ಬೆಂಗಳೂರು: ಮಾನವ ಹಕ್ಕುಗಳ ಹೋರಾಟಗಾರ ತಮಿಳುನಾಡಿನ ತಿರುಮುರುಗನ್ ಗಾಂಧಿಯನ್ನು ಗುರುವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಪೊಲೀಸರು, ಬಳಿಕ ಚೆನ್ನೈ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
2009ರಲ್ಲಿ ಎಲ್‌ಟಿಟಿಇ ಹಾಗೂ ಶ್ರೀಲಂಕಾ ನಡುವಿನ ಸಂಘರ್ಷದಲ್ಲಿ ತಿರುಮುರುಗನ್ ತಮಿಳು ಈಳಂ ಬಂಡುಕೋರರಿಗೆ ಪ್ರೊತ್ಸಾಹಿಸಿದ್ದ ಎಂಬ ಆರೋಪವಿದೆ. ತಮಿಳು ಈಳಂ ಬಂಡೋಕೋರರ ಹತ್ಯೆ ಖಂಡಿಸಿ ತಿರುಮುರುಗನ್ ಮಾಡಿದ ಹೋರಾಟಕ್ಕೆ ಮೇ 17 ಎಂದೇ ಹೆಸರಿದೆ.
ಈ ಹೋರಾಟದ ಮುಂಚೂಣಿ ನಾಯಕತ್ವ ವಹಿಸಿಕೊಂಡಿದ್ದ ತಿರುಮುರುಗನ್ ಗಾಂಧಿ ವಿರುದ್ಧ ರಾಜ್ಯದ್ರೋಹ ಆರೋಪದಡಿ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದರು. ಜತೆಗೆ 2017ರಲ್ಲಿ ಗೂಂಡಾ ಕಾಯಿದೆ ಅಡಿ ಪ್ರಕರಣ ದಾಖಲಿಸಿ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಈ ಬಗ್ಗೆ ಬೆಂಗಳೂರಿನ ಪೊಲೀಸರಿಗೂ ಮಾಹಿತಿ ನೀಡಿದ್ದರು.
ಜರ್ಮನಿಯಿಂದ ತಿರುಮುರುಗನ್ ವಿಮಾನ ನಿಲ್ದಾಣಕ್ಕೆ ಬರುವ ಮಾಹಿತಿ ಲಭಿಸಿತ್ತು. ಹೀಗಾಗಿ, ಗುರುವಾರ ಬೆಳಗ್ಗೆ 5-30ರ ಸುಮಾರಿಗೆ ವಿಮಾನನಿಲ್ದಾಣದಲ್ಲಿ ಬಂಧಿಸಿ ಚೆನ್ನೈ ಪೊಲೀಸರ ವಶಕ್ಕೆ ನೀಡಲಾಯಿತು ಎಂದು ಈಶಾನ್ಯ ವಿಭಾಗದ ಡಿಸಿಪಿ ತಿಳಿಸಿದರು.
ಕಳೆದ ಮೇ ತಿಂಗಳಿನಲ್ಲಿ ತೂತುಕುಡಿಯ ತಾಮ್ರ ಘಟಕ ಮುಚ್ಚುವಂತೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟ 13 ಮಂದಿಯ ಸಾವಿನ ವಿಚಾರವನ್ನು ಅಂತಾರಾಷ್ಟ್ರೀಯ ಮಾನಹ ಹಕ್ಕುಗಳ ಪರಿಷತ್ತಿನ ಗಮನಕ್ಕೆ ತಂದಿದ್ದರು. ಅಲ್ಲದೆ, ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಪ್ರಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.