Advertisement

ಕರಾವಳಿಯಲ್ಲಿ ರಂಗೇರಿದ ಚುನಾವಣೆ ಕಾವು: ಉಭಯ ಪಕ್ಷಗಳಲ್ಲೂ ಭರ್ಜರಿ ಉತ್ಸಾಹ

12:08 AM Apr 14, 2024 | Team Udayavani |

ಉಡುಪಿ: ರಾಜ್ಯದಲ್ಲಿ ಭಿನ್ನ ರಾಜಕೀಯ ಚಿತ್ರಣದಿಂದಲೇ ಗುರುತಿಸಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಚುನಾವಣೆ ಪ್ರಚಾರ ಕಾವು ಹೆಚ್ಚತೊಡಗಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಘೋಷಣೆ ಪೂರ್ವದಲ್ಲಿ ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಫ‌ಲಾನುಭವಿಗಳ ಸಮಾವೇಶ ನಡೆಸಿ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಲು ಕರೆ ಕೊಟ್ಟಿದ್ದರು. ಅದಾದ ಕೆಲವೇ ದಿನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ಕರಾವಳಿಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಬೂಸ್ಟ್‌ ನೀಡಿದರು.

ಇದಾದ ಅನಂತರದಲ್ಲಿ ಚುನಾವಣೆ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆ ಇತ್ಯಾದಿ ನಡೆದು ಹಂತಹಂತವಾಗಿ ಪ್ರಚಾರ ಪ್ರಕ್ರಿಯೆ ಆರಂಭವಾಗಿತ್ತು. ಇದೀಗ ಅಭ್ಯರ್ಥಿಗಳು ಬಿಡುವಿಲ್ಲದೇ ಮತಬೇಟೆಗಿಳಿದ್ದಾರೆ. ವಿಧಾನಸಭಾ ಕ್ಷೇತ್ರವಾರು ಒಂದೆರಡು ಸುತ್ತಿನ ಪ್ರಚಾರವನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಆಯಾ ಕ್ಷೇತ್ರದಲ್ಲಿನ ಪ್ರಮುಖರ ಭೇಟಿ, ನಾಯಕರೊಂದಿಗೆ ಸಭೆ, ಮತದಾರರೊಂದಿಗೆ ಚರ್ಚೆ, ಸಂವಾದ, ಕೈಗಾರಿಕೆ, ಕಾರ್ಖಾನೆಗಳಲ್ಲಿ ಮತಯಾಚನೆಯ ಮೊದಲ ಹಂತ ಪೂರ್ಣಗೊಳಿಸಿದ್ದಾರೆ.

ಏತನ್ಮಧ್ಯೆ ಅಭ್ಯರ್ಥಿಗಳು ದೇವಸ್ಥಾನ, ದೈವಸ್ಥಾನ, ಧಾರ್ಮಿಕ ಕೇಂದ್ರಗಳ ಭೇಟಿ, ಧಾರ್ಮಿಕ ಮುಖಂಡರೊಂದಿಗೆ ಮಾತುಕತೆ ಇತ್ಯಾದಿಗಳನ್ನು ನಡೆಸುತ್ತಿದ್ದಾರೆ. ಜಾತ್ರೆ, ಉತ್ಸವ, ಕೋಲ, ನೇಮಗಳಲ್ಲೂ ಅಭ್ಯರ್ಥಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ತಮಗೆ ಸಾಧ್ಯವಿರುವ ಎಲ್ಲ ಕಡೆಗಳಲ್ಲೂ ಗೆಲ್ಲಿಸಿ ಎಂದು ಮತದಾರರಲ್ಲಿ ಕೈ ಮುಗಿದು ಕೇಳುತ್ತಿದ್ದಾರೆ.

ರಾಷ್ಟ್ರ, ರಾಜ್ಯ ನಾಯಕರ ಭೇಟಿ
ಚುನಾವಣೆ ಘೋಷಣೆ ಪೂರ್ವದಲ್ಲಿ ರಾಜ್ಯ, ರಾಷ್ಟ್ರ ನಾಯಕರು ಭೇಟಿ ನೀಡಿ, ವೇದಿಕೆ ಸಜ್ಜುಗೊಳಿಸಿ ವಾಪಸಾಗಿದ್ದರು. ಈಗ ಚುನಾವಣೆ ದಿನಾಂಕ ಸಮೀಪಿಸುತ್ತಿರುವುದರಿಂದ ಮತ್ತೂಂದು ಸುತ್ತಿನ ಮತಬೇಟೆಗೆ ರಂಗ ಸಜ್ಜಾಗುತ್ತಿದೆ. ಎ. 14ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿ ರೋಡ್‌ ಶೋನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಎರಡು ಜಿಲ್ಲೆಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ಎ. 16ರಂದು ಉಡುಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಗಮಿಸಲಿದ್ದು, ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಅಂದು ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಉಡುಪಿ ನಗರದಲ್ಲಿ ಕಾರ್ಯಕರ್ತರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲು ಬೇಕಾದ ಸಿದ್ಧತೆ ನಡೆಯುತ್ತಿದೆ. ಎ. 16ರ ಅನಂತರದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉಡುಪಿಗೆ ಆಗಮಿಸಲಿದ್ದು, ಉಡುಪಿ ಅಥವಾ ಕುಂದಾಪುರದಲ್ಲಿ ಜಿಲ್ಲಾ ಬಿಜೆಪಿಯಿಂದ ಬೃಹತ್‌ ಸಮಾವೇಶ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಕಾರ್ನರ್‌ ಸಭೆ
ಉಭಯ ಪಕ್ಷದ ಅಭ್ಯರ್ಥಿಗಳು ದೊಡ್ಡದೊಡ್ಡ ಸಮಾವೇಶದ ಬದಲಿಗೆ ಅಲ್ಲಲ್ಲಿ ಕಾರ್ನರ್‌ ಸಭೆಗಳನ್ನು ನಡೆಸಿ ಮುಖಂಡರು, ಕಾರ್ಯಕರ್ತರನ್ನು ಚುನಾವಣೆ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುವ ಜತೆಗೆ ಕೇಂದ್ರ, ರಾಜ್ಯ ಸರಕಾರಗಳ ಸಾಧನೆಯನ್ನು ಆಯಾ ಅಭ್ಯರ್ಥಿಗಳು ಮತದಾರರ ಮುಂದಿಡುತ್ತಿದ್ದಾರೆ. ಹಾಗೆಯೇ ಗ್ಯಾರಂಟಿ ಯೋಜನೆಯ ಫ‌ಲಾನುಭವಿಗಳನ್ನು ಕಾಂಗ್ರೆಸ್‌ ಹೆಚ್ಚು ಕೇಂದ್ರೀಕರಿಸಿದರೆ, ಬಿಜೆಪಿ ದೇಶದ ಅಭಿವೃದ್ಧಿ, ವಿಕಸಿತ ಭಾರತ ಇತ್ಯಾದಿ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದೆ. ಒಟ್ಟಿನಲ್ಲಿ ಇಡೀ ಕರಾವಳಿಯಲ್ಲಿ ಚುನಾವಣೆ ಪ್ರಚಾರದ ಕಾವು ದಿನೇದಿನೆ ಏರುತ್ತಲೇ ಇದೆ.

ಅಭ್ಯರ್ಥಿಗಳಿಗಿಂತಲೂ ನೋಟಾಗೆ ಅಧಿಕ ಮತ !
ಲೋಕಸಭಾ ಚುನಾವಣೆಯಲ್ಲಿ 2014ರಲ್ಲಿ ಮೊದಲ ಬಾರಿಗೆ ನೋಟಾವನ್ನು ಪರಿಚಯಿಸಲಾಯಿತು. ವಿಶೇಷವೆಂದರೆ ಕಳೆದ ಎರಡೂ ಲೋಕಸಭಾ ಚುನಾವಣೆಗಳಲ್ಲಿ ಕೆಲವು ಅಭ್ಯರ್ಥಿಗಳು ಪಡೆದ ಮತಗಳಿಗಿಂತಲೂ ಅಧಿಕ ಸಂಖ್ಯೆಯಲ್ಲಿ ನೋಟಾ ಮತ ಚಲಾವಣೆಯಾಗಿದೆ. 2014ರ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿಗೆ ಕನಿಷ್ಠ 1,089 ಮತಗಳು ಲಭಿಸಿದರೆ, ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ ಕನಿಷ್ಠ 657 ಮತಗಳನ್ನು ಪಡೆದಿದ್ದರು. ಇನ್ನು 2019ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ ಪಡೆದ ಕನಿಷ್ಠ ಮತ 1,581 ಆದರೆ, ದಕ್ಷಿಣ ಕನ್ನಡದಲ್ಲಿ ಓರ್ವ ಅಭ್ಯರ್ಥಿಗೆ 554 ಮತಗಳಷ್ಟೇ ಲಭಿಸಿತ್ತು. ಈ ಎರಡೂ ಸಂದರ್ಭದಲ್ಲಿ ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಬಿದ್ದ ಮತಗಳ ಸಂಖ್ಯೆ ಅಧಿಕವಾಗಿತ್ತು.

2019ರಲ್ಲಿ ದೇಶದಲ್ಲಿ ಒಟ್ಟು ಶೇ. 1.06 ನೋಟಾ ಮತಗಳು ಚಲಾವಣೆಯಾಗಿದೆ. 2014ರಲ್ಲಿ ಒಟ್ಟು ಶೇ. 1.08 ನೋಟಾ ಮತಗಳು ಚಲಾವಣೆಯಾಗಿದೆ. 2019ರಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಉತ್ತರಕನ್ನಡದಲ್ಲಿ ಒಟ್ಟು 11,53,480 ಮತಗಳು ಚಲಾವಣೆಯಾಗಿದೆ. ಅದರಲ್ಲಿ 16,017 ಮತಗಳು ನೋಟಾ ಆಗಿದ್ದು, ಇದು ರಾಜ್ಯದಲ್ಲಿ ಅತೀ ಹೆಚ್ಚು ನೋಟಾಕ್ಕೆ ಸಿಕ್ಕ ಮತ. ಬೀದರ್‌ನಲ್ಲಿ ಒಟ್ಟು 11,17,167 ಚಲಾವಣೆಯಾದ ಮತಗಳಲ್ಲಿ ಅತೀ ಕಡಿಮೆ ಅಂದರೆ 1,948 ನೋಟಾ ಮತಗಳು ಚಲಾವಣೆಯಾಗಿದೆ. 2014ರಲ್ಲಿಯೂ ಒಟ್ಟು 10,01,038 ಮತಗಳಲ್ಲಿ ಉತ್ತರಕನ್ನಡದಲ್ಲಿ ಅತೀ ಹೆಚ್ಚು ಅಂದರೆ 16,277 ಮತ್ತು ಬೀದರ್‌ನಲ್ಲಿ ಒಟ್ಟು 9,59,384 ಮತಗಳಲ್ಲಿ ಅತೀ ಕಡಿಮೆ ಅಂದರೆ 2,817 ನೋಟಾ ಮತಗಳು ಚಲಾವಣೆಯಾಗಿವೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ಮತದಾನದಲ್ಲಿ ಮಹಿಳೆಯರು
ಮುಂದೆ ಅವಕಾಶದಲ್ಲಿ ಹಿಂದೆ !
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚು. ಆದರೆ,ಇಲ್ಲಿ ಮಹಿಳೆಯರು ಗೆದ್ದ ಉದಾ ಹರಣೆಯೇ ಇಲ್ಲ. ಗೆಲ್ಲುವುದು ಬಿಡಿ, ಸ್ಪರ್ಧೆಗೂ ಇಲ್ಲಿ ಅವಕಾಶ ಸಿಕ್ಕಿದ್ದು ಭಾರೀ ಕಡಿಮೆ. ಪಕ್ಕದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಇಂದಿರಾ ಗಾಂಧಿ, ತಾರಾದೇವಿ ಸಿದ್ಧಾರ್ಥ ಅವರು ಗೆದ್ದು ವಿಕ್ರಮ ಮೆರೆದಿದ್ದರು. ಆದರೆ, ದಕ್ಷಿಣ ಕನ್ನಡದಲ್ಲಿ ನಿರಂತರ ಪುರುಷ ಪಾರಮ್ಯ.

ಕಾಂಗ್ರೆಸ್‌ ಮತ್ತು ಬಿಜೆಪಿ ಇಲ್ಲಿ ಯಾವತ್ತೂ ಮಹಿಳೆಯರಿಗೆ ಟಿಕೆಟ್‌ ನೀಡಲೇ ಇಲ್ಲ. 1999 ರಲ್ಲಿ ಲೋಕೇಶ್ವರಿ ವಿನಯಚಂದ್ರ ಅವರು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು. 1989ರಲ್ಲಿ ಗರ್ಟಿ ಸುವರ್ಣ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಈ ಮೂವರನ್ನು ಬಿಟ್ಟರೆ ಉಳಿದ ಯಾವ ಮಹಿಳೆಯರೂ ಇಲ್ಲಿ ಅದೃಷ್ಟ ಪರೀಕ್ಷೆಯ ಅವಕಾಶವನ್ನೂ ಪಡೆದಿಲ್ಲ.

ಅಂದ ಹಾಗೆ, ಕ್ಷೇತ್ರದಲ್ಲಿ ಒಟ್ಟು 17,96,826 ಮತದಾರರಿದ್ದಾರೆ. ಬೆಳ್ತಂಗಡಿ, ಮೂಡುಬಿದಿರೆ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರಗಳೆಲ್ಲದರಲ್ಲೂ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿರುವ ಪುರುಷ ಮತದಾರರ ಸಂಖ್ಯೆ 8,77,438. ಅದೇ ಮಹಿಳಾ ಮತದಾರರು 9,19,321!

 

Advertisement

Udayavani is now on Telegram. Click here to join our channel and stay updated with the latest news.

Next