Advertisement
ಸುತ್ತಲಿನ ಪರಿಸರದಿಂದಲೇ ಸಂಗ್ರಹಿಸಿದ ಸೊಪ್ಪುಗಳು, ಹಣ್ಣುಗಳು ಮತ್ತು ಹೆಚ್ಚಾಗಿ ಸಾವಯವ ವಸ್ತುಗಳಿಂದಲೇ ತಯಾರಿಸಿದ ಆಹಾರ ಮತ್ತು ಪಾನೀಯಗಳು, ದಿನನಿತ್ಯ ಎರಡು ಸಲ ಪ್ರಕೃತಿ ವೀಕ್ಷಣೆಯ ನಡಿಗೆ ಮತ್ತು ಪರಿಸರದ ಜನರ ಮನೆಗೆ ಭೇಟಿ ಮತ್ತು ಅನುಭವ ಹಂಚಿಕೆ ಹಾಗೂ ಕಾಡಿನೊಳಗೆ ಟ್ರೆಕ್ಕಿಂಗ್ ಇಂತಹ ಅನೇಕ ಪರಿಸರ ಕಾಳಜಿ ಹೆಚ್ಚಿಸುವ ಕಾರ್ಯಕ್ರಮಗಳು ಈ ಶಿಬಿರದ ವಿಶೇಷ. ಅಡ್ವೆಯವರ ಗೆಳೆಯರ ಬಳಗ ಮತ್ತು ಹೆತ್ತವರಿಂದಲೇ ಬಹುತೇಕ ಕಾರ್ಯಕ್ರಮಗಳ ಆಯೋಜನೆ. ಪರಿಸರದ ಕುಶಲಕರ್ಮಿಗಳಿಂದ ಕುಂಬಾರಿಕೆ, ಬುಟ್ಟಿ ಹೆಣೆಯುವುದು, ಗಿಡಗಳ ನರ್ಸರಿ ಬಗ್ಗೆ ಪ್ರಾತ್ಯಕ್ಷಿಕೆ, ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪರಿಂದ ಸ್ಥಳದಲ್ಲಿಯೇ ಯಾಂತ್ರಿಕ ಆಟಿಕೆಗಳ ತಯಾರಿ, ವಾಣಿ ಪೆರಿಯೋಡಿಯವರಿಂದ ಹಾಡು – ಕಥೆ, ರಂಗಕರ್ಮಿ ನಂದಕಿಶೋರ್ ಅವರಿಂದ ಮೋಜಿನ ಆಟಗಳು, ಸಚ್ಚು ಮೈಸೂರು ಇವರಿಂದ ಒರಿಗಾಮಿ – ಪೇಪರ್ ತಯಾರಿ – ಆನಿಮೇಷನ್, ಮುರಾರಿ ಮತ್ತು ಬಳಗದವರಿಂದ ಗೊಂಬೆ ತಯಾರಿ ಮತ್ತು ಗೊಂಬೆ ಆಟ, ಅಡ್ವೆ ಮತ್ತು ಕಲಾವಿದ ಜಯವಂತ ಅವರಿಂದ ಟೈ ಎಂಡ್ ಡೈ ಬಣ್ಣಗಾರಿಕೆ, ಪಿಲಿಕುಳದ ಉದಯ ಶೆಟ್ಟಿ ಮತ್ತು ಸ್ಥಳೀಯರಿಂದ ಕಾಡಿನ ಗಿಡ ಮರಗಳ ಪರಿಚಯ, ಕಾರ್ಕಳದ ಮಮತಾ ರೈ ಅವರಿಂದ ಸುಲಭ ವಿಧಾನದಲ್ಲಿ ಆರೋಗ್ಯಕರ ಚಾಕೊಲೇಟ್, ಕುಕ್ಕೀಸ್, ಬ್ರೆಡ್ ಮತ್ತು ಕೇಕ್ ತಯಾರಿಯ ಪಾಠ. ಎಲ್ಲದರಲ್ಲೂ ಸಾವಯವ ಬೆಲ್ಲ, ರಾಗಿ, ಗೋಧಿಯ ಬಳಕೆ ಮಾತ್ರವಲ್ಲ ಪರಿಸರಸಹ್ಯ ಮನೋಭಾವನೆಯ ಬೆಳವಣಿಗೆಗೆ ಒತ್ತು. ಅಡ್ವೆಯವರು ಸ್ವತಃ ಶಿಬಿರಕ್ಕಾಗಿ ತಯಾರಿಸಿದ ಮಣ್ಣಿನ ಇಟ್ಟಿಗೆಯ ಓವನ್‌ನಲ್ಲಿ ಬೇಯಿಸಿದ ಮಸಾಲಾ ಬ್ರೆಡ್ ರುಚಿಯಲ್ಲೂ ನೋಟದಲ್ಲೂ ಯಾವುದೇ ಬೇಕರಿ ಬ್ರೆಡ್‌ಗೆ ಸಡ್ಡು ಹೊಡೆಯುವಂತಿತ್ತು. ಕೊಕ್ಕೊ ಮರದಿಂದ ಹಣ್ಣನ್ನು ಮಕ್ಕಳೇ ಕೊಯಿದು ಸಂಸ್ಕರಿಸಿ ತಯಾರಿಸಿದ ಚಾಕೊಲೇಟ್ ಅಂತೂ ನಿಮಿಷಾರ್ಧದಲ್ಲಿಯೇ ಖಾಲಿ ಹಾಗೂ ಅದರ ಕುಕ್ಕೀಸ್‌ಗಳಿಗೆ ನಿರಂತರ ಬೇಡಿಕೆ!
Related Articles
Advertisement