ಚೆನ್ನೈ: ಕಾಲಿವುಡ್ ಸ್ಟಾರ್ ವಿಜಯ್ ಸೇತುಪತಿ (Vijay Sethupathi) ಅವರ 50ನೇ ಸಿನಿಮಾ ʼಮಹಾರಾಜʼ (Maharaja) ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಎಲ್ಲೆಡೆಯಿಂದ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದು, 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಇತ್ತೀಚೆಗೆ ಓಟಿಟಿಗೆ ಬಂದ ಬಳಿಕವೂ ʼಮಹಾರಾಜʼ ತನ್ನ ಸಕ್ಸಸ್ ಓಟವನ್ನು ನಿಲ್ಲಿಸಿಲ್ಲ. ಓಟಿಟಿ ವೀಕ್ಷಕರನ್ನೂ ಚಿತ್ರ ರಂಜಿಸಿದೆ. ಕಾಲಿವುಡ್ ನಲ್ಲಿ ʼಮಹಾರಾಜʼ ಈಗ ಬೇರೆ ಭಾಷೆಗೆ ರಿಮೇಕ್ ಆಗುವತ್ತ ಸಾಗುತ್ತಿದೆ.
ಖ್ಯಾತ ನಟ ಆಮೀರ್ ಖಾನ್ ಅವರ ನಿರ್ಮಾಣ ಸಂಸ್ಥೆ ʼಮಹಾರಾಜʼ ಹಿಂದಿ ರಿಮೇಕ್ ಹಕ್ಕನ್ನು ಖರೀದಿಸಲು ಮುಂದೆ ಬಂದಿದ್ದು, ಇದರಲ್ಲಿ ಆಮೀರ್ ಅವರೇ ಪ್ರಮುಖ ಪಾತ್ರವನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ.
ಸದ್ಯ ರಿಮೇಕ್ ಬಗ್ಗೆ ಆರಂಭಿಕ ಮಾತುಕತೆ ನಡೆಯುತ್ತಿದೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಆಮೀರ್ ಕಥೆಗೆ ತಮ್ಮ ವಿಶಿಷ್ಟ ಶೈಲಿಯನ್ನು ಸೇರಿಸಲಿದ್ದಾರೆ ಎನ್ನಲಾಗಿದೆ.
ಸದ್ಯ ಆಮೀರ್ ಖಾನ್ “ಸಿತಾರೆ ಜಮೀನ್ ಪರ್” ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಅವರು ಜೆನಿಲಿಯಾ ದೇಶಮುಖ್ ಮತ್ತು ದರ್ಶೀಲ್ ಸಫಾರಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಆಮೀರ್ ಖಾನ್ ಈ ಹಿಂದೆ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.