ನನ್ನ ಪ್ರೀತಿಯನ್ನ ಒಪ್ಕೊಂಡಿದ್ದಕ್ಕೆ ಥ್ಯಾಂಕ್ಸ್ . ಹಿಂದೆ ಮುಂದೆ ನೋಡದೇ ನನ್ನ ನಿವೇದನೆಗೆ ಹಸಿರು ನಿಶಾನೆ ತೋರಿದ ನಿನಗೆ ನನ್ನಿಂದ ಯಾವತ್ತೂ ಅನ್ಯಾಯವಾಗೋದಿಲ್ಲ ಅಂತ ಭರವಸೆ ಕೊಡೋದಕ್ಕಂತಾನೇ ಈ ಪತ್ರ ಬರಿತಿದೀನಿ.
ಹಾಯ್ ,
ನಿನ್ನ ನೆನಪು ಬೋರ್ಗರೆಯುವಾಗೆಲ್ಲ, ಆವತ್ತು ಕಾಲೇಜಿನಿಂದ ಪ್ರವಾಸ ಹೋದಾಗ ಜೊತೆಗಿದ್ದವಲ್ಲ; ಆ ಕಳೆದ ಆ ಮಧುರ ದಿನಗಳು ಮತ್ತೇ ಮತ್ತೆ ನೆನಪಿಗೆ ಬರುತ್ತವೆ. ಮುರುಡೇಶ್ವರದ ಹತ್ತಿರ ತಲೆಸುತ್ತು ಅಂತ ಹೇಳಿ, ಅರಬ್ಬೀ ಸಮುದ್ರ ನೋಡೋಕೆ ಬರದೇ ನೀನು ಬಸ್ಸಲ್ಲೇ ಮಲ್ಕೊಂಡಿದ್ದಿ. ಜ್ಞಾಪಕ ಇದೆಯಾ?
ನೀನು ಬಸ್ಸಲ್ಲೇ ಉಳ್ಕೊಂಡಿದ್ದನ್ನ ಕಂಡು, ನನಗೆ ಗೆಳೆಯರ ಜೊತೆ ಹೋಗೋಕೂ ಮನಸ್ಸಾಗಲಿಲ್ಲ. ನಾಲ್ಕೆಜ್ಜೆ ಮುಂದೆ ಹೋಗಿ, ನಿನಗೆ ಅಂತಾನೇ ಎಳೆನೀರು ತಗೊಂಡು ವಾಪಸ್ ಬಂದು ಕುಡಿಯೋಕೆ ಕೊಟ್ಟಾಗ ಆಹಾ! ಅದೆಂಥ ಖುಷಿ; ಅದನ್ನ ಯಾವತ್ತೂ ಮರೆಯೋಕಾಗಲ್ಲ. ನಿಜ ಹೇಳಬೇಕಂದ್ರೆ, ಆ ತಂಪಾದ ಎಳೆನೀರಲ್ಲಿದ್ದ , ನನ್ನ ತಿಳಿಯಾದ ಪ್ರೇಮ ನಿವೇದನೆಯನ್ನ ಅರ್ಥ ಮಾಡ್ಕೊಂಡು, ಮೆಲ್ಲನೆ ನಸುನಗು ಬೀರಿದಾಗಲೇ ನನ್ನ ಮನದ ಹಕ್ಕಿ ಗರಿ ಬಿಚ್ಚಿ ಕುಣಿದಾಡಿತ್ತು.
ಅದೆಷ್ಟೋ ದಿನಗಳಿಂದ ಹೊರ ಪ್ರಪಂಚಕ್ಕೆ ಬಾರದೇ ಎದೆಯೊಳಗೆ ಅತು ಕುಳಿತಿದ್ದ ಕೆಲವು ಮಾತುಗಳನ್ನ, ಎಳೆನೀರಿನ ಜೊತೆಗೂಡಿ ಸೈಲೆಂಟಾಗಿ ನಿನ್ನ ಎದೆಗಿಳಿಸಿ, ಪ್ರೇಮ ನಿವೇದನೆ ಮಾಡೋ ಸಂದರ್ಭ ಬರುತ್ತೆ ಅಂತ ನಾನು ಕನಸಲ್ಲೂ ಊಹಿಸಿರಲಿಲ್ಲ. ಆಗಿನಿಂದ ಮೈಯಲ್ಲೇನೋ ಪುಳಕ; ಕ್ಷಣಕ್ಷಣಕ್ಕೂ ರೋಮಾಂಚನ. ಅದೇ ಮೂರಕ್ಷರದ ನಿನ್ನ ಹೆಸರು ನಿಮಿಷಕ್ಕೆ ಎಪ್ಪತ್ತೆರಡು ಬಾರಿ ಹೃದಯಬಡಿತದ ಜೊತೆ ನನ್ನೆದೆಯೊಳಗೆ ಗುನುಗುತ್ತಿದೆ. ನನ್ನೀ ಹೃದಯಕ್ಕೆ ನಿನ್ನ ಹೆಸರ ಧ್ಯಾನವೊಂದನ್ನ ಬಿಟ್ಟು ಬೇರೇನೂ ಕೆಲಸವಿಲ್ಲವೇನೋ ಅನಿಸುತ್ತದೆ. ಈ ಪ್ರೀತಿಯಲ್ಲಿ ಬಿದ್ದಾಗಿನಿಂದ, ಪ್ರತಿದಿನವೂ ಹೊಸತೇ; ಕಣ್ಣಿಗೆ ಕಾಣುವ ನೋಟವೆಲ್ಲ ಭಿನ್ನ. ಇದು ಯಾವಾಗ್ಲೂ ಹೀಗೇ ಇರಬೇಕು ಅನಿಸುತ್ತೆ.
ಇರಲಿ, ಬರೆಯುತ್ತ ಹೋದಂತೆಲ್ಲ ಕೊನೆ ಎಂಬುದೇ ಸಿಗಲ್ಲ. ಒಟ್ಟಾರೆ, ನನ್ನ ಪ್ರೀತಿಯನ್ನ ಒಪ್ಕೊಂಡಿದ್ದಕ್ಕೆ ಥ್ಯಾಂಕ್ಸ್ . ಹಿಂದೆ ಮುಂದೆ ನೋಡದೇ ನನ್ನ ನಿವೇದನೆಗೆ ಹಸಿರು ನಿಶಾನೆ ತೋರಿದ ನಿನಗೆ ನನ್ನಿಂದ ಯಾವತ್ತೂ ಅನ್ಯಾಯವಾಗೋದಿಲ್ಲ ಅಂತ ಭರವಸೆ ಕೊಡೋದಕ್ಕಂತಾನೇ ಈ ಪತ್ರ ಬರಿತಿದೀನಿ. ಎಳೆನೀರಿನಷ್ಟೇ ತಿಳಿಯಾದ ನನ್ನ ಹೃದಯ ಸಾಮ್ರಾಜ್ಯದ ಒಡತಿಯಾಗಿ ನಿನಗೆ ಪಟ್ಟಾಭಿಷೇಕವನ್ನು ಎಂದೋ ಮಾಡಿ ಮುಗಿಸಿದ್ದೇನೆ. ನಿನ್ನಿಂದ ನಾ ಬೇಡುವುದೊಂದೇ; ನಾ ಬಯಸಿದಾಗಲೊಮ್ಮೆ ಚೆಂದದ ನಗೆಯೊಂದನ್ನು ಬೀರು ಸಾಕು; ನನ್ನ ಮನದ ತುಂಬೆಲ್ಲ ಬೆಳದಿಂಗಳ ಹಬ್ಬವೇ ಜರುಗುತ್ತದೆ.
ಇಂತಿ ನಿನ್ನವ,
ಮಲಿಂಗಪ್ಪ ಬೆಣ್ಣಿ ಗುಳದಳ್ಳಿ