Advertisement
ಬಜೆಟ್‌ನಲ್ಲಿ ಘೋಷಿಸಲಾದ ಸುಧಾರಣಾ ಕ್ರಮಗಳು ದೇಶದಲ್ಲಿ ಉದ್ಯೋಗಾವ ಕಾಶಗಳನ್ನು ಸೃಷ್ಟಿಸಲಿದೆ ಮತ್ತು ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ನೆರವಾಗಲಿದೆ. ನಾಗರಿಕರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲಿದೆ ಎಂದೂ ಮೋದಿ ಹೇಳಿದ್ದಾರೆ.
ದೀರ್ಘಾವಧಿಯಲ್ಲಿ ಎಲ್ಲ ರೀತಿಯ ತೆರಿಗೆ ವಿನಾಯ್ತಿಗಳನ್ನೂ ತೆಗೆದುಹಾಕುವ ಉದ್ದೇಶ ಸರಕಾರಕ್ಕಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಜೆಟ್ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ನಾವು ತೆರಿಗೆ ದರ ಸರಳೀಕರಣ ಮತ್ತು ಇಳಿಕೆ ಎರಡರತ್ತಲೂ ಗಮನ ಹರಿಸಿದ್ದೇವೆ. ಕ್ರಮೇಣ ನಾವು ತೆರಿಗೆ ದರ ಕಡಿತ ಮಾಡುತ್ತೇವೆ. ಆಗ ವಿನಾಯ್ತಿಗಳಿದ್ದಷ್ಟೂ ಸಮಸ್ಯೆಗಳು ಹೆಚ್ಚು. ಹೀಗಾಗಿ, ದೀರ್ಘಾವಧಿಯಲ್ಲಿ ಎಲ್ಲ ತೆರಿಗೆ ವಿನಾಯ್ತಿಗಳನ್ನೂ ತೆಗೆದುಹಾಕುವ ಉದ್ದೇಶವಿದೆ’ ಎಂದು ಹೇಳಿದ್ದಾರೆ. ಅಭಿಲಾಷೆಯ ಭಾರತ, ಸರ್ವರಿಗೂ ಆರ್ಥಿಕ ಅಭಿವೃದ್ಧಿ ಮತ್ತು ಕಾಳಜಿಯ ಸಮಾಜ ಎಂಬ ಮೂರು ಥೀಮ್‌ಗಳನ್ನು ಇಟ್ಟುಕೊಂಡು ಬಜೆಟ್ ಸಿದ್ಧಪಡಿಸಲಾಗಿದೆ ಎಂದೂ ನಿರ್ಮಲಾ ತಿಳಿಸಿದ್ದಾರೆ. ಪ್ರಸ್ತುತ ಸುಧಾರಣಾ ಕ್ರಮಗಳ ಧ್ಯೇಯವೇನೆಂದರೆ, ತೆರಿಗೆದಾರರ ಕೈಯಲ್ಲಿ ಹಣ ಓಡಾಡುತ್ತಿರಬೇಕು ಮತ್ತು ಅದನ್ನು ತನಗಿಷ್ಟಬಂದಂತೆ ಬಳಸುವಂಥ ಸ್ವಾತಂತ್ರ್ಯ ಆತನಿಗಿರಬೇಕು. ಇದುವೇ ನಮ್ಮ ಗುರಿ’ ಎಂದೂ ನಿರ್ಮಲಾ ತಿಳಿಸಿದ್ದಾರೆ.