Advertisement
ಕೃಷಿಯಲ್ಲಿ ಏನೇನಿದೆ?ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮುಗಳೀಕಟ್ಟೆ ಗ್ರಾಮದಲ್ಲಿ ಈಶ್ವರಪ್ಪ ಗುರುಸಿದ್ದಪ್ಪ ನಂಜಜ್ಜರ್ ಅವರ ಜಮೀನು ಇದೆ. ಇಪ್ಪತ್ತು ಎಕರೆ ಅಡಿಕೆ ಕೃಷಿ, ನಾಲ್ಕು ಎಕರೆ ನುಗ್ಗೆ, ಒಂದು ಎಕರೆ ದಾಳಿಂಬೆ, ಮೂರು ಎಕರೆ ಗೇರು, ಉಳಿದೆಡೆಗಳನ್ನು ಜೋಳ, ರಾಗಿ ಬೆಳೆಗಳಿಗೆ ಮೀಸಲಿಟ್ಟಿದ್ದಾರೆ. ಜಮೀನಿನ ಬದುಗಳಲ್ಲಿ ಅಲ್ಲಲ್ಲಿ ಬೆಳೆದಿರುವ ತೆಂಗಿನ ಮರಗಳ ಸಂಖ್ಯೆ ಇನ್ನೂರ ಐವತ್ತು. ಮೂರು ಎಕರೆಯಲ್ಲಿ ರೇಷ್ಮೆ ಕೃಷಿಗಾಗಿ ಸಿದ್ದತೆ ನಡೆಸಿದ್ದಾರೆ.
ಆಗಾಗ ಸಣ್ಣ ಮೊತ್ತ ಕೈ ಸೇರಿದರೂ ದಿನದ ಖರ್ಚು ನೀಗಿಸಿಕೊಡಬಲ್ಲ ವೀಳ್ಯದೆಲೆ ಕೃಷಿ ಇವರಿಗೆ ಅಚ್ಚುಮೆಚ್ಚು. ಇದರಲ್ಲಿ ಎರಡು ದಶಕಗಳ ಅನುಭವವಿದೆ. 2,400 ವೀಳ್ಯದೆಲೆಯ ಬಳ್ಳಿ ನಾಟಿ ಮಾಡಿದ್ದಾರೆ. ಹತ್ತು ವರ್ಷಕ್ಕೊಮ್ಮೆ ಬಳ್ಳಿ ಬದಲಿಸುತ್ತಾರೆ. ಎಂಟು ವರ್ಷದ ಹಿಂದೆ ನಾಟಿ ಮಾಡಿದ ಬಳ್ಳಿಯಿಂದ ಈಗಲೂ ಇಳುವರಿ ಪಡೆಯುತ್ತಿದ್ದಾರೆ.
Related Articles
Advertisement
ಪ್ರತಿ ವರ್ಷ ಜೂನ್ ವೇಳೆಗೆ ಎತ್ತರಕ್ಕೇರಿರುವ ಬಳ್ಳಿಗಳನ್ನು ಕೆಳಗಿಳಿಸುತ್ತಾರೆ. ಎರಡು ಅಡಿಗಳಷ್ಟು ಬಳ್ಳಿಯ ತುದಿ ಭಾಗವನ್ನು ಹಾಗೆಯೇ ಆಧಾರ ಗಿಡಗಳಿಗೆ ಮೃದುವಾಗಿ ಆಸರೆಯಾಗಿ ಕಟ್ಟುತ್ತಾರೆ. ಸುರುಳಿ ಸುತ್ತಿದ ಉಳಿದ ಭಾಗವನ್ನು ಬಳ್ಳಿಯ ಬುಡದಲ್ಲಿ ಸ್ವಲ್ಪವೇ ದೂರದಲ್ಲಿ ಅರ್ಧ ಅಡಿಗಳಷ್ಟು ಗುಣಿ ತೆಗೆದು ಅಡಗಿಸಿ ಮಣ್ಣು ಮುಚ್ಚುತ್ತಾರೆ. ದಿನದಿಂದ ದಿನಕ್ಕೆ ಎಲೆಬಳ್ಳಿ ಆಸರೆ ಗಿಡಗಳಿಗೆ ಆತುಕೊಂಡು ಮೇಲೆ ಹಬ್ಬುತ್ತಾ ಸಾಗುತ್ತವೆ. ಒಂದು ತಿಂಗಳಾಗುವ ಹೊತ್ತಿಗೆ ಬಲಿತ ಎಲೆಗಳು ಕಟಾವಿಗೆ ದೊರೆಯುತ್ತದೆ.
ಬಳ್ಳಿ ಇಳಿಸಿದ ಆರಂಭದಲ್ಲಿ ನಾಲ್ಕು ತಿಂಗಳವರೆಗೆ ಇಳುವರಿ ಸ್ವಲ್ಪ ಕಡಿಮೆ. ಪ್ರತಿ ತಿಂಗಳು ಒಂದೊಂದು ಗಿಡದಿಂದ 60-80 ಎಲೆಗಳು ಕೊಯ್ಲಿಗೆ ಸಿಗುತ್ತದೆ. ನಾಲ್ಕು ತಿಂಗಳ ನಂತರದಿಂದ ಪ್ರತೀ ಗಿಡದಿಂದ 300-350 ಎಲೆಗಳು ಕಟಾವಿಗೆ ಸಿಗುತ್ತದೆ. ಕೆಲವು ಗಿಡಗಳಲ್ಲಿ ಐದು ನೂರು ಎಲೆಗಳವರೆಗೆ ಸಿಕ್ಕಿರುವುದೂ ಇದೆ ಎನ್ನುತ್ತಾರೆ. ವರ್ಷಕ್ಕೆ ಎರಡು ಬಾರಿ ಕಾಂಪೋಸ್ಟ್ ಗೊಬ್ಬರ ಹಾಕುತ್ತಾರೆ. ಎಲೆ ಕತ್ತರಿಸಲು ನುರಿತ ಆಳುಗಳ ಬಳಕೆ ಮಾಡಿಕೊಳ್ಳುತ್ತಾರೆ. ಬಳ್ಳಿ ಅಡಿಕೆ ಮರಕ್ಕೆ ಹಬ್ಬುತ್ತಾ ಮೇಲೇರಿದಂತೆ ಆಸರೆಯಾಗಿ ಬಳ್ಳಿಯ ಸಹಾಯದಿಂದ ಮೆಲುವಾಗಿ ಕಟ್ಟುತ್ತಾರೆ. ವೀಳ್ಯದೆಲೆಗೆ ಸಿಬ್ಬು ರೋಗ ಬರುವುದಿದೆ. ಅದನ್ನು ತಡೆಯಲು ಔಷಧಿ ಸಿಂಪಡಿಸುತ್ತಾರೆ. ಕಾಂಡ ಕೊಳೆಯುವ ರೋಗವೂ ಬಾಧಿಸುವುದಿದೆ. ನಿಯಂತ್ರಿಸುವುದಕ್ಕೆ ಹೆಚ್ಚಿನ ಗಮನ ವಹಿಸುತ್ತಾರೆ. ಅಡಿಕೆ ಮರದ ಮದ್ಯದಲ್ಲಿ ವೀಳ್ಯದೆಲೆ ಬಳ್ಳಿ ಹಬ್ಬಲು ಅನುಕೂಲವಾಗುವಂತೆ ನುಗ್ಗೆ, ಬೋರಲು, ಚೊಗಚೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಗಾಳಿ ತಡೆಗೆ ತೋಟದ ಸುತ್ತಲೂ ಶೇಡ್ ನೆಟ್ ಹಾಕಿದ್ದಾರೆ.
ನೀರಿನ ಕೊರತೆ ಇವರನ್ನೂ ಕಾಡದೇ ಬಿಟ್ಟಿಲ್ಲ. ಒಂದಿಂಚು ನೀರು ಹಾಯಿಸುವ ಕೊಳವೆ ಬಾವಿಯಿಂದ ಕೃಷಿ ನಿಭಾಯಿಸುತ್ತಿದ್ದಾರೆ. ಇಪ್ಪತ್ತು ಅಡಿ ಅಗಲ, ಮೂವತ್ತು ಅಡಿ ಉದ್ದ, ಹನ್ನೊಂದು ಅಡಿ ಆಳದ ಕೃಷಿಹೊಂಡ ರಚಿಸಿಕೊಂಡಿದ್ದಾರೆ. ಕೊಳವೆ ಬಾವಿಯ ನೀರನ್ನು ಹೊಂಡದಲ್ಲಿ ತುಂಬಿಸಿಕೊಂಡು ಮೋಟರ್ ಸಹಾಯದಿಂದ ಮೇಲೆತ್ತಿ ಗಿಡಗಳಿಗೆ ಡ್ರಿಪ್ ಮೂಲಕ ನೀರುಣಿಸುತ್ತಾರೆ.
ಹದಿನೆಂಟು ಜನರಿರುವ ಅವಿಭಕ್ತ ಕುಟುಂಬ ಇವರದು. ಪ್ರತಿಯೊಬ್ಬರದೂ ಕೃಷಿ ಕಾಳಜಿಯ ಮನೋಭಾವ. ಹೈನುಗಾರಿಕೆಯಲ್ಲಿಯೂ ಇವರು ಸಕ್ರಿಯರು. ಇದರಿಂದ ಪ್ರತಿ ವರ್ಷ ಹದಿನೈದು ಲಾರಿ ಲೋಡ್‌ಗಳಷ್ಟು ಕಾಂಪೋಸ್ಟ್ ಗೊಬ್ಬರ ಸಿದ್ದಗೊಳ್ಳುತ್ತದೆ. ಕೃಷಿ ನೀರಿನ ಮಿತ ಬಳಕೆಯಿಂದ ಕೃಷಿಯಲ್ಲಿ ಬುದ್ದಿವಂತಿಕೆ ತೋರುವ ಇವರ ಕೃಷಿ ಮಾದರಿಯಾಗಿದೆ.
– ಕೋಡಕಣಿ ಜೈವಂತ ಪಟಗಾರ