ಹುಬ್ಬಳ್ಳಿ: ಕುಂದಗೋಳ ಕ್ಷೇತ್ರವನ್ನು ದತ್ತು ಪಡೆದು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸುತ್ತೇವೆ. ಡಿ.ಕೆ.ಶಿವಕುಮಾರ ಕೊಟ್ಟ ಮಾತನ್ನು ಎಂದೂ ತಪ್ಪಿಲ್ಲ. ಕ್ಷೇತ್ರವನ್ನು ಆಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಗೋಳ ಕ್ಷೇತ್ರವನ್ನು ದತ್ತು ಪಡೆಯುವ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಒಪ್ಪಿದ್ದಾರೆ. ಈ ಹಿಂದೆ ಕನಕಪುರ ಕ್ಷೇತ್ರ ಹೇಗಿತ್ತೋ ಅದೇ ರೀತಿಯಲ್ಲಿ ಕುಂದಗೋಳ ಕ್ಷೇತ್ರವಿದೆ ಎಂದೆನಿಸುತ್ತಿದೆ. ಕನಕಪುರ ಮಾದರಿಯಲ್ಲಿ ಕುಂದಗೋಳ ಅಭಿವೃದ್ಧಿ ಪಡಿಸುತ್ತೇವೆ.
ನೀರಾವರಿ ಹಾಗೂ ಮನೆಗಳ ನಿರ್ಮಾಣಕ್ಕೆ ಒತ್ತು ನೀಡುತ್ತೇವೆ. ಒಮ್ಮೆ ಮಾತು ಕೊಟ್ಟರೆ ಈ ಡಿ.ಕೆ.ಶಿವಕುಮಾರ ತಪ್ಪಲ್ಲ. ಹಿಂದೆ ಬಳ್ಳಾರಿಯಲ್ಲಿ 280 ಎಕರೆ ಜಮೀನಿನಲ್ಲಿ ನಿವೇಶನ ಮಾಡಿ ಬಡವರಿಗೆ ಹಂಚಿಕೆ ಮಾಡಿದ್ದೇವೆ. ರಿಪಬ್ಲಿಕ್ ಆಫ್ ಬಳ್ಳಾರಿಯನ್ನು ಧ್ವಂಸಗೊಳಿಸಿ ಸಾಮಾನ್ಯರ ಆಡಳಿತ ರೂಪಿಸುವಂತೆ ಮಾಡಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ರೂಪಿಸಿರುವ ನ್ಯಾಯ ಯೋಜನೆಯನ್ನು ರಾಜ್ಯದಲ್ಲಿ ಕುಂದಗೋಳದಿಂದಲೇ ಆರಂಭಿಸಲು ಯೋಚಿಸಲಾಗಿದೆ. ಕುಂದಗೋಳ ಅಭಿವೃದ್ಧಿ ಹಾಗೂ ನ್ಯಾಯ ಯೋಜನೆ ಜಾರಿಗೆ ಕುಂದಗೋಳಲ್ಲಿ ಪ್ರತ್ಯೇಕ ಕಚೇರಿ ಆರಂಭಿಸಿ ನಮ್ಮ ಸಿಬ್ಬಂದಿ ನಿಯೋಜಿಸಲಾಗುವುದು. ವಿವಿಧ ಇಲಾಖೆಗಳ ಸಂಪರ್ಕದೊಂದಿಗೆ ಯೋಜನೆ ಹಾಗೂ ಅಭಿವೃದ್ಧಿ ನಿರ್ವಹಣೆ ಮಾಡಲಾಗುವುದು ಎಂದರು.
ಶೆಟ್ಟರ್, ಬಿಎಸ್‌ವೈ ಜತೆ ಬಹಿರಂಗ ಚರ್ಚೆಗೆ ಸಿದ್ಧ: ಅಭಿವೃದ್ಧಿ ಹಾಗೂ ಉಪ ಚುನಾವಣೆ ಫಲಿತಾಂಶ ಕುರಿತಾಗಿ ಬಿಜೆಪಿ ನಾಯಕ ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ ಬಹಿರಂಗ ಚರ್ಚೆಗೆ ಬರಲಿ. ಹುಬ್ಬಳ್ಳಿಯಲ್ಲೇ ವೇದಿಕೆ ಸಿದ್ಧಪಡಿಸಲಿ.
ಚರ್ಚೆಗೆ ನಾನು ಸಿದ್ಧ ಎಂದು ಡಿಕೆಶಿ ಸವಾಲು ಹಾಕಿದರು. ವೀರೇಂದ್ರ ಪಾಟೀಲರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ವೀರಶೈವರು ಕಾಂಗ್ರೆಸ್‌ಗೆ ಮತ ಹಾಕಬಾರದು ಎಂಬ ಯಡಿಯೂರಪ್ಪ ಹೇಳಿಕೆ ನೋಡಿದರೆ ಬಿಜೆಪಿಗೆ ವೀರಶೈವರು ಮಾತ್ರ ಮತ ಹಾಕುತ್ತಾರಾ? ನಮ್ಮ ಪಕ್ಷದಲ್ಲಿ ಎಲ್ಲ ಜಾತಿ-ಸಮಾಜಕ್ಕೂ ಗೌರವ ನೀಡಲಾಗುತ್ತದೆ.
ಅನಂತಕುಮಾರ ಅವರ ಪತ್ನಿ ವಿಚಾರದಲ್ಲಿ ಬಿಜೆಪಿ ಹೇಗೆ ನಡೆದುಕೊಂಡಿದೆ. ಪಕ್ಷ ಕಟ್ಟಿದ ಎಲ್.ಕೆ.ಆಡ್ವಾಣಿ ಸೇರಿದಂತೆ ಹಿರಿಯ ನಾಯಕರನ್ನು ಎಲ್ಲಿ ಇರಿಸಿದೆ ಎಂಬುದನ್ನು ಯಡಿಯೂರಪ್ಪ ಆತ್ಮಾವಲೋಕನ ಮಾಡಿಕೊಳ್ಳಲಿ. ನಾವು ಸಿ.ಎಸ್. ಶಿವಳ್ಳಿ ಅವರ ಕುಟುಂಬಕ್ಕೆ ಅನ್ಯಾಯ ಮಾಡದೆ ಅವರ ಪತ್ನಿಗೆ ಟಿಕೆಟ್ ನೀಡಿದ್ದೇವೆ ಎಂದರು.