ನಮ್ಮೂರು, ನಮ್ಮ ಬೀದಿ, ನಮ್ಮನೆ… ಹೀಗಂತ, ಫೇಸ್‌ಬುಕಲ್ಲೋ, ಇನ್ಸ್‌ಟಾಗ್ರಾಂನಲ್ಲಿ ಹಾಕ್ಕೊಂಡು ನಮ್ಮತನ ಮೆರೆಯುವವರು ಇದ್ದಾರೆ. ಅವರು ಊರಿನ ಕಡೆ ತಲೆ ಕೂಡ ಹಾಕಲ್ಲ. ಬದಲಾಗಿ, ಹೆಮ್ಮೆನ ಮಾತ್ರ ಮನಸ್ಸಲ್ಲಿ ಕಟ್ಟಿಹಾಕಿಕೊಂಡಿರುತ್ತಾರೆ. ಆದರೆ, ಈ ಬಳ್ಳಾರಿಯ ಸಿಎಸ್‌ಪುರದ ಹುಡುಗರು ಈ ರೀತಿ ಅಲ್ಲ, ಬರಿ ಮಾತಲ್ಲಿ ಊರಿನ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಕಾಯಾ, ವಾಚ, ಮನಸಾ ತಮ್ಮ ಹಳ್ಳಿಯ ಬದುಕನ್ನು ಹಳಿಗೆ ತರಲು ಶ್ರಮಿಸುತ್ತಿದ್ದಾರೆ. ರಾಜ್ಯದ ವಿವಿದೆಡೆ ಉದರ ನಿಮಿತ್ತ ಹರಿದು ಹಂಚಿ ಹೋಗಿರುವ ಯುವಕರು, ಊರಿನ ಅಭಿವೃದ್ಧಿ, ಸೇವೆಯ ವಿಷಯ ಬಂದಾಗ ಮಾತ್ರ ಒಂದೆಡೆ ಸೇರಿ ಬಿಡುತ್ತಾರೆ!.
ಅದು ಎರಡು ಸಾವಿರ ಮನೆಗಳ ಗ್ರಾಮ. ಪ್ರತಿ ಮನೆಯಲ್ಲೂ ವಿದ್ಯಾವಂತ ಯುವಕರು. ಇವರಿಗೆಲ್ಲಾ ತಮ್ಮ ಊರೆಂದರೆ ಅದಮ್ಯ ಅಭಿಮಾನ ಮತ್ತು ಪ್ರೀತಿ. ಇವರೆಲ್ಲಾ ಬರೀ ಮಾತಲ್ಲಿ ಊರಿನ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಕಾಯಾ, ವಾಚಾ, ಮನಸಾ ತಮ್ಮ ಹಳ್ಳಿಯ ಬದುಕನ್ನು ಹಳಿಗೆ ತರಲು ಶ್ರಮಿಸುತ್ತಿದ್ದಾರೆ. ರಾಜ್ಯದ ವಿವಿದೆಡೆ ಉದರ ನಿಮಿತ್ತ ಹರಿದು ಹಂಚಿ ಹೋಗಿರುವ ಯುವಕರು ಊರಿನ ಅಭಿವೃದ್ಧಿ, ಸೇವೆಯ ವಿಷಯ ಬಂದಾಗ ಮಾತ್ರ ಒಂದೆಡೆ ಸೇರಿ ಬಿಡುತ್ತಾರೆ!. “ನಮ್ಮ ಊರು ನಮ್ಮ ಹೆಮ್ಮೆ’ ಎನ್ನುವ ಈ ಯುವಕರಿಂದಾಗಿ, ಊರಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಯುವಕರ ಸಂಘಟಿತ ಮತ್ತು ಶಿಸ್ತುಬದ್ಧ ಸಮಾಜಮುಖೀ ಕೆಲಸಗಳಿಂದ ಇದೀಗ ಈ ಗ್ರಾಮ ಎಲ್ಲರ ಗಮನ ಸೆಳೆಯುತ್ತಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಚಂದ್ರಶೇಖರ ಪುರ ಉರುಫ್ ಸಿ.ಎಸ್ ಪುರದಲ್ಲಿ ವಿದ್ಯಾವಂತ ಮತ್ತು ಪ್ರಜ್ಞಾವಂತ ಯುವಕರ ದೊಡ್ಡ ಪಡೆಯೇ ಇದೆ. ಐದು ವರ್ಷದ ಕೆಳಗೆ, ಗಣೇಶೋತ್ಸವ ಆಚರಣೆ ಕಾಲಕ್ಕೆ ಈ ಯುವಕರಲ್ಲಿ “ನಾವು ಈ ಉತ್ಸವದ ನೆಪದಲ್ಲಿ ಸ್ಮರಣೀಯ ಕೆಲಸ ಮಾಡಬೇಕು..’ ಎನ್ನುವ ಯೋಚನೆ ಬಂತು. ಅದಕ್ಕಾಗಿ ದೇವರ ಕಾಣಿಕೆ ಮತ್ತು ಪಟ ಸವಾಲಿನಿಂದ ಬಂದ ಹಣವನ್ನು ಸದ್ವಿನಿಯೋಗ ಮಾಡಿಕೊಳ್ಳಲು ಮುಂದಾದರು. ಅದರೊಟ್ಟಿಗೆ ಗ್ರಾಮದ ಅಭಿವೃದ್ಧಿ ಮತ್ತು ಸುಧಾರಣೆಗೆ ಮತ್ತೇನು ಮಾಡಬಹುದು? ಎಂದು ಚರ್ಚಿಸಿ, ಪಟ್ಟಿ ಮಾಡಿದರು. 2003-2004 ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ತಂಡ, ಮೊದಲಿಗೆ ನಿವೃತ್ತ ಯೋಧರು, ತಮ್ಮ ಊರಿನ ಶಾಲೆಯಲ್ಲಿ ಸೇವೆಗೈದು ನಿವೃತ್ತರಾದ ಶಿಕ್ಷಕರಿಗೆ ಸನ್ಮಾನಿಸಿತು. ಈ ವೇಳೆ ಸೈನಿಕರು ಮತ್ತು ಶಿಕ್ಷಕರ ಸೇವೆಯ ಮಹತ್ವದ ಬಗ್ಗೆ ಜನರಿಗೆ ತಿಳಿಸಿ, ಅವರಲ್ಲಿ ಅಭಿಮಾನ ಹುಟ್ಟುವಂತೆ ಮಾಡಿದರು. ಅಲ್ಲಿಂದ ಸಮಾಜದ ಸೇವೆಯ ಕಿಡಿ ಹತ್ತನೇ ತರಗತಿಯ ಬ್ಯಾಚ್‌ನಿಂದ ಬ್ಯಾಚ್‌ಗೆ ಹಬ್ಬುತ್ತಾ ಹೋಯಿತು. ಪರಿಣಾಮವಾಗಿ, 2003- 2004 ರಿಂದ ಇಲ್ಲಿಯವರಿಗಿನ ಸುಮಾರು 14 ಬ್ಯಾಚ್‌ಗಳ 1500-1800 ಯುವಕರು ಸದಾ ಚಟುವಟಿಕೆಯಲ್ಲಿ ಇದ್ದಾರೆ. ವರ್ಷವಿಡಿ ಹತ್ತಾರು ಸಮಾಜಮುಖೀ ಕೆಲಸಗಳನ್ನು ಊರಲ್ಲಿ ಹಮ್ಮಿಕೊಳ್ಳುತ್ತಲೇ ಇರುತ್ತಾರೆ.
ಗ್ರಾಮದ ಸ್ವತ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ತಾವು ಓದಿದ ಪ್ರçಮರಿ ಮತ್ತು ಹೈಸ್ಕೂಲ್ ಶಾಲೆಯ ಆವರಣವನ್ನು ಶುಚಿಗೊಳಿಸಿದ್ದಾರೆ. ಗ್ರಾಮದ ಪ್ರತಿ ಓಣಿ, ಚರಂಡಿಗಳನ್ನೂ ಇವರೇ ಸ್ವತ್ಛ ಮಾಡಿದ್ದು. ಈಗಲೂ ಆ ಕೆಲಸ ಮಾಡುತ್ತಿದ್ದಾರೆ ಕೂಡ. ಜನರಲ್ಲಿ ಶುಚಿತ್ವದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿರುವ ಇವರು, ಪ್ಲಾಸ್ಟಿಕ್ ಬಳಕೆ ಮತ್ತು ಬಯಲು ಬಹಿರ್ದೆಸೆಗೆ ನಿರ್ಬಂಧ ಹೇರಿದ್ದಾರೆ. ಊರಿನ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆ ತಲುಪಿ ದಶಕಗಳೇ ಕಳೆದಿತ್ತು. ಆದರೂ, ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಆಗ ಈ ಯುವಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಕುಳಿತರು. ಹೊಸ ಕೊಠಡಿ ಮತ್ತು ಪ್ರತ್ಯೇಕ ಅಡುಗೆ ಕೋಣೆ ನಿರ್ಮಿಸುವಂತೆ ಪಟ್ಟು ಹಿಡಿದರು. ಯುವಕರ ಹೋರಾಟದ ಮುಂದೆ ಶಿಕ್ಷಣ ಇಲಾಖೆ ಮಂಡಿಯೂರಿತು.
ಈಗ ನಾಲ್ಕು ಹೊಸ ಕೊಠಡಿಗಳು, ಪ್ರತ್ಯೇಕ ಬಿಸಿ ಊಟದ ಅಡುಗೆ ಕೋಣೆ ಕಟ್ಟಿಸಿದ್ದಾರೆ. ಜೊತೆಗೆ ಶಿಕ್ಷಕರ ಕೊರತೆ ನೀಗಿಸಿದೆ.
ಊರನ್ನು ಹಸಿರುಮಯ ಮಾಡುವ ಸಂಕಲ್ಪ ತೊಟ್ಟಿದ್ದಾರೆ. ಇದಕ್ಕಾಗಿ ಈಗಾಗಲೇ 800 ಸಸಿಗಳನ್ನು ಹಾಕಿದ್ದಾರೆ. “ಕೇವಲ ಗುಂಡಿ ತೆಗೆದು, ಸಸಿ ನೆಟ್ಟು ಸುಮ್ಮನಾಗುತ್ತಿಲ್ಲ. ಪ್ರತಿ ಗಿಡಗಳ ಹಾರೈಕೆ ಮಾಡುತ್ತೇವೆ. ಇದಕ್ಕೆ ಬೇಸಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತೇವೆ. ಹೀಗಾಗಿ ಬಹುತೇಕ ಗಿಡಗಳು ಬೆಳೆದು ದೊಡ್ಡದಾಗುತ್ತಿವೆ..’ ಎನ್ನುತ್ತಾರೆ ಗ್ರಾಮದ ಯುವಕ ಬಸವನಗೌಡ. “ಮನುಷ್ಯನಿಗೊಂದು ಸಸಿ ಎನ್ನುವ ಪರಿಕಲ್ಪನೆ ಇಟ್ಟುಕೊಂಡಿದ್ದೇವೆ. ಎಲ್ಲರೂ ಕಡ್ಡಾಯವಾಗಿ ಗಿಡ ಬೆಳೆಸಬೇಕು. ಗ್ರಾಮದ ಅಂಚಿನಲ್ಲಿರುವ ಕಾಡನ್ನು ಸಂರಕ್ಷಿಸಬೇಕು ಎಂದು ಈಗಾಗಲೇ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ನಮ್ಮೂರಿನ ಮಕ್ಕಳು, ಹಿರಿಯರಾದಿಯಾಗಿ ಎಲ್ಲರೂ ಸಹಕಾರ ಕೊಡುತ್ತಿದ್ದಾರೆ. ಇನ್ನು ಸ್ವಲ್ಪ ವರ್ಷಗಳಲ್ಲೇ ನಮ್ಮೂರು ಮರಗಾಡು ಆಗುತ್ತದೆ..’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ ಯುವಕರಾದ ಷಡಾಕ್ಷರಿ,ಮಲ್ಲಿಕಾರ್ಜುನ ಮತ್ತು ಪ್ರಸನ್ನಕುಮಾರ್.
ಊರಿನ ಅಂಚಿನಲ್ಲಿ ನೀರಿನ ತೊಟ್ಟಿ ಇದೆ. ರಾತ್ರಿ ಹೊತ್ತಲ್ಲಿ ಕರಡಿ, ಹಂದಿ ಮುಂತಾದ ಕಾಡು ಪ್ರಾಣಿಗಳು ನೀರಿನ ದಾಹ ನೀಗಿಸಿಕೊಳ್ಳಲು ಇಲ್ಲಿಗೆ ಬರುತ್ತವೆ. ಇದರಿಂದ ಮುಂದೊಂದು ದಿನ ಜನರಿಗೆ ಅಪಾಯ ತಪ್ಪಿದ್ದಲ್ಲ ಎಂದು ಮನಗಂಡ ಈ ಯುವಕರು ಜನರ ಜೀವ ಹಾಗೂ ಕಾಡುಪ್ರಾಣಿಗಳ ದಾಹ ನೀಗಿಸುವ ದೃಷ್ಟಿಯಿಂದ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಒಂದು ಬೋರ್‌ವೆಲ್ ಕೊರೆಸಿದ್ದಾರೆ. ಈಗ ಕಾಡು ಪ್ರಾಣಿಗಳು, ಊರಿನ ಜಾನುವಾರುಗಳಿಗೆ ಇದೇ ನೀರಿನ ಮೂಲ! ಬೋರ್‌ವೆಲ್ ನಿರ್ವಹಣೆಯನ್ನು ಈ ಯುವಕರೇ ಮಾಡುತ್ತಿದ್ದಾರೆ. ಗಣೇಶೋತ್ಸವದ ನಿಮಿತ್ತ ಸಂಗ್ರಹಿಸಿದ ಹಣ ಏಳು ಲಕ್ಷ ದಾಟಿದ್ದು, ಇದನ್ನು ತಮ್ಮೂರಿನ ಆರಾಧ್ಯ ದೈವ ಕಲ್ಲೇಶ್ವರ ದೇಗುಲದ ಜೀರ್ಣೋದ್ಧಾರಕ್ಕೆ ನಿಯೋಗಿಸುತ್ತಿದ್ದಾರೆ!. ” ನಮ್ಮೂರಿನ ಪ್ರತಿ ಬ್ಯಾಚ್‌ಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ “ದೋಸ್ತಿ ದರ್ಬಾರ್’ ” ಕುರುಕ್ಷೇತ್ರ ಬಾಯ್ಸ’ ” ನವಗ್ರಹ’.. ಹೀಗೆ ಹತ್ತಾರು ವ್ಯಾಟ್ಸಾಪ್ ಗ್ರೂಪ್‌ಗ್ಳು ಇವೆ. ಊರಲ್ಲಿ ಇಂತಹ ಕೆಲಸ ತುರ್ತು ಆಗಬೇಕು ಎನ್ನುವ ಯೋಚನೆ ಬಂದರೆ ಸಾಕು, ಅದನ್ನು ಎಲ್ಲರೊಂದಿಗೆ ಶೇರ್ ಮಾಡುತ್ತೇವೆ. ಬೇಕಾಗುವ ಹಣ ಮತ್ತು ಕೆಲಸ ಹಮ್ಮಿಕೊಳ್ಳುವ, ದಿನದ ನಿಗದಿಯ ಬಗ್ಗೆ ಒಂದು ನಿರ್ಧಾರಕ್ಕೆ ಬರುತ್ತೇವೆ. ಅಂದು ಆ ಕೆಲಸವನ್ನು ಪಟ್ಟು ಹಿಡಿದು ಮುಗಿಸುತ್ತೇವೆ.
ಒಟ್ಟಿನಲ್ಲಿ ನಮ್ಮೂರಿನಲ್ಲಿ ಸಾಕಷ್ಟು ಸುಧಾರಣೆ ಮತ್ತು ಅಭಿವೃದ್ಧಿ ಆಗಿದೆ. ನಾವು ನಮ್ಮೂರಿನ ಸೌಕರ್ಯ ಮತ್ತು ಅಭಿವೃದ್ಧಿಗಾಗಿ ಎಲ್ಲದಕ್ಕೂ ಸರಕಾರದ ಕಡೆ ಮುಖ ಮಾಡದೇ ನಮ್ಮಿಂದ ಸಾಧ್ಯವಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ…’ ಎನ್ನುತ್ತಾರೆ ಯುವಕ ಮಲ್ಲಿಕಾರ್ಜುನ.
ಸ್ವರೂಪಾನಂದ ಎಂ. ಕೊಟ್ಟೂರು