ನವದೆಹಲಿ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ “ಕಾಂತಾರ” ಸಿನಿಮಾ ಕನ್ನಡ, ಹಿಂದಿ, ಮಲಯಾಳಂ ಭಾಷೆಯಲ್ಲಿಯೂ ಭರ್ಜರಿ ಯಶಸ್ವಿ ಪ್ರದರ್ಶನ ಕಂಡು 200 ಕೋಟಿ ರೂ. ಗಳಿಕೆ ಕಂಡಿರುವ ನಡುವೆಯೇ ನಟ ಚೇತನ್ ಚಿತ್ರದ ಕುರಿತು ನೀಡಿದ್ದ ಹೇಳಿಕೆ ವಿವಾದಕ್ಕೀಡಾಗಿತ್ತು. ಕಾಂತಾರ ಸಿನಿಮಾದಲ್ಲಿನ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುವುದಿಲ್ಲ ಎಂದು ನಟ ಚೇತನ್ ಆರೋಪಿಸಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮತ್ತೊಬ್ಬ ಸಿನಿಮಾ ನಿರ್ದೇಶಕ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮಬಂಗಾಳದ ನಿರ್ದೇಶಕ ಅಭಿರೂಪ್ ಬಸು ಎಕಾನಾಮಿಕ್ಸ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಕಾಂತಾರ ಸಿನಿಮಾದ ಬಗ್ಗೆ ಕಟುವಾಗಿ ಟೀಕಿಸಿದ್ದು, ಈ ಸಿನಿಮಾ ಜನರು ದೈವದ ಮಧ್ಯಪ್ರವೇಶವನ್ನು ನಂಬುವಂತೆ ಒತ್ತಾಯಿಸಿದೆ ಎಂದು ದೂರಿದ್ದಾರೆ.
ಕಾಂತಾರ ಸಿನಿಮಾ ಬುದ್ಧಿವಂತಿಕೆಯ ಅಪಹಾಸ್ಯ ಎಂದೇ ಭಾವಿಸುತ್ತೇನೆ. ಈ ಚಿತ್ರವನ್ನು ತುಂಬಾ ಕೆಟ್ಟದಾಗಿ ನಿರ್ಮಾಣ ಮಾಡಲಾಗಿದೆ. ಕಳಪೆ ಗುಣಮಟ್ಟದ್ದಾಗಿದೆ. ಈ ಸಿನಿಮಾದಲ್ಲಿ ಯಾವುದೇ ನೈಜವಾದ ಪಾತ್ರಗಳಿಲ್ಲ. ಸ್ವಯಂ ಘೋಷಿತ ಕಥೆಯಲ್ಲಿನ ತಿರುವುಗಳು ಅಪ್ರಾಮಾಣಿಕತೆ ಮತ್ತು ಗಿಮಿಕ್ ಗಳಿಂದ ಕೂಡಿದೆ. ನಾಯಕ ಪಾತ್ರಧಾರಿಯ ಕೊನೆಯ ಹಂತ ನಗೆಪಾಟಲು ಎಂದು ಬಸು ವ್ಯಂಗ್ಯವಾಡಿದ್ದಾರೆ.
ನಾನು ಈ ಸಿನಿಮಾದ ಬಗ್ಗೆ ನಿಜಕ್ಕೂ ಹೆಚ್ಚು ಕುತೂಹಲಿಗನಾಗಿಲ್ಲ. ಪೌರಾಣಿಕ ಪಾತ್ರಗಳ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಾಬೀತುಪಡಿಸಲು ದೇಶದಲ್ಲಿ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅತಿಮಾನುಷ ಶಕ್ತಿಯನ್ನು ನಂಬುವಂತೆ ಒತ್ತಾಯಿಸುವ ಕಾಂತಾರ ಸಿನಿಮಾ ಇಂತಹದ್ದೇ ಭಾವನೆಗಳ, ಕಥಾ ಹಂದರದ ಸಿನಿಮಾಗಳಿಗೆ ಆಘಾತಕಾರಿಯಾಗಲಿಕ್ಕಿಲ್ಲ ಎಂದು ಭಾವಿಸುವುದಾಗಿ ಬಸು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಯಾರೀತ ಅಭಿರೂಪ್ ಬಸು?
ಕೋಲ್ಕತಾದ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿರೂಪ್ ಬಸು. ಚಿತ್ರಕಥೆಗಾರ ಕೂಡ ಹೌದು. ಅಭಿರೂಪ್ ಜೆಕ್ ರಿಪಬ್ಲಿಕ್ ನ ಪ್ರತಿಷ್ಠಿತ ಪ್ರೇಗ್ ಫಿಲ್ಮ್ ಸ್ಕೂಲ್ ನಲ್ಲಿ ಚಲನಚಿತ್ರಗಳ ಬಗ್ಗೆ ಅಭ್ಯಸಿಸಿದ್ದು, ಇರಾನ್ ಸಿನಿಮಾ ನಿರ್ಮಾಪಕ ಮಣಿ ಹಾಘಿಗಿ ಅವರೊಂದಿಗೆ ಚಿತ್ರಕಥೆಯ ಅಧ್ಯಯನ ನಡೆಸಿರುವುದಾಗಿ ವರದಿ ತಿಳಿಸಿದೆ.
ಬಸು ನಿರ್ದೇಶನದ Meal ಮತ್ತು Laali ಸಿನಿಮಾ 70ಕ್ಕೂ ಅಧಿಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಿದ್ದು, ಹಲವಾರು ಪ್ರಶಸ್ತಿಗಳನ್ನು ಪಡೆದಿದೆ. ಇತ್ತೀಚೆಗಷ್ಟೇ ಗುಡ್ ಗುಡಿ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.