Advertisement
ದೇಶದ ಹಿತದೃಷ್ಟಿಯಿಂದ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರತಿಷ್ಠೆಯದ್ದಾಗಿದೆ. ಇದೇ ಕಾರಣಕ್ಕೆ ಇಡೀ ದೇಶ ಕರ್ನಾಟಕದ ಚುನಾವಣೆಯತ್ತ ನೋಡುತ್ತಿದೆ. ಮುಂದಿನ ಆರು ತಿಂಗಳಲ್ಲಿ ಮಧ್ಯಪ್ರದೇಶ ಚುನಾವಣೆ ನಡೆಯಲಿದೆ. ಒಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಈ ಚುನಾವಣೆ ಗೆದ್ದರೆ, 2019ರ ಲೋಕಸಭೆ ಚುನಾವಣೆ ಗೆಲ್ಲಲು ಮೆಟ್ಟಿಲಾಗಲಿದೆ ಎಂದರು.
Related Articles
Advertisement
ಇನ್ನು 24 ದಿನಗಳಲ್ಲಿ ನಾನೇ ಮುಖ್ಯಮಂತ್ರಿ, ಅಧಿಕಾರಕ್ಕೆ ಬಂದರೆ ನೀರಾವರಿಗೆ 1 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳುತ್ತಿರುವ ಯಡಿಯೂರಪ್ಪ3 ವರ್ಷ 2 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದರು? ಹಾವೇರಿಯಲ್ಲಿ ಗೊಬ್ಬರ-ಬಿತ್ತನೆ ಬೀಜ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿಸಿ, ಇಬ್ಬರು ರೈತರನ್ನು ಸಾಯಿಸಿದ್ದರು ಎಂದು ಟೀಕಿಸಿದರು.
ಮುಂದಿನ ಅಭಿವೃದ್ಧಿ ಪ್ರಸ್ತಾಪ: ಚುನಾವಣೆಯಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿ ಮತ್ತು ಸಾಧನೆಗಳನ್ನು ಜನರ ಮುಂದಿಡಬೇಕು. ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆಯಲ್ಲೂ ನಾವು ಇದನ್ನೇ ಮಾಡಿದ್ದು, ಈ ಚುನಾವಣೆಯಲ್ಲಿ ಕೂಡ ಕಳೆದ ಐದು ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿದ ಸಾಧನೆ ಹಾಗೂ ಮುಂದೆ ಮಾಡಲಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪ ಮಾಡುತ್ತೇವೆ.
ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ: ಕೆಲ ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ಇರಬಹುದು. ಆದರೆ, ನಮ್ಮ ಸರ್ಕಾರದ ಮೇಲೆ ಆಡಳಿತ ವಿರೋಧಿ ಅಲೆ ಇಲ್ಲ. ಗುಪ್ತಚರ ಇಲಾಖೆ ವರದಿ ಸೇರಿದಂತೆ ನಾವೂ ಮೂರು ಸರ್ವೇ ಮಾಡಿಸಿದ್ದೇವೆ. ಎಲ್ಲ ಸಮೀಕ್ಷೆಗಳಲ್ಲೂ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುವುದಾಗಿ ಹೇಳಲಾಗಿದೆ. ಜತೆಗೆ ರಾಜ್ಯದ ಜನತೆ ಈಗಾಗಲೇ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಮೋದಿ-ಶಾ ಅವರು ನೂರು ಬಾರಿ ರಾಜ್ಯಕ್ಕೆ ಬಂದರೂ ಏನೂ ಆಗಲ್ಲ. ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂಬುದು ಜೆಡಿಎಸ್‌ನವರ ಭ್ರಮೆ ಎಂದು ಹರಿಹಾಯ್ದರು.
ಆಧಾರ ರಹಿತ ಹೇಳಿಕೆ: ಬಿಜೆಪಿಯವರು ಅಭಿವೃದ್ಧಿ ವಿಚಾರಗಳನ್ನು ಮಾತನಾಡದೆ, ಕ್ಷುಲ್ಲಕ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವ ಹಗರಣ, ಭ್ರಷ್ಟಾಚಾರ ನಡೆದಿಲ್ಲ. ಆದರೂ ಪ್ರಧಾನಮಂತ್ರಿಯವರು ಕರ್ನಾಟಕಕ್ಕೆ ಬಂದು ಸಿದ್ದರಾಮಯ್ಯ ಅವರದ್ದು ಟೆನ್ ಪರ್ಸೆಂಟ್ ಸರ್ಕಾರ ಎಂದು ಆಧಾರ ರಹಿತ, ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಈ ರೀತಿ ಮೋದಿ, ಅಮಿತ್ ಶಾ, ಯಡಿಯೂರಪ್ಪಸುಳ್ಳು ಆರೋಪಗಳನ್ನು ಮಾಡಿದಾಗ ರಾಜಕೀಯ ಹೇಳಿಕೆಗಳನ್ನು ನೀಡಿರುವುದನ್ನು ಬಿಟ್ಟರೆ, ಬಿಜೆಯವರಂತೆ ತಾವು ಅನಗತ್ಯ ಟೀಕೆಗಳನ್ನು ಮಾಡಿಲ್ಲ ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಕಾರು ಅಪಘಾತವಾದರೆ ಅದರಲ್ಲಿ ರಾಜ್ಯ ಸರ್ಕಾರದ ಕೈವಾಡ ಇದೆ ಎಂದು ಆಧಾರ ರಹಿತ ಹೇಳಿಕೆ ನೀಡುತ್ತಾರೆ. ಇಂಥವನ್ನೆಲ್ಲಾ ನಂಬಲು ಜನ ಮೂರ್ಖರು ಎಂದು ಕೊಂಡಿದ್ದಾರಾ? ಪದೇಪದೆ ಸುಳ್ಳು ಹೇಳಿದರೆ ಇವರೇ ಮೂರ್ಖರಾಗುತ್ತಾರೆ ಎಂದು ಜರಿದರು.ಈ ವೇಳೆ ಸಚಿವ ತನ್ವೀರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು ಹಾಜರಿದ್ದರು.