Advertisement

ಕಳೆದ ಬಾರಿಯ ಕಡೆಗಣನೆ ನೀಗಿಸುತ್ತಾ ಈ ಬಜೆಟ್

07:08 AM Feb 08, 2019 | Team Udayavani |

ಚಾಮರಾಜನಗರ: ಕಳೆದ ವರ್ಷ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೆಚ್ಚಿನ ಕೊಡುಗೆಯನ್ನೇನೂ ನೀಡಿರಲಿಲ್ಲ. ಈ ಬಾರಿ ಯಾದರೂ ಜಿಲ್ಲೆಗೆ ಒಂದಷ್ಟು ಅನುದಾನ, ಹೊಸ ಯೋಜನೆಗಳನ್ನು ನೀಡುವರೇ ಎಂದು ಜನತೆ ನಿರೀಕ್ಷಿಸಿದ್ದಾರೆ.

Advertisement

ಕಾವೇರಿ 2ನೇ ಹಂತ: ಜಿಲ್ಲಾ ಕೇಂದ್ರ ಚಾಮರಾಜ ನಗರಕ್ಕೆ ತಿ.ನರಸೀಪುರದಿಂದ ಕಾವೇರಿ ನೀರು ಪೂರೈಸಲಾಗುತ್ತಿದ್ದು, ಈಗಿನ ಜನಸಂಖ್ಯೆಗೆ ಈ ನೀರು ಸಾಲುತ್ತಿಲ್ಲ. ಹೀಗಾಗಿ ಪಟ್ಟಣಕ್ಕೆ ಎರಡನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ನಿರೀಕ್ಷಿಸಲಾಗಿದೆ. ಮಾಲಂಗಿಯಿಂದ ಪೈಪುಗಳ ಮೂಲಕ ನೀರು ಪೂರೈ ಸುವ ಈ ಯೋಜನೆಗೆ 220 ಕೋಟಿ ರೂ. ಅಂದಾಜು ತಯಾರಿಸಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ನವನಗರ: ಜಿಲ್ಲಾ ಕೇಂದ್ರದಲ್ಲಿ ಈಗಿರುವ ಪ್ರದೇಶಕ್ಕಿಂತ ಜನವಸತಿ ಪ್ರದೇಶ ವಿಸ್ತರಣೆ ಯಾಗಿಲ್ಲ. ಆಶ್ರಯ, ಅಂಬೇಡ್ಕರ್‌, ಬಸವ ವಸತಿ ಯೋಜನೆ ಯಡಿ ಮನೆ ನೀಡುವಂತೆ 15 ಸಾವಿರದಷ್ಟು ಮಂದಿ ನಗರಸಭೆಗೆ ಹಿಂದಿನಿಂದಲೂ ಅರ್ಜಿ ಸಲ್ಲಿಸಿದ್ದಾರೆ. ಚುಡಾಕ್ಕೂ ಈ ಹಿಂದೆ ಅರ್ಜಿಗಳನ್ನು ನಿವೇಶನಕ್ಕಾಗಿ ಸಲ್ಲಿಸಲಾಗಿದೆ. ಹೀಗಾಗಿ ನಗರದ ಸಮೀಪದ ಮಾಲೆಗೆರೆ ಬಳಿ ಜಮೀನುಗಳನ್ನು ಖರೀದಿಸಿ 5 ಸಾವಿರ ನಿವೇಶನಗಳನ್ನು ವಿತರಿಸಲು ಬಜೆಟ್‌ನಲ್ಲಿ ಅನುದಾನಕ್ಕಾಗಿ ಉಸ್ತುವಾರಿ ಸಚಿವ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಬೇಡಿಕೆಯಿಟ್ಟಿದ್ದಾರೆ.

ಅಲ್ಲಿ ಒಂದು ನವನಗರ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ. ನಗರದ ಒಳಚರಂಡಿ ಕಾಮಗಾರಿ ಕಳೆದ 5 ವರ್ಷಗಳಿಂದ ಕುಂಟುತ್ತಾ ಸಾಗಿದೆ. ಈ ನಡುವೆ ಹೊಸ ಬಡಾವಣೆಗಳು ತಲೆ ಎತ್ತಿದ್ದು ಅಲ್ಲಿಗೂ ಒಳಚರಂಡಿ ಅವಶ್ಯಕತೆಯಿದೆ. ಈ ಮುಂದುವರೆದ ಕಾಮಗಾರಿಗೆ 50 ಕೋಟಿ ರೂ. ಅನುದಾನದ ಪ್ರಸ್ತಾವ ಸಲ್ಲಿಸಲಾಗಿದೆ.

ಹೊಸ ಬಸ್‌ ನಿಲ್ದಾಣ: ನಗರದಲ್ಲಿ ಈಗಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಚಿಕ್ಕದಾಗಿದ್ದು, ವಿಶಾಲವಾದ ಸುಸಜ್ಜಿತ ಬಸ್‌ನಿಲ್ದಾಣವನ್ನು ಸಂತೆಮರಹಳ್ಳಿ ರಸ್ತೆಯ ರೇಷ್ಮೆ ಇಲಾಖೆ ಕಟ್ಟಡದ ಆವರಣದಲ್ಲಿ ನಿರ್ಮಿಸಲು ಅನುದಾನ ನಿರೀಕ್ಷಿಸಲಾಗಿದೆ.

Advertisement

ಪ್ರವಾಸಿತಾಣಗಳ ಅಭಿವೃದ್ಧಿಗೆ ಅನುದಾನ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶಗಳಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಪಡಿಸಲು ನೂರಾರು ಕೋಟಿ ರೂ.ಗಳ ಅನುದಾನದ ಅಗತ್ಯವಿದೆ.

ಕೈಗಾರಿಕಾ ಪ್ರದೇಶ ಅಭಿವೃದ್ಧಿ: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ರಸಾದ್‌ ಅವರ ಆಸಕ್ತಿಯಿಂದಾಗಿ ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸ್ಥಳ ಮೀಸಲಿರಿಸಲಾಗಿದೆ. ಅಲ್ಲಿಗೆ ರಸ್ತೆ, ಬೀದಿದೀಪ ಇನ್ನಿತರ ಮೂಲಸೌಕರ್ಯ ಒದಗಿಸಲಾಗಿದೆ. ಅದರೆ ಇನ್ನೂ ಅಲ್ಲಿ ಕೈಗಾರಿಕೆಗಳು ಸ್ಥಾಪನೆಗೊಂಡಿಲ್ಲ. ಅದಕ್ಕಾಗಿ ನೂತನ ಬಜೆಟ್‌ನಲ್ಲಿ ಅನುದಾನ ನಿರೀಕ್ಷೆ ಮಾಡಲಾಗಿದೆ.

ಕೆರೆಗಳಿಗೆ ನೀರು ತುಂಬಿಸುವ ವಿಸ್ತರಿತ ಯೋಜನೆ: ಚಾಮರಾಜನಗರ ಗುಂಡ್ಲುಪೇಟೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದ್ದು, ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ಕೆರೆಗಳಿಗೂ ನೀರು ತುಂಬಿಸುವ ಯೋಜನೆಗೆ ಅನುದಾನ ನಿರೀಕ್ಷಿಸಲಾಗಿದೆ.

ತಾರತಮ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮಂಡಿಸಿದ್ದ ಬಜೆಟ್‌ಗಳಲ್ಲಿ ತಮ್ಮ ನೆರೆಯ ಜಿಲ್ಲೆಯತ್ತ ಕೃಪಾದೃಷ್ಟಿ ಬೀರಿ ಸಾಕಷ್ಟು ಅನುದಾನಗಳನ್ನು, ಹೊಸ ಯೋಜನೆಗಳನ್ನು ಮಂಜೂರು ಮಾಡಿದ್ದರು. ಆದರೆ, ಕಳೆದ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಜಿಲ್ಲೆಯನ್ನು ಕಡೆಗಣಿಸಲಾಗಿತ್ತು.

ಕಳೆದ ಬಜೆಟ್‌ನಲ್ಲಿ ಚಾಮರಾಜನಗರ, ಗದಗ, ಕೊಪ್ಪಳ ಹಾಗೂ ಹಾಸನ ನಗರಗಳ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ 450 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆಗಳನ್ನು ಸ್ಥಾಪಿಸಲು 200 ಕೋಟಿ ರೂ.ಗಳನ್ನು ನೀಡಲಾಗಿತ್ತು. ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಾಮಗಾರಿ ಆರಂಭವಾಗಿದ್ದು ಪ್ರಗತಿಯಲ್ಲಿದೆ. ಜಿಲ್ಲೆಯ ಭರಚುಕ್ಕಿ ಜಲಪಾತ ಹಾಗೂ ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತಗಳಲ್ಲಿ ಪ್ರವಾಸಿ ಸೌಲಭ್ಯ ಒದಗಿಸಲು 5 ಕೋಟಿ ರೂ. ನೀಡಲಾಗಿತ್ತು. ಆದರೆ, ನಿರೀಕ್ಷಿತ ಪ್ರಗತಿ ಆಗಿಲ್ಲ.

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next