Advertisement

ಅಂತೂ ವಿಧಾನಸಭೆ ಕಲಾಪ ಗದ್ದಲಕ್ಕೆ ಬ್ರೇಕ್‌

10:07 AM Mar 06, 2020 | Lakshmi GovindaRaj |

ವಿಧಾನಸಭೆ: ಎರಡು ದಿನಗಳಿಂದ ವಿಧಾನಸಭೆಯ ಕಲಾಪವನ್ನು ನುಂಗಿ ಹಾಕಿದ್ದ ದೊರೆಸ್ವಾಮಿ ಕುರಿತ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ನೀಡಿದ ಹೇಳಿಕೆ ಪ್ರಕರಣ ಕೊನೆಗೂ ಬುಧವಾರ ಅಂತ್ಯಗೊಂಡಿತು.

Advertisement

ಒಂದು ಹಂತದಲ್ಲಿ ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವಿನ ಗದ್ದಲ ಮುಂದುವರಿಯುವ ಲಕ್ಷಣ ಕಂಡು ಬಂತು. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ಹೇಳಿ ಪ್ರತಿಭಟನೆ ಹಿಂಪಡೆಯುವುದಾಗಿ ಪ್ರಕಟಿಸಿದ ನಂತರ ಗದ್ದಲ ಕೊನೆಗೊಂಡಿತು.

ಇದಕ್ಕೂ ಮುನ್ನ ಯತ್ನಾಳ್‌ ಹೇಳಿಕೆ ವಿವಾದ ಸಂಬಂಧ ವಿಧಾನಸಭಾಧ್ಯಕ್ಷರ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್‌ ದೂರು ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಬಿಜೆಪಿ ಶಾಸಕರು, ಬೇಷರತ್‌ ಕ್ಷಮೆಯಾಚನೆಗೆ ಆಗ್ರಹಿಸಿದರು.

ಬುಧವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದ ಕಾಂಗ್ರೆಸ್‌ ಶಾಸಕರು ಪ್ರತಿಭಟನೆ ಮುಂದುವರಿಸಿದರು. ಬಿಜೆಪಿಯ ಕೆ.ಜಿ.ಬೋಪಯ್ಯ, ವಿಧಾನಸಭಾಧ್ಯಕ್ಷರು ನಿಯಮಾನುಸಾರ ಸದನ ನಡೆಸುತ್ತಿದ್ದು, ಅವರ ವಿರುದ್ಧವೇ ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್‌ ಮುಂದಾಗಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಕಾಂಗ್ರೆಸ್‌ನವರು ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ಕೆ.ಎಸ್‌.ಈಶ್ವರಪ್ಪ, ನೋಟಿಸ್‌ ಕೂಡ ನೀಡದೆ ಗದ್ದಲ ಎಬ್ಬಿಸಿ ಸದನದ ಸದಸ್ಯರೊಬ್ಬರನ್ನು ಹೊರಕ್ಕೆ ಕಳುಹಿಸಿ ಎಂದು ಆಗ್ರಹಿಸುವುದನ್ನು ಇತಿಹಾಸದಲ್ಲಿ ನೋಡಿಲ್ಲ. ಇದು ಕಾಂಗ್ರೆಸ್‌ ನಾಯಕರು ಸಂವಿಧಾನಕ್ಕೆ ಮಾಡಿದ ದ್ರೋಹ ಎಂದು ಕಿಡಿ ಕಾರಿದರು. ಇದಕ್ಕೆ ಬಿಜೆಪಿಯ ಪಿ. ರಾಜೀವ್‌, ಸಿದ್ದು ಸವದಿ ಇತರರು ಧ್ವನಿಗೂಡಿಸಿದರು.

Advertisement

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸದನದಲ್ಲಿ ವಿಧಾನಸಭಾಧ್ಯಕ್ಷರು ನೀಡುವ ಸೂಚನೆಯೇ ಅಂತಿಮ. ಒಂದು ಸಾಂವಿಧಾನಿಕ ಹುದ್ದೆ ವಿರುದ್ಧ ಮತ್ತೂಂ ದು ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ದೂರು ನೀಡಿ ಸಂಘರ್ಷ ಸೃಷ್ಟಿಸುವಂತೆ ಎಳೆದಾಡುತ್ತಿರುವುದು ಸರಿಯ ಲ್ಲ. ಜನಪರ ವಿಚಾರಕ್ಕೆ ಗದ್ದಲ ಮಾಡುವುದು ಬೇರೆ. ಶಾಸಕರೊಬ್ಬರು ಎಲ್ಲೋ ನೀಡಿದ ಹೇಳಿಕೆಗಾಗಿ ಸದನಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದರು.

ಆಗ ಕಾಂಗ್ರೆಸ್‌ನ ಶಿವಶಂಕರರೆಡ್ಡಿ, ಗಂಭೀರ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಕೇಳಿದ ಮನವಿಗೆ ಸ್ಪಂದಿಸಿ ಅವಕಾಶ ನೀಡುವುದಾಗಿ ಸ್ಪೀಕರ್‌ ಹೇಳಿದ್ದರು. ಇದೀಗ ಅವರೇ ರಕ್ಷಣೆಗೆ ಬಾರದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಸಂವಿಧಾನದ ಆಶಯಗಳ ಬಗ್ಗೆ ವಿಶೇಷ ಚರ್ಚೆ ನಡೆಸೋಣ ಎನ್ನುತ್ತೀರಿ. ಆದರೆ, ಸಂವಿಧಾನ, ಅಂಬೇ ಡ್ಕರ್‌ ಅವರಿಗೆ ಅವಮಾನ ಮಾಡಲಾಗುತ್ತಿದೆ. ಶಾಸಕರು ಸದನದ ಒಳಗೆ, ಹೊರಗೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಬಾರದೆ ಎಂದು ಕುಟುಕಿದರು.

ಇದಕ್ಕೆ ಕೋಪಗೊಂಡ ಸಚಿವ ಜೆ.ಸಿ.ಮಾಧುಸ್ವಾಮಿ, ಹಿಂದೆ ರಾಜ್ಯಪಾಲರು ಮೂರು ಬಾರಿ ಸೂಚನೆ ನೀಡಿದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಸದನ ನಡೆಸಿದ್ದರು. ಆಗೆಲ್ಲಾ ರಾಜ್ಯಪಾಲರು, ನ್ಯಾಯಾಲಯ ಗೊತ್ತಿರಲಿಲ್ಲ. ಈಗ ರಾಜ್ಯಪಾಲರ ಗೌರವ ಗೊತ್ತಾಗುತ್ತಿದೆ ಎಂದು ಕಾಲೆಳೆದರು. ಇದಕ್ಕೆ ಧ್ವನಿಗೂಡಿಸಿದ ಬೊಮ್ಮಾಯಿ, ರಾಜ್ಯಪಾಲರ ವಿರು ದ್ಧವೇ ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಇಂದು ಅಲ್ಲಿಗೆ ಹೋಗುವಂತಾಯಿತು ಎಂದು ಕೆಣಕಿದರು.

ನಂತರ ವಿಧಾನಸಭಾಧ್ಯಕ್ಷರ ಸೂಚನೆಯಂತೆ ಜೆ.ಸಿ.ಮಾಧುಸ್ವಾಮಿ ಅವರು ಸಂವಿಧಾನದ ಆಶಯ ಕುರಿತು ಚರ್ಚೆ ಆರಂಭಿಸಿದರು. ಆಗ ಸದನದ ಬಾವಿ ಯಲ್ಲಿದ್ದ ಕಾಂಗ್ರೆಸ್‌ ಶಾಸಕರು, “ವಂದೇ ಮಾತರಂ, ಭಾರತ್‌ ಮಾತಾಕಿ ಜೈ’ ಎಂದು ಜೈಕಾರ ಹಾಕುತ್ತಾ, “ನ್ಯಾಯ ಬೇಕು’ ಎಂದು ಘೋಷಣೆ ಕೂಗುತ್ತಿದ್ದರು.

ಬಳಿಕ ವಿಧಾನಸಭಾಧ್ಯಕ್ಷರು ಸಂವಿಧಾನದ ಆಶಯ ಕುರಿತು ಪ್ರಸ್ತಾಪಿಸಿದಾಗಲೂ ಗದ್ದಲವಾಯಿತು. ಚರ್ಚೆ ನಡೆಸುವಾಗ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವುದು ಸರಿಯಾದ ಕ್ರಮವಲ್ಲ. ಹೋರಾಟ ಮಾಡುವವರು ಸಂವಿಧಾನಕ್ಕೆ ಗೌರವ ಕೊಡಬೇಕು ಎಂದರು. ಇದಕ್ಕೆ ಕಾಂಗ್ರೆಸ್‌ನ ಪಿ.ಟಿ.ಪರಮೇಶ್ವರ ನಾಯ್ಕ, ನಾವು ಚರ್ಚೆಗೆ ಸಿದ್ದರಿದ್ದೇವೆ. ಈ ಹಿಂದೆಯೇ ನೋಟಿಸ್‌ ನೀಡಿದ್ದೇವೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.

ಆ ಹೊತ್ತಿಗೆ ಸದನಕ್ಕೆ ಆಗಮಿಸಿದ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷದ ನಿಯೋಗದಿಂದ ರಾಜ್ಯಪಾಲರನ್ನು ಭೇಟಿಯಾಗಿ ಯತ್ನಾಳ್‌ ಹೇಳಿಕೆಯಿಂದಾಗುವ ನಿಯಮ ಉಲ್ಲಂಘನೆ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಧಾನಸಭಾಧ್ಯಕ್ಷರಿಗೆ ಸೂಚನೆ ನೀಡುವಂತೆ ಕೋರಲಾಗಿದೆ.

ಇದೀಗ ಜನರಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದ್ದು, ಪ್ರತಿ ಭಟನೆ ಹಿಂಪಡೆಯುತ್ತೇವೆ ಎಂದು ಹೇಳಿದರು. ಬಳಿಕ, ಸದನದ ಬಾವಿಯಲ್ಲಿದ್ದ ಕಾಂಗ್ರೆಸ್‌ ಶಾಸಕರು ತಮ್ಮ ಸ್ಥಾನಗಳಿಗೆ ಮರಳಿದರು. ಬಳಿಕ ಮಾತನಾಡಿದ ಕಾಗೇರಿ, ಸಂವಿಧಾನದ ಆಶಯ ಕುರಿತು ವಿಸ್ತೃತ ಚರ್ಚೆ ನಡೆಸೋಣ ಎಂದು ಹೇಳಿ ಗದ್ದಲಕ್ಕೆ ತೆರೆ ಎಳೆದರು.

ಪ್ರಜಾ ತಂತ್ರಕ್ಕೆ ಮಾರಕ: ಶೆಟ್ಟ ರ್‌ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ಕಾಂಗ್ರೆಸ್‌ನವರ ಮನೋಭಾವ ಪ್ರಜಾ ತಂತ್ರಕ್ಕೆ ಮಾರಕ. ಸದನದ ಹೊರಗೆ ನಡೆದ ವಿಚಾರಕ್ಕೆ ಸದನದ ಸಮಯವನ್ನು ಹಾಳು ಮಾಡುವುದು ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ. ಯಾವುದೇ ಗಂಭೀರ ವಿಚಾರ ಪ್ರಸ್ತಾಪಿಸಲು ನೋಟಿಸ್‌ ನೀಡ ಬೇಕು ಎಂಬುದು ಸಾಮಾನ್ಯ ಜ್ಞಾನ.

ಇಂತಹ ವಿಚಾರ ಗಳಿಗೆ ಶೂನ್ಯ ವೇಳೆಯಲ್ಲಿ ಅವಕಾಶ ನೀಡಬಹುದು. ವಿಧಾನಸಭಾಧ್ಯಕ್ಷರ ತೀರ್ಪಿನ ವಿರುದ್ಧ ರಾಜ್ಯಪಾಲ ರಿಗೆ ದೂರು ನೀಡಲು ಮುಂದಾಗಿದ್ದು ಸರಿಯಲ್ಲ. ಕಾಂಗ್ರೆಸ್‌ನವರು ಸೋನಿಯಾಗಾಂಧಿ, ರಾಹುಲ್‌ಗೆ ಬೇಕಾದರೆ ದೂರು ನೀಡಲಿ. ಸಿದ್ದರಾಮಯ್ಯ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಜುಜುಬಿ ಕಾರಣ: ಬಿಜೆಪಿಯ ಅರಗ ಜ್ಞಾನೇಂದ್ರ ಮಾತನಾಡಿ, ಎಲ್ಲೋ ದಾರಿಯಲ್ಲಿ ನಡೆದ ಘಟನೆಗೆ ಮೂರು ದಿನದ ಸದನದ ಕಲಾಪ ಹಾಳು ಮಾಡಿದ್ದು ನಾಚಿಕೆಗೇಡಿನ ಸಂಗತಿ. ಜುಜುಬಿ ಕಾರಣಕ್ಕೆ ಸದನ ನಡೆಯದಂತೆ ತಡೆದಿದ್ದಾರೆ. ಇದು ಅಕ್ಷಮ್ಯ, ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಸ್ವಾತಂತ್ರ್ಯದ ಬಗ್ಗೆ ಬಿಜೆಪಿಯವರಿಗೆ ಎಳ್ಳಷ್ಟೂ ಗೌರವ ಇಲ್ಲ. ಇದೊಂದು ಷಡ್ಯಂತ್ರ ಎನ್ನುವ ಅನುಮಾನವಿದೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳು ವಂತೆ ಮನವಿ ಮಾಡಿದ್ದೇವೆ.
-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next