Advertisement

ಈ ನವರಾತ್ರಿಗೆ ಕಾರು, ಬೈಕುಗಳ ಹೊಸ ರಂಗು

03:43 AM Sep 06, 2019 | mahesh |

ಯಾವುದೇ ಒಂದು ಕೆಲಸಕ್ಕೆ ಶುಭದಿನ ಹುಡುಕುವುದು ಸಾಮಾನ್ಯ. ಅಂತೆಯೇ ಕಾರು, ಬೈಕ್‌ ಕಂಪೆನಿಗಳು ಹಬ್ಬಗಳ ಸಂದರ್ಭ ವೈಶಿಷ್ಟ್ಯಗಳಿಂದ ಕೂಡಿದ ವಾಹನಗಳನ್ನು ಮಾರುಕಟ್ಟೆಗೆ ತರುತ್ತವೆ. ಹಬ್ಬಗಳ ವೇಳೆ ವಾಹನ ಖರೀದಿಗೆ ಜನರು ಹೆಚ್ಚಿನ ಆಸಕ್ತಿ ತೋರಿಸುವುದರಿಂದ ಎಲ್ಲ ಕಂಪೆನಿಗಳು ಆ ವೇಳೆ ಹೊಸ ಮಾದರಿಗೆ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತವೆ. ಇನ್ನೇನು ನವರಾತ್ರಿ ಬರಲಿದೆ ಈ ಹಬ್ಬಕ್ಕೆ ಯಾವ ವಾಹನ ಮಾರುಕಟ್ಟೆಗೆ ಬರಲಿದೆ ಎಂದ ಮಾಹಿತಿ ಇಲ್ಲಿದೆ.

Advertisement

ಸಾಲು ಸಾಲು ಹಬ್ಬಗಳ ಮುಂದುವರಿದ ಭಾಗವಾಗಿ ನವರಾತ್ರಿಯ ರಂಗು ಮುಂದಿದೆ. ನವರಾತ್ರಿಗೆ ಇನ್ನು ಎರಡು ವಾರಗಳಿರುವಾಗಲೇ ಶಾಪಿಂಗ್‌ ಶುರುವಾಗಿದೆ. ಹುಡುಗಿಯರಿಗೆ ಡ್ರೆಸ್‌, ಆಭರಣ ಖರೀದಿಯ ಆತುರವಾದರೆ, ಹುಡುಗರಿಗೆ ವಾಹನ ಲೋಕದಲ್ಲೊಮ್ಮೆ ಸುತ್ತಾಡಿ ಬರುವ ಆಸೆ. ಅದರಲ್ಲೂ ಕಾರು, ಬೈಕ್‌ಗಳ ಕ್ರೇಜ್‌ ಇರುವವರಂತೂ ಹೊಸತೇನಿದೆ ಎಂದು ಮಾರುಕಟ್ಟೆಯತ್ತ ಚಿತ್ತ ಹರಿಸಿದ್ದಾರೆ.

ನವರಾತ್ರಿಗೆ ಹೊಸ ವಾಹನ
ಅಷ್ಟಮಿ, ಗಣೇಶ ಚತುರ್ಥಿಗೆ ಹೊಸ ಕಾರು, ಹೊಸ ಬೈಕ್‌ ಕೊಂಡು ರೌಂಡ್‌ ಹೊಡೆದಿದ್ದಾಯಿತು. ಇನ್ನೇನಿದ್ದರೂ ನವರಾತ್ರಿಗೆ ಕೊಳ್ಳೋ ಕುತೂಹಲ. ನವರಾತ್ರಿ ವೇಳೆಗೆ ಒಂದಷ್ಟು ಕಾರು, ಬೈಕ್‌ಗಳು ಹೊಸದಾಗಿ ಮಾರುಕಟ್ಟೆಗೆ ಬರಲು ರೆಡಿಯಾಗಿರುವುದರಿಂದ ಸಹಜವಾಗಿಯೇ ಕಾರು, ಬೈಕ್‌ ಪ್ರಿಯರ ಕುತೂಹಲವೂ ಹೆಚ್ಚಾಗಿದೆ. ಇದಕ್ಕಾಗಿಯೇ ಕಾರು, ಬೈಕ್‌ ಶೋರೂಂಗಳಲ್ಲಿ ಈ ಬಗ್ಗೆ ವಿಚಾರಣೆಯೂ ನಡೆಯುತ್ತಿದೆ.

ಈ ನವರಾತ್ರಿ ಹೊತ್ತಿನಲ್ಲಿ ಒಂದಷ್ಟು ಬೈಕ್‌, ಕಾರುಗಳು ಮಾರುಕಟ್ಟೆಗೆ ಬರಲು ತಯಾರಾಗಿವೆ. ಆ ಮೂಲಕ ಹೊಸತನದ ಮೂಲಕ ಗ್ರಾಹಕರನ್ನು ಸೆಳೆಯಲು ಮತ್ತು ಒಂದಷ್ಟು ಹೊಸ ವೈಶಿಷ್ಟéಗಳ ಮೂಲಕ ಗ್ರಾಹಕರಿಗೆ ಆಹ್ಲಾದಕರ ಪ್ರಯಾಣದ ಅನುಭೂತಿ ನೀಡಲು ಸಿದ್ಧವಾಗಿವೆ. ಆದರೆ, ಶೋರೂಂ ಮಂದಿಗೆ ಇನ್ನೂ ಈ ಕಾರು, ಬೈಕ್‌ಗಳ ವೈಶಿಷ್ಟéದ ಬಗ್ಗೆ ಮಾಹಿತಿ ದೊರಕಿಲ್ಲ. ಆದರೂ, ಇದ್ದ ಮಾಹಿತಿಯನುಸಾರ ಗ್ರಾಹಕರ ಮನಸೂರೆಗೊಳಿಸಲು ಶೋರೂಂ ಮಂದಿಯೂ ಉತ್ಸುಕರಾಗಿದ್ದಾರೆ.

ಮೈಲೇಜ್‌ಗೆ ಬೇಡಿಕೆ
ಆ್ಯಕ್ಟೀವಾ 125 ಬಿಎ6 ಮಾಡೆಲ್‌ ಈ ನವರಾತ್ರಿಗೆ ಗ್ರಾಹಕರ ಮನಸ್ಸಿಗೆ ಕನ್ನ ಹಾಕಲಿದೆ. ಈಗಿರುವ ಗಾಡಿಗಳಿಗಿಂತ ಹೆಚ್ಚಿನ ಮೈಲೇಜ್‌ ಕೊಡುವ ಈ ಗಾಡಿಯ ಬಗ್ಗೆ ಈಗಿಂದಲೇ ವಿಚಾರಣೆಗಳು ಶುರುವಾಗಿದೆ ಎನ್ನುತ್ತಾರೆ ಹೋಂಡಾ ಮ್ಯಾಟ್ರಿಕ್ಸ್‌ ಸಿಬಂದಿ. 300 ಸಿಸಿ ಸಾಮರ್ಥ್ಯವಿರುವ ಹೋಂಡಾ ಸಿಬಿ 300ಆರ್‌ ಸೂಪರ್‌ ಬೈಕ್‌ ಮಾಡೆಲ್‌ ಕೂಡಾ ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಾಗಿದೆ. ನ್ಪೋಟ್ಸ್‌ ಬೈಕ್‌ ಮಾದರಿಯಲ್ಲಿರುವ ಇದರ ಬಗ್ಗೆಯೂ ಗ್ರಾಹಕರು ವಿಚಾರಿಸುತ್ತಿದ್ದಾರೆ.

Advertisement

ಹೊಸ ಮಾದರಿಯ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡಲು ತಯಾರಾಗಿ ನಿಂತಿವೆ. ಸುಜುಕಿ ಜಿಮ್ಮಿ ಕಾರು ನವರಾತ್ರಿ ಅಥವಾ ಡಿಸೆಂಬರ್‌ ಒಳಗೆ ಮಾರುಕಟ್ಟೆಗೆ ಬರಲಿದೆ. ಜೀಪ್‌ ಮಾದರಿಯಲ್ಲಿರುವ ಈ ಕಾರು ಗ್ರಾಹಕರಿಗೆ ಇಷ್ಟವಾಗಲಿದೆ ಮತ್ತು ಪ್ರಯಾಣದಲ್ಲಿ ಹೊಸ ಅನುಭೂತಿಯನ್ನು ನೀಡಲಿದೆ ಎಂಬುದು ಮಾಂಡೊವಿಯ ಕಿಶನ್‌ ಅವರ ಮಾತು.

ಇನ್ನಷ್ಟು ಕಾರು, ಬೈಕ್‌ಗಳು
ನವರಾತ್ರಿ ಅಥವಾ ಡಿಸೆಂಬರ್‌ನೊಳಗೆ ವಿವಿಧ ಕಾರು, ಬೈಕ್‌ಗಳು ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿವೆ. ಕಿಯಾ ಸೆಲೊrೕಸ್‌, ಮಾರುತಿ ಸುಝುಕಿ ವಿಟಾರ, ನ್ಯೂ ಜನರೇಶನ್‌ ಹುಂಡೈ ಕ್ರೆಟಾ, ಹೊಂಡಾ ಎಚ್ಆರ್‌-ವಿ ಸೇರಿದಂತೆ ನಾನಾ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡುವುದು ಬಹುತೇಕ ಖಚಿತವಾಗಿದೆ. ಆದರೆ, ವಿವಿಧ ಶೋರೂಂ ಸಿಬಂದಿಗಳಿಗೆ ತಮ್ಮ ಡೀಲರ್‌ಶಿಪ್‌ನಲ್ಲಿರುವ ಕಂಪೆನಿಯ ಕಾರು, ಬೈಕ್‌ಗಳ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ‘ಈ ಬಗ್ಗೆ ನಮಗೆ ಮಾಹಿತಿ ಸಿಗುವುದಿಲ್ಲ. ವಾಹನ ಬಿಡುಗಡೆಯಾಗುವ ಒಂದು ವಾರದ ಮುನ್ನವಷ್ಟೇ ಕಂಪೆನಿಯಿಂದ ಅದರ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ಸಿಗುತ್ತದೆ’ ಎನ್ನುತ್ತಾರೆ ಯುನೈಟೆಡ್‌ ಟೊಯೋಟದ ಸಿಬಂದಿ.

ಹೊಸ ಕಾರು, ಬೈಕ್‌ಗಳ ಬಗ್ಗೆ ಸಹಜವಾಗಿಯೇ ಎಲ್ಲರಲ್ಲಿಯೂ ಕುತೂಹಲ ಇರುತ್ತದೆ. ಪೇಟೆ ಯುವಕರಲ್ಲಿ ಇದು ಸ್ವಲ್ಪ ಜಾಸ್ತೀನೇ. ಮಂಗಳೂರಿನ ಮಾರುಕಟ್ಟೆಗಳಲ್ಲಿ ಬೈಕ್‌, ಕಾರುಗಳ ಸರ್ವೀಸ್‌ ಮಾಡಲು ತೆರಳುವಾಗ ಶೋರೂಂ ಸಿಬಂದಿಯಲ್ಲಿ ಈ ಬಗ್ಗೆ ವಿಚಾರಿಸುವುದು ಸಾಮಾನ್ಯವಾಗಿದೆ. ಹೊಸ ಕಾರು, ಬೈಕ್‌ಗಳ ಬುಕ್ಕಿಂಗ್‌ ಪ್ರಕ್ರಿಯೆಯ ಬಗ್ಗೆಯೂ ಗ್ರಾಹಕರು ವಿಚಾರಿಸುತ್ತಾರೆ. ಆದರೆ, ಅದರ ವೈಶಿಷ್ಟ್ಯಗಳ ಬಗ್ಗೆ ನಮಗೆ ತಿಳಿಯದೇ ಇರುವುದರಿಂದ ಸರಿಯಾದ ಮಾಹಿತಿ ನೀಡಲಾಗುವುದಿಲ್ಲ ಎನ್ನುತ್ತಾರೆ ವಿವಿಧ ಶೋರೂಂಗಳ ಸಿಬಂದಿಗಳು.

ಒಂದಿಷ್ಟು ಸಲಹೆ..
·ಕಾರು, ಬೈಕ್‌ಗಳ ಕ್ರೇಝ್ಗೆ ಬಿದ್ದು ಅಂದಕ್ಕೆ ಮರುಳಾಗಿ ಖರೀದಿಸಬೇಡಿ. ಅದರ ವೈಶಿಷ್ಟ್ಯಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ. ಅವರಿವರ ಸಲಹೆ ಪಡೆದು ವಾಹನ ಖರೀದಿಸಿ.

·ವಾಹನ ಕೊಳ್ಳುವ ಮುನ್ನ ಮೈಲೇಜ್‌ ಬಗ್ಗೆ ತಿಳಿದುಕೊಳ್ಳಿ. ಹೊಸ ಫೀಚರ್‌ಗಳಿರುವುದರಿಂದ ವಾಹನ ಚಾಲನೆ ವೇಳೆ ಏನಾದರು ಬದಲಾವಣೆಗಳಿವೆಯೇ ತಿಳಿದುಕೊಳ್ಳಿ

·ಹೊಸ ವಾಹನವೆಂದು ಬೇಕಾಬಿಟ್ಟಿ ಸಂಚರಿಸಬೇಡಿ. ಸಂಚರಿಸುವ ವೇಳೆ ಟ್ರಾಫಿಕ್‌ ನಿಯಮಗಳು ಮನಸ್ಸಿನಲ್ಲಿರಲಿ.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next