ಬೆಂಗಳೂರು: ಆಮ್ ಆದ್ಮಿ ಪಾರ್ಟಿಯು ದಿಲ್ಲಿ ಹಾಗೂ ಪಂಜಾಬ್‌ನಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಬೇರೆ ಪಕ್ಷಗಳು ನಕಲು ಮಾಡಿ ಕರ್ನಾಟಕದಲ್ಲಿ ಆಶ್ವಾಸನೆ ನೀಡುತ್ತಿದ್ದು, ಈ ಚುನಾವಣೆಯು ಅಸಲಿ ಮತ್ತು ನಕಲಿಗಳ ನಡುವಿನ ಹೋರಾಟವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಬೆಂಗಳೂರಿನ ಪ್ರಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಪ್ ಮಾದರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡೆಯುತ್ತಿವೆ. ಉಚಿತ ಕೊಡುಗೆ ಘೋಷಣೆ ಮಾಡುತ್ತಿವೆ. ಅಲ್ಲದೆ, ಈ ಹಿಂದೆ ಆಪ್ ಕಾರ್ಯಕ್ರಮಗಳನ್ನು ಹಾಸ್ಯಾಸ್ಪದ ಎಂದು ಟೀಕಿಸಿದರು. ಈಗ ಅದನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಶೇ. 40 ಕಮಿಷನ್ ಡಬಲ್ ಇಂಜಿನ್ ಸರಕಾರವಿದ್ದು, ಈ ಹಿಂದಿನ ಕಾಂಗ್ರೆಸ್ ಸರಕಾರಕ್ಕಿಂತ ಭ್ರಷ್ಟಾಚಾರ ಡಬಲ್ ಆಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹೊಂದಾಣಿಕೆ ರಾಜಕಾರಣವಿದೆ. ಕರ್ನಾಟಕಕ್ಕೆ ಡಬಲ್ ಎಂಜಿನ್ ಸರಕಾರದ ಅಗತ್ಯವಿಲ್ಲ. ಹೊಸ ಎಂಜಿನ್‌ನ “ಕೇಜ್ರಿವಾಲ್ ಮಾದರಿ” ಸರಕಾರ ಬೇಕಾಗಿದೆ ಎಂದು ಹೇಳಿದರು.
ಈಗಾಗಲೇ ದಿಲ್ಲಿ ಹಾಗೂ ಪಂಜಾಬ್‌ನಲ್ಲಿ ರಾಜಕೀಯ ಸ್ವತ್ಛತೆ ಮಾಡಲಾಗಿದೆ. ಈಗ ಕರ್ನಾಟಕದಲ್ಲಿ ಸ್ವತ್ಛತೆ ಮಾಡಬೇಕು. ಜನತೆ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕಾದ ಪರಿಸ್ಥಿತಿ ಇದೆ. ಶೂನ್ಯ ಕಮಿಷನ್ ಸರಕಾರ ಬಂದಲ್ಲಿ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲಿದ್ದು, ದೇಶ ಅಭಿವೃದ್ಧಿ ಪಥದೊಡೆಗೆ ಸಾಗಬೇಕೆಂದರೆ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲಿಸಬೇಕಾದ್ದು ಅನಿವಾರ್ಯ. ಜನರು ಜನಪರ ಆಡಳಿತವನ್ನು ಜನರು ಬಯಸುತ್ತಿದ್ದಾರೆ ಎಂದರು.