ಹೊಸದಿಲ್ಲಿ : ಕಳೆದ ವರ್ಷ ಬಿಟ್ ಕಾಯಿನ್ ಅಥವಾ ಕ್ರಿಪ್ಟೋ ಕರೆನ್ಸಿ ಕುರಿತ ಮಾಹಿತಿಯನ್ನು ಕಲೆ ಹಾಕಲು ಇಡಿಯ ವಿಶ್ವದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಆಸಕ್ತಿ ತೋರಿದ ಭಾರತೀಯ ನಗರವೆಂದರೆ ಗುಜರಾತ್‌ನ ಸೂರತ್ ಎಂಬ ಅಚ್ಚರಿಯ ಸಂಗತಿ ಗೂಗಲ್ ಟ್ರೆಂಡ್ಸ್ ಅಂಕಿ ಅಂಶಗಳಿಂದ ಗೊತ್ತಾಗಿದೆ.
ಸೂರತ್ ನಗರವು ವಿಶದಲ್ಲೇ ಅತ್ಯಧಿಕ ಸಂಖ್ಯೆಯ ವಜ್ರಗಳನ್ನು ಕಟ್ ಮಾಡಿ ಪಾಲಿಶ್ ಮಾಡುವ ಭಾರತೀಯ ನಗರವಾಗಿದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್‌ನ ಈ ನಗರವು ದೇಶದ ಪ್ರಸಿದ್ದ ಕೈಗಾರಿಕಾ ನಗರವೂ ಆಗಿದೆ.
ಬಿಟ್ ಕಾಯಿನ್ ಕುರಿತ ಗರಿಷ್ಠ ಸಂಖ್ಯೆಯ ಜಾಲ ತಾಣ ಶೋಧದಲ್ಲಿ ಸೂರತ್ ನಗರ ವಿಶ್ವದಲ್ಲೇ ಮೊದಲಿಗನಾಗಿರುವುದನ್ನು ಗೂಗಲ್ ಟ್ರೆಂಡ್ ಬಹಿರಂಗಪಡಿಸಿದೆ.
ಬಿಟ್ ಕಾಯಿನ್ ಕುರಿತ ಗರಿಷ್ಠ ಸಂಖ್ಯೆಯ ಅಂತರ್‌ಜಾಲ ಶೋಧದಲ್ಲಿ ಸೂರತ್ ನಗರ, ಅಮೆರಿಕದ ಯಾಂಕರ್ಸ್, ಸ್ಯಾನ್ ಜೋಸ್, ಕೇಪ್ ಟೌನ್, ಹೊಸದಿಲ್ಲಿ ಮುಂತಾದ ಪ್ರಮುಖ ನಗರಗಳನ್ನು ಹಿಂದಿಕ್ಕಿದೆ.
ಬಿಟ್ ಕಾಯಿನ್ ಮಾಹಿತಿಗಾಗಿ ಅಂತರ್ ಜಾಲ ಶೋಧಿಸುವ ಮೂಲಕ ಗರಿಷ್ಠ ಆಸಕ್ತಿ ತೋರಿದ ವಿಶ್ವದ ಮೊದಲ ಹತ್ತು ನಗರಗಳ ಪೈಕಿ ಭಾರತದ ಪಿಂಪ್ರಿ ಚಿಂಚ್‌ವಾಡ (ಪುಣೆ) ಏಳನೇ ಸ್ಥಾನದಲ್ಲಿದೆಯಾದರೆ ಗುರುಗ್ರಾಮ ಎಂಟನೇ ಸ್ಥಾನದಲ್ಲಿದೆ.
ಹಾಗೆಯೇ ಮೊದಲ ನೂರರ ಪಟ್ಟಿಯಲ್ಲಿ ನೋಯ್ಡಾ 12ನೇ ಸ್ಥಾನದಲ್ಲಿದೆ. ಜೈಪುರ 23, ದಿಲ್ಲಿ 52, ಮುಂಬಯಿ 73, ಬೆಂಗಳೂರು 81, ಕೋಲ್ಕತಾ 88, ಅಹ್ಮದಾಬಾದ್ 94 ಮತ್ತು ಪುಣೆ 100 ನೇ ಸ್ಥಾನದಲ್ಲಿದೆ.
ಬಿಟ್ ಕಾಯಿನ್ ಮಾಹಿತಿಗಾಗಿ ಗರಿಷ್ಠ ಸಂಖ್ಯೆಯಲ್ಲಿ ಜಾಲ ತಾಣ ಜಾಲಾಡಿರುವ ವಿಶ್ವದ 147 ನಗರಗಳನ್ನು ಗೂಗಲ್ ಪಟ್ಟಿ ಮಾಡಿದೆ.