Advertisement

ಇದು ದಾಖಲೆ ಮುಂಗಾರು ವರ್ಷ

11:44 AM Sep 12, 2017 | Team Udayavani |

ಬೆಂಗಳೂರು: ಈ ಬಾರಿಯ ಮುಂಗಾರಿಗೆ ಮೊದಲೆರಡು ತಿಂಗಳು ಮಳೆ ಕೊರತೆ ಎದುರಿಸಿದ್ದ ರಾಜಧಾನಿ, ಈಗ ಇಡೀ ಮುಂಗಾರು ಹಂಗಾಮಿನ ದಾಖಲೆ ಮಳೆಗೆ ಸಾಕ್ಷಿಯಾಗುತ್ತಿದೆ. ನಗರದಲ್ಲಿ ಜೂನ್‌ 1ರಿಂದ ಈವರೆಗೆ 780 ಮಿ.ಮೀ. ಮಳೆಯಾಗಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಹಂಗಾಮಿನಲ್ಲಿ (ಜೂನ್‌-ಸೆಪ್ಟೆಂಬರ್‌) ಬಿದ್ದ ದಾಖಲೆ ಮಳೆಯಾಗಿದೆ.

Advertisement

2010ರಿಂದ ಈಚೆಗೆ ಮುಂಗಾರಿನಲ್ಲಿ ಅತ್ಯಧಿಕ ಮಳೆ ಬಿದ್ದ ವರ್ಷ ಇದಾಗಿದೆ. ಇನ್ನೂ 20 ದಿನಗಳು ಬಾಕಿ ಇರುವುದರಿಂದ ಇದರ ಪ್ರಮಾಣ ಏರಿಕೆ ಕ್ರಮದಲ್ಲಿ ಸಾಗಲಿದೆ. ಜೂನ್‌ನಲ್ಲಿ ವಾಡಿಕೆ ಮಳೆ 87 ಮಿ.ಮೀ. ಆದರೆ, ಬಿದ್ದ ಮಳೆ 25.1 ಮಿ.ಮೀ. ಅದೇ ರೀತಿ, ಜುಲೈನ 109.5 ಮಿ.ಮೀ. ವಾಡಿಕೆ ಮಳೆಯಲ್ಲಿ ಕೇವಲ 59.4 ಮಿ.ಮೀ. ಬಿದ್ದಿತು. ಇದರಿಂದ ಈ ಸಲ ಮಳೆ ಕೊರತೆ ಆಗಲಿದೆ ಎಂದೇ ಅಂದಾಜಿಸಲಾಗಿತ್ತು.

ಆದರೆ, ಆಗಸ್ಟ್‌ 15ರಿಂದ ನಗರದ ಮಳೆಯ ಚಿತ್ರಣವೇ ಬದಲಾಯಿತು. ಆಗಸ್ಟ್‌ನಲ್ಲಿ ವಾಡಿಕೆಗಿಂತ ದುಪ್ಪಟ್ಟು ಅಂದರೆ 141.6 ಮಿ.ಮೀ. ವಾಡಿಕೆ ಯಾದರೆ, 313.6 ಮಿ.ಮೀ. ಮಳೆ ಸುರಿಯಿತು. ಒಟ್ಟಾರೆ 780 ಮಿ.ಮೀ. ಪೈಕಿ ಕೇವಲ 27 ದಿನಗಳಲ್ಲೇ (ಆಗಸ್ಟ್‌ 15-ಸೆಪೆಂಬರ್‌ 10) 651.3 ಮಿ.ಮೀ. ಮಳೆಯಾಗಿದೆ. ನಗರದ ಮುಂಗಾರು ಹಂಗಾಮಿನ ವಾಡಿಕೆ ಮಳೆಯೇ 550 ಮಿ.ಮೀ.!

ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದುವರೆಗೆ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿದೆ. ಆದರೆ ನಗರದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದ್ದು, ಸೆಪ್ಟೆಂಬರ್‌ ಅಂತ್ಯಕ್ಕೆ ಇನ್ನೂ 20 ದಿನಗಳು ಬಾಕಿ ಇರುವಾಗಲೇ ಮುಂಗಾರು ಹಂಗಾಮಿನ ದಾಖಲೆ ಮಳೆಗೆ ಸಾಕ್ಷಿಯಾಗುತ್ತಿದೆ. 2013ರಲ್ಲಿ ಈ ನಾಲ್ಕು ತಿಂಗಳಲ್ಲಿ 763.7 ಮಿ.ಮೀ. ಮಳೆಯಾಗಿತ್ತು. ಈಗಾಗಲೇ ನಗರದಲ್ಲಿ 780 ಮಿ.ಮೀ. ಬೀಳುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದಂತಾಗಿದೆ. 

ಪೂರಕವೂ; ಮಾರಕವೂ
ನಗರದ ಒಂದೆಡೆ ವಾಡಿಕೆ ಮಳೆ ಹೆಚ್ಚಾಗುತ್ತಿದ್ದರೆ, ಮಳೆ ಹಂಚಿಕೆಯಲ್ಲೂ ಇತ್ತೀಚಿನ ವರ್ಷಗಳಲ್ಲಿ ಬದಲಾವಣೆ ಕಂಡುಬರುತ್ತಿದೆ. ಈ ವ್ಯತ್ಯಾಸಕ್ಕೆ ಹಲವಾರು ಕಾರಣಗಳಿವೆ. ಬೆಂಗಳೂರು ಎತ್ತರ ಪ್ರದೇಶದಲ್ಲಿರುವುದರ ಜತೆಗೆ ವಾಹನಗಳು ಮತ್ತು ಕೈಗಾರಿಕೆಗಳು ಉಗುಳುವ ಹೊಗೆ, ಕಾಂಕ್ರೀಟ್‌ ಕಾಡು ಸೇರಿದಂತೆ ವಿವಿಧ ಕಾರಣಗಳಿಂದ ತಾಪಮಾನ ಏರಿಕೆಯಾಗಿದೆ. ಹೀಗೆ ತಾಪಮಾನ ಹೆಚ್ಚಾದಾಗ, ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ, ಕಡಿಮೆ ಒತ್ತಡದ ಪ್ರದೇಶ ಉಂಟಾಗುತ್ತದೆ.

Advertisement

ಅದರಿಂದ ಮೋಡಗಳು ಇಂತಹ ಕಡೆ ಕೇಂದ್ರೀಕೃತಗೊಳ್ಳುತ್ತವೆ. ಇದು ಮಳೆ ಸುರಿಸುತ್ತದೆ ಎಂದು ಹವಾಮಾನ ತಜ್ಞರು ವಿಶ್ಲೇಷಿಸುತ್ತಾರೆ. ಒಂದೆಡೆ ಇದು ಹೆಚ್ಚು ಮಳೆಗೆ ಕಾರಣವಾಗಿ ಸಕಾರಾತ್ಮಕ ಬೆಳವಣಿಗೆಯಾಗಿದ್ದರೂ, ಮತ್ತೂಂದೆಡೆ ಬೆಂಗಳೂರು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಉಷ್ಣಾಂಶ ಮತ್ತು ಮಳೆಯನ್ನು ಎದುರಿಸಬೇಕಾಗಿದೆ. ಇದನ್ನು ತಡೆದುಕೊಳ್ಳುವ ಶಕ್ತಿ ಇಲ್ಲದ್ದರಿಂದ ಹಲವು ಅವಾಂತರಗಳಿಗೂ ಇದು ಕಾರಣವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ಈಗಾಗಲೇ ವರ್ಷದ ಮಳೆ!
ಬೆಂಗಳೂರಿನ ವಾರ್ಷಿಕ ವಾಡಿಕೆ ಮಳೆ 980 ಮಿ.ಮೀ. ಆದರೆ, ಈಗಾಗಲೇ 1,038 ಮಿ.ಮೀ. ಮಳೆ ಆಗಿದೆ! ಅಂದರೆ, ಜನವರಿಯಿಂದ ಡಿಸೆಂಬರ್‌ವರೆಗೆ ನಗರದಲ್ಲಿ ಸುರಿಯಬೇಕಿದ್ದ ಮಳೆ ಕೇವಲ 9 ತಿಂಗಳಲ್ಲಿ ಬಿದ್ದಿದೆ. ಇದರಲ್ಲಿ ಪೂರ್ವ ಮುಂಗಾರಿನಲ್ಲಿ 258 ಮಿ.ಮೀ. (ವಾಡಿಕೆ 153 ಮಿ.ಮೀ.) ಹಾಗೂ ಮುಂಗಾರಿನಲ್ಲಿ 780 ಮಿ.ಮೀ. (ವಾಡಿಕೆ 550 ಮಿ.ಮೀ.) ಮಳೆಯಾಗಿದೆ.

ವಷಾಂತ್ಯಕ್ಕೆ ಇನ್ನೂ ಮೂರೂವರೆ ತಿಂಗಳು ಬಾಕಿ ಇದೆ. ಸಾಮಾನ್ಯವಾಗಿ ಅಕ್ಟೋಬರ್‌ ಎರಡನೇ ವಾರದವರೆಗೂ ಮಳೆ ಇರುತ್ತದೆ. ಹಾಗಾಗಿ, ಮತ್ತಷ್ಟು ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. 

ದುಪ್ಪಟ್ಟು ಮಳೆ!
ನಗರದಲ್ಲಿ ಜೂನ್‌ 1ರಿಂದ ಸೆಪ್ಟೆಂಬರ್‌ 10ರವರೆಗಿನ ವಾಡಿಕೆ ದುಪ್ಪಟ್ಟು ಮಳೆ ದಾಖಲಾಗಿದೆ. ಜೂನ್‌ 1ರಿಂದ ಈವರೆಗೆ ನಗರದಲ್ಲಿ ವಾಡಿಕೆಯಂತೆ 401 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 780 ಮಿ.ಮೀ. ಬಿದ್ದಿದೆ. ಮುಂದಿನ ಒಂದೆರಡು ದಿನಗಳು ಕೂಡ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್‌.ಎಂ. ಮೇತ್ರಿ ತಿಳಿಸಿದರು.

ಕಳೆದ ಆರು ವರ್ಷಗಳಲ್ಲಿ ನಗರದ ಮುಂಗಾರು ಮಳೆ
* ವರ್ಷ    ಬಿದ್ದ ಮಳೆ (ಮಿ.ಮೀ.ಗಳಲ್ಲಿ)
-2012    331.4
-2013    763.7
-2014    694.3
-2015    479
-2016    516.7
-2017    780

ರಾಜ್ಯದಲ್ಲೇ ಅತಿ ಹೆಚ್ಚು ಮಳೆ
ನಗರದಲ್ಲಿ ಕಳೆದ ಹತ್ತು ದಿನಗಳಲ್ಲಿ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬಿದ್ದಿದೆ.  ಸೆ. 1ರಿಂದ 10ರವರೆಗೆ ಇಲ್ಲಿ 344.1 ಮಿ.ಮೀ. ಮಳೆಯಾಗಿದೆ. ಹತ್ತು ದಿನಗಳಲ್ಲಿ ಮೂರು ದಿನ ಭಾರಿ ಮಳೆಗೆ ನಗರ ಸಾಕ್ಷಿಯಾಗಿದೆ. ಸೆ. 1ರಂದು ಬೆಳಿಗ್ಗೆ 8.30ಕ್ಕೆ 72 ಮಿ.ಮೀ., 9ರಂದು 68.4 ಮಿ.ಮೀ. ಹಾಗೂ 10ರಂದು 66.1 ಮಿ.ಮೀ. ಮಳೆಯಾಗಿದೆ. ಇನ್ನು ಇದೇ ಅವಧಿಯಲ್ಲಿ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಮಳೆ ಬಿದ್ದ ಪ್ರದೇಶ ಕೂಡ ಬೆಂಗಳೂರಿನ ಎಚ್‌ಎಎಲ್‌ ಏರ್‌ಪೋರ್ಟ್‌. ಇಲ್ಲಿ 250.8 ಮಿ.ಮೀ. ಮಳೆಯಾಗಿದೆ. 

ತಿಂಗಳವಾರು ಬಿದ್ದ ಮಳೆ
* ಜೂನ್‌    25.1 ಮಿ.ಮೀ.
-ಜುಲೈ    59.01
-ಆಗಸ್ಟ್‌    351
-ಸೆಪ್ಟೆಂಬರ್‌    344.1
-ಒಟ್ಟಾರೆ    780

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next