Advertisement

ಈ ಮಗುವಿನ ಜನ್ಮಕ್ಕೆ 12 ಸಿಂಹಗಳ ಕಾವಲು!

03:45 AM Jul 02, 2017 | Team Udayavani |

ಅಹಮದಾಬಾದ್‌: ತಡರಾತ್ರಿ 2.30. ಸುತ್ತಲೂ ಕಗ್ಗತ್ತಲು. ರಸ್ತೆ ಮಧ್ಯೆ ಆ್ಯಂಬುಲೆನ್ಸ್‌ ನಿಂತಿದೆ. ಆ ನೀರವ ಮೌನದ ನಡುವೆ ಆ್ಯಂಬುಲೆನ್ಸ್‌ ಒಳಗಿರುವ ಮಹಿಳೆ ಒಂದೇ ಸಮನೆ ಹೆರಿಗೆ ನೋವಿನಿಂದ ಕಿರುಚುತ್ತಿದ್ದಾಳೆ. ಹೊರಗೆ ಬರೋಬ್ಬರಿ 12 ಸಿಂಹಗಳು ಗುರ್ರ ಎನ್ನುತ್ತಾ ವಾಹನವನ್ನು  ಸುತ್ತುತ್ತಿವೆ!

Advertisement

ಇಂಥ ಸನ್ನಿವೇಶವನ್ನು ನೆನೆಸಿಕೊಂಡರೆ ಎಂಥವರಿಗಾದರೂ ಎದೆ ಝಲ್‌ ಎನ್ನದಿರದು. ಹಾರರ್‌ ಸಿನೆಮಾದ ದೃಶ್ಯದಂತಿರುವ ಈ ಘಟನೆ ನಡೆದಿರುವುದು ಗುಜರಾತ್‌ನಲ್ಲಿ.

ಹೌದು. ರಾತೋರಾತ್ರಿ 12 ಸಿಂಹಗಳ ಕಾವಲಿನಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಒಂದೆಡೆ ಸಿಂಹಗಳು ಗರ್ಜಿಸುತ್ತಿದ್ದರೂ ಹೆದರದೆ  ಹೆರಿಗೆ ಮಾಡಿಸಿದ 108 ಆ್ಯಂಬುಲೆನ್ಸ್‌ನ ಸಿಬಂದಿಯನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ.

ಅಂದ ಹಾಗೆ ಆಗಿದ್ದಿಷ್ಟು. 32 ವರ್ಷ ಪ್ರಾಯದ ಮಂಗುಬೆನ್‌ ಮಕ್ವಾನಾ ಅವ ರಿಗೆ ರಾತೊರಾತ್ರಿ ಹೆರಿಗೆ ನೋವು ಕಾಣಿಸಿ ಕೊಂಡಿತ್ತು. ಕೂಡಲೇ 108ಕ್ಕೆ ಕರೆ ಮಾಡ ಲಾಯಿತು. ಆ್ಯಂಬುಲೆನ್ಸ್‌ ಸಿಬಂದಿ ಲುನಾಸ್‌ಪುರ ಗ್ರಾಮಕ್ಕೆ ಬಂದು ಗರ್ಭಿಣಿಯನ್ನು ಜಫ‌ರಾಬಾದ್‌ ಪಟ್ಟಣದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆಗ ರಾತ್ರಿ ಸುಮಾರು 2.30 ಆಗಿರಬಹುದು. ಮಹಿಳೆಯ ಪರಿಸ್ಥಿತಿ ಹದಗೆಡತೊಡಗಿತು. ಮಗುವಿನ ತಲೆ ಅದಾಗಲೇ ಹೊರಬಂದಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆ್ಯಂಬುಲೆನ್ಸ್‌ನ ಸಿಬಂದಿ (ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್‌ ಟೆಕ್ನೀಷಿಯನ್‌) ಅಶೋಕ್‌ ಮಕ್ವಾನಾ ಅವರು ಚಾಲಕನಿಗೆ ಕೂಡಲೇ ರಸ್ತೆ ಬದಿ ಆ್ಯಂಬುಲೆನ್ಸ್‌ ನಿಲ್ಲಿಸುವಂತೆ ಸೂಚಿಸಿದರು.

ಹೊರಗೆ ಕಂಡಿದ್ದು 12 ಸಿಂಹಗಳು: 
ಅಮ್ರೇಲಿ ರಸ್ತೆಯಲ್ಲಿ ಆ್ಯಂಬುಲೆನ್ಸ್‌ ನಿಂತಿತು. ಅದು ಗಿರ್‌ ಅರಣ್ಯದ ವ್ಯಾಪ್ತಿಯಲ್ಲಿನ ಪ್ರದೇಶ. ಮಹಿಳೆ ಹೆರಿಗೆ ನೋವಿನಿಂದ ಕಿರುಚುತ್ತಿದ್ದರು. ಬೇರೆ ವಿಧಿಯಿಲ್ಲದೇ ಒಳಗಿದ್ದ ಸಿಬಂದಿಯೇ ಸೇರಿ ಆಕೆಗೆ ಹೆರಿಗೆ ಮಾಡಿಸಲು ಮುಂದಾದರು. ಅಶೋಕ್‌ ಅವರು ಕೂಡಲೇ ವೈದ್ಯರೊಬ್ಬರಿಗೆ ಕರೆ ಮಾಡಿ, ಫೋನ್‌ ಮೂಲಕವೇ ಎಲ್ಲ ಸೂಚನೆ ಗಳನ್ನು ಪಡೆಯತೊಡಗಿದರು. ಮೊಬೈಲಿನಲ್ಲಿ ಮಾತನಾಡುತ್ತಾ ಹೊರಗೆ ನೋಡಿದರೆ, ಅವರಿಗೆ ಆಶ್ಚರ್ಯ ಕಾದಿತ್ತು. ಮನುಷ್ಯರ ವಾಸನೆ ಗ್ರಹಿಸಿದ 12 ಸಿಂಹಗಳು ಆ್ಯಂಬುಲೆನ್ಸ್‌ ಅನ್ನು ಸುತ್ತುವರಿದಿದ್ದವು. 

Advertisement

ಅವುಗಳ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದುಕೊಂಡಿದ್ದ ಅಶೋಕ್‌, ಸಿಂಹಗಳನ್ನು ಹೆದರಿಸಿ ಓಡಿಸಲು ಯತ್ನಿಸಿದರಾದರೂ ಅದು ಫ‌ಲಿಸಲಿಲ್ಲ. “ನಾವಿಲ್ಲಿಂದ ಜಾಗ ಖಾಲಿ ಮಾಡಲ್ಲ, ಏನೀವಾಗ’ ಎಂದು ಸವಾಲು ಹಾಕುವಂತೆ ಮೂರ್ನಾಲ್ಕು ಸಿಂಹಗಳಂತೂ ಆ್ಯಂಬುಲೆನ್ಸ್‌ ಮುಂದೆ ರಸ್ತೆಗೆ ಅಡ್ಡವಾಗಿ ಕಾಲು ಚಾಚಿ ಮಲಗಿಯೇ ಬಿಟ್ಟವು.

ಹೆದರಲಿಲ್ಲ ಸಿಬಂದಿ: ಮನಸ್ಸಿನೊಳಗೆ ಭಯವಾದರೂ ಅದನ್ನು ತೋರಿಸಿಕೊಳ್ಳದೇ ಎಚ್ಚರಿಕೆಯ ಹೆಜ್ಜೆಯಿಟ್ಟ ಸಿಬಂದಿ, ದೇವರ ಮೇಲೆ ಭಾರ ಹಾಕಿ ತಮ್ಮ ಕರ್ತವ್ಯವನ್ನು ಪೂರೈಸಿದರು. ರಸ್ತೆ ಮಧ್ಯೆಯೇ, ಅದರಲ್ಲೂ ಸಿಂಹಗಳ ನಡುವೆಯೇ ಮಂಗುಬೆನ್‌ ಮಕ್ವಾನಾ ಗಂಡುಮಗುವಿಗೆ ಜನ್ಮವಿತ್ತಳು. ಹೊಸ ಸದಸ್ಯ ಭೂಮಿ ಮೇಲೆ ಕಾಲಿಟ್ಟಂತೆಯೇ ಆ್ಯಂಬುಲೆನ್ಸ್‌ನ ಚಾಲಕ ನಿಧಾನವಾಗಿ ವಾಹನವನ್ನು ಮುಂದಕ್ಕೆ ಒಯ್ಯಲು ಯತ್ನಿಸಿದ, ಅಷ್ಟರಲ್ಲಿ ಸಿಂಹಗಳೂ ತಾವಾಗಿಯೇ ಎದ್ದು ಅರಣ್ಯದತ್ತ ಹೆಜ್ಜೆಯಿಟ್ಟವು. ಒಟ್ಟಿನಲ್ಲಿ, ಭಯ, ಅಸಹಾಯಕತೆ, ಆತಂಕದ ನಡುವೆ 108 ಸಿಬಂದಿ ತಮ್ಮ ಕರ್ತವ್ಯನಿಷ್ಠೆಯನ್ನು ಮೆರೆದರು. ಸದ್ಯ ತಾಯಿ ಮಗು ಆರೋಗ್ಯವಾಗಿದ್ದು, ಜಫ್ರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next