್ ಪ್ರತಿಮೆ, ಮಾನೆಸ್ಟರಿ ನೋಡಿ, ಶಾಪಿಂಗ್‌ಗೆ ಅಂತ ಒಂದು ಚಿಕ್ಕ ಅಂಗಡಿಗೆ ಹೋದೆವು. ಅಲ್ಲೂ ಕನ್ನಡದ ಫಲಕಗಳು! ಮುಂಡಗೋಡು, ಬೈಲುಕುಪ್ಪೆ ವಾಸಿಗಳು, ಪ್ರವಾಸದ ಋತುವಿನಲ್ಲಿ ಅಲ್ಲಿಗೆ ಹೋಗಿ, ವ್ಯಾಪಾರದಲ್ಲಿ ತೊಡಗುತ್ತಾರೆ. ಹಾಗೆ ಹೋಗುವಾಗ, ತಮ್ಮೊಂದಿಗೆ ಕನ್ನಡವನ್ನೂ ಕೊಂಡೊಯ್ಯುತ್ತಾರೆ. ಅಲ್ಲಿರುವ ಮಾನೆಸ್ಟರಿಯ ದೊಡ್ಡ ಫಲಕದಲ್ಲೂ ಕನ್ನಡದ ಸಾಲುಗಳಿವೆ.
ಬೈಲುಕುಪ್ಪೆ, ಮುಂಡಗೋಡಿನಲ್ಲಿ ಟಿಬೆಟಿಯನ್ ನಿರಾಶ್ರಿತರ ಬೃಹತ್ ಕ್ಯಾಂಪ್‌ಗ್ಳಿವೆ. ಕರ್ನಾಟಕವು ಬೌದ್ಧರಿಗೆ ಆಸರೆ ನೀಡಿದ್ದಕ್ಕೆ ಮತ್ತು ಹೆಚ್ಚಾಗಿ ಕನ್ನಡಿಗ ಪ್ರವಾಸಿಗರು ಬರುವುದನ್ನು ಕಂಡು, ಲಡಾಖಿಗಳು ಕನ್ನಡವನ್ನು ಬಳಸಿ, ಕೃತಜ್ಞತೆ ತೋರುತ್ತಾರೆ. ಇನ್ನು ರಜೆಯ ದಿನಗಳಲ್ಲಿ ಮೈಸೂರಿನಲ್ಲಿ ಓದುವ ಬೌದ್ಧ ವಿದ್ಯಾರ್ಥಿಗಳು, ಫುಟ್ಬಾಲ್ ತಂಡವನ್ನು ಕಟ್ಟಿಕೊಂಡು, ಇಲ್ಲಿಗೆ ಆಡಲು ಬರುತ್ತಾರೆ. ಪ್ರತಿವರ್ಷವೂ ಲಡಾಖಿಗಳ ಮೇಲೆ ಇವರು ಪಂದ್ಯ ಕಟ್ಟುತ್ತಾರೆ. ಈ ಹೊತ್ತಲ್ಲೂ ಸಹಜವಾಗಿ ಭಾಷಾ ವಿನಿಮಯವಾಗುತ್ತದೆ.
* ಪುಟ್ಟ ಹೊನ್ನೇಗೌಡ