Advertisement

ಹಿಂದಿನ ಒಪ್ಪಂದಕ್ಕಿಂತ ಇದೇ ಉತ್ತಮ: ಕೇಂದ್ರ

08:15 AM Feb 08, 2018 | |

ನವದೆಹಲಿ: ಫ್ರಾನ್ಸ್‌ ಜತೆಗಿನ ರಾಫೆಲ್‌ ಡೀಲ್‌ ಕುರಿತಂತೆ ಕಾಂಗ್ರೆಸ್‌ ಎತ್ತಿರುವ “ಅನುಮಾನ’ಗಳ ಬಗ್ಗೆ ಉತ್ತರ ಕೊಟ್ಟಿರುವ ಕೇಂದ್ರ ಸರ್ಕಾರ, ನಿಮ್ಮ ಅವಧಿಯ ಡೀಲ್‌ಗಿಂತಲೂ ಇದು ಅತ್ಯುತ್ತಮವಾಗಿದೆ ಎಂದು ಹೇಳಿದೆ. ಈ ಸಂಬಂಧ ರಕ್ಷಣಾ ಇಲಾಖೆ ಹೇಳಿಕೆಯೊಂದನ್ನು ಹೊರಡಿಸಿದ್ದು, ಕಳೆದ ಸರ್ಕಾರಕ್ಕಿಂತ ಚೆನ್ನಾಗಿಯೇ ವ್ಯವಹರಿಸಿದ್ದೇವೆ ಎಂದು ಹೇಳಿದೆ. ಹಾಗೆಯೇ ಕಾಂಗ್ರೆಸ್‌ ಹೇಳಿದಂತೆ ಈ ಡೀಲ್‌ನಲ್ಲಿ ಅನುಮಾನ ಪಡುವ ಯಾವ ಸಂಗತಿಗಳೂ ಇಲ್ಲವೆಂದೂ ಹೇಳಿದೆ. 

Advertisement

ಇದರ ಜತೆಗೆ 36 ರಾಫೆಲ್‌ ವಿಮಾನಗಳ ಖರೀದಿಗೆ ಮಾಡಲಾಗಿರುವ ಅಂದಾಜು ವೆಚ್ಚದ ಬಗ್ಗೆ ಸಂಸತ್‌ನಲ್ಲೇ ಮಾಹಿತಿ ನೀಡಲಾಗಿದೆ. ಆದರೆ, 2008ರಲ್ಲಿ ಈ ಯುದ್ಧ ವಿಮಾನಗಳನ್ನು ಖರೀದಿ ಮಾಡುವಾಗ ಮಾಡಿಕೊಂಡಿರುವ ಒಪ್ಪಂದದಂತೆ ನಿಖರ ವೆಚ್ಚ ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದೂ ಅದು ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. 

ಕಾಂಗ್ರೆಸ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲಾಖೆ, ಇಂಥ ಆರೋಪಗಳಿಗೆ ಉತ್ತರ ಕೊಡುವುದು ಸರಿಯಾದ ಕ್ರಮವೂ ಅಲ್ಲ. ಆದರೆ, ಪ್ರತಿಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಇದರಿಂದಾಗಿ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕಾಗಿ ಸ್ಪಷ್ಟನೆ ನೀಡಲಾಗುತ್ತಿದೆ ಎಂದೂ ಹೇಳಿದೆ. 

ಅಲ್ಲದೆ ರಾಫೆಲ್‌ ಕಂಪನಿಯೊಂದಿಗೆ ಡೀಲ್‌ ಮುಕ್ತಾಯವಾಗಿದ್ದರೂ ಬೇರೊಂದು ಕಂಪನಿ ಜತೆ ಸರ್ಕಾರ ಏಕೆ ಮಾತುಕತೆ ನಡೆಸಲಿಲ್ಲವೆಂಬ ಆರೋಪಕ್ಕೂ ತಿರುಗೇಟು ನೀಡಿರುವ ಸರ್ಕಾರ, ಯುಪಿಎ ಸರ್ಕಾರವೇ ಈ ಹಿಂದೆ ಒಪ್ಪಂದವೊಂದು ಮುಕ್ತಾಯದ ಹಂತಲ್ಲಿದ್ದಾಗ ಬೇರೆ ಕಂಪನಿಗಳು ಬಿಡ್‌ ಹಾಕಲು ಮುಂದೆ ಬಂದಿದ್ದರೂ ಇದನ್ನು ತಿರಸ್ಕರಿಸಿ ರಾಫೆಲ್‌ನೊಂದಿಗೇ 2012ರಲ್ಲಿ ಡೀಲ್‌ ಮುಂದುವರಿಸಿದ್ದು ಮರೆತಿದೆ ಎಂದು ಹೇಳಿದೆ. ಅಲ್ಲದೆ 36 ವಿಮಾನಗಳ ಖರೀದಿ ಸಂಬಂಧ ಫ್ರಾನ್ಸ್‌ನೊಂದಿಗೆ ಸಾಮರ್ಥ್ಯ, ದರ, ಉಪಕರಣಗಳು, ವಿತರಣೆ, ನಿರ್ವಹಣೆ, ತರಬೇತಿ ವಿಚಾರದಲ್ಲಿ ಉತ್ತಮವಾಗಿಯೇ ಮಾತುಕತೆ ನಡೆಸಲಾಗಿದೆ ಎಂದೂ ಇಲಾಖೆ ಸ್ಪಷ್ಟವಾಗಿ ಹೇಳಿದೆ. 

ರಾಫೆಲ್‌ ಬಗ್ಗೆ ಪ್ರತಿಪಕ್ಷಗಳ ಟೀಕೆ: ಈ ಮಧ್ಯೆ, ಸಂಸತ್‌ನ ಉಭಯ ಸದನಗಳಲ್ಲೂ ಕಾಂಗ್ರೆಸ್‌ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ರಾಫೆಲ್‌ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದವು. ಅಲ್ಲದೆ, ಹಿಂದೆ ಯುಪಿಎ ಸರ್ಕಾರದಲ್ಲಿನ ಡೀಲ್‌ಗಿಂತಲೂ ನಾಲ್ಕು ಪಟ್ಟು ಹೆಚ್ಚು ಹಣ ನೀಡಲಾಗಿದೆ. ಅಲ್ಲದೆ ರಕ್ಷಣಾ ಸಚಿವರಿಗೇ ಗೊತ್ತಿಲ್ಲದಂತೆ ಪ್ರಧಾನಿಗಳೇ ಫ್ರಾನ್ಸ್‌ ಸರ್ಕಾರದ ಜತೆ ಮಾತುಕತೆ ನಡೆಸಿದ್ದಾರೆ ಎಂದು ಆರೋಪಿಸಿದವು.

Advertisement

ರಾಫೆಲ್‌ ಡೀಲ್‌ ಕುರಿತ ಕಾಂಗ್ರೆಸ್‌ ಆರೋಪಕ್ಕೆ ರಕ್ಷಣಾ ಇಲಾಖೆ ಸ್ಪಷ್ಟನೆ
ಯುಪಿಎ ಅವಧಿಗಿಂತಲೂ ಚೆನ್ನಾಗಿಯೇ ವ್ಯವಹರಿಸಿ ಖರೀದಿಸಿದ್ದೇವೆ
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಕೇಂದ್ರ ಸರ್ಕಾರದ ಪ್ರತ್ಯುತ್ತರ
ಪ್ರತಿಪಕ್ಷಗಳ ಆರೋಪದಿಂದಾಗಿ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಈ ಸ್ಪಷ್ಟನೆ

Advertisement

Udayavani is now on Telegram. Click here to join our channel and stay updated with the latest news.

Next