ತೀರ್ಥಹಳ್ಳಿ: ಮುಡಾ ಪ್ರಕರಣದಲ್ಲಿ ಆರೋಪಿಯಾಗಿರುವಂತಹದ್ದು ಮತ್ತು ತನಿಖೆಗೆ ರಾಜ್ಯಪಾಲರು ಆದೇಶ ಮಾಡಿರುವಂತಹದ್ದು ಸರಿ ಎಂದು ಹೈಕೋರ್ಟ್ ಹೇಳಿದೆ. ಬಿಜೆಪಿಯವರು ಹೇಳಿ ಮಾಡಿದ್ದಲ್ಲ, ಹೈಕೋರ್ಟ್ ಜೊತೆಗೆ ಜನಪ್ರತಿನಿಧಿಗಳ ಕೋರ್ಟ್ ಕೂಡ ಹೇಳಿದೆ. ಅದರ ಜೊತೆಗೆ ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬದವರ ಮೇಲೆ ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಸಹ ಕೋರ್ಟ್ ಹೇಳಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸೆ. 27ರ ಶುಕ್ರವಾರ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾನು ಯಾವುದೇ ತನಿಖೆಗೆ ಸಿದ್ದನಾಗಿದ್ದೇನೆ ಎಂದು ಹೇಳುವ ಮುಖ್ಯಮಂತ್ರಿಗಳೇ ತನಿಖೆ ಆಗಬಾರದೆಂದು ಕೋರ್ಟ್ ಗೆ ಹೋಗಿದ್ದು, ತನಿಖೆಗೆ ಸ್ಪಂದನೆ ನೀಡುವುದಾದರೆ ಇವರು ಕ್ಯಾಬಿನೆಟ್ ಸಭೆಯಲ್ಲಿ ಸಿಬಿಐ ಬರಬಾರದು ಎಂದು ಬೇಲಿ ಕಟ್ಟಿದ್ಯಾಕೆ? ಸಿಬಿಐ ಬಂದರೆ ಭಯ ಯಾಕೆ? ರಾಜ್ಯಪಾಲರು ನೇರವಾಗಿ ಮುಖ್ಯಮಂತ್ರಿಗಳ ಸಲಹೆಗಾರರು ಬಳಿ ಕೇಳುವಂತಿಲ್ಲ, ಮಂತ್ರಿಗಳ ಜೊತೆಗೆ ಚರ್ಚೆ ಆಗಬೇಕು ಇದೆಲ್ಲಾ ಯಾಕೆ ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯನವರು 50-60 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲ ಎನ್ನುವವರು ಬಟ್ಟೆ ತುಂಬಾ ಬಣ್ಣ ಮಾಡಿಕೊಂಡಿದ್ದಾರೆ. ಲೋಕಾಯುಕ್ತವನ್ನು ಇವರೇ ಕತ್ತು ಹಿಸುಕಿ ಎಸಿಬಿ ಮಾಡಿದ್ದರು. ಕೋರ್ಟ್ ಆದೇಶದ ಮೇಲೆ ಮತ್ತೆ ಲೋಕಾಯುಕ್ತ ಮಾಡಿದರು. ಮೊದಲಿಂದಲೂ ಇವರು ಮಾಡಿದ ಅಪರಾಧ ಯಾರು ತನಿಖೆ ಮಾಡಬಾರದು ಎಂದೆ ಬಂದವರು. ಲೋಕಾಯುಕ್ತದ ಪೊಲೀಸರು ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುತ್ತದೆ. ಹಾಗಾಗಿ ಮುಖ್ಯಮಂತ್ರಿಯನ್ನು ಹೇಗೆ ತನಿಖೆ ಮಾಡುತ್ತಾರೆ. ಸರಿಯಾಗಿ ತನಿಖೆ ನಡೆಯಬೇಕು ಎಂದರೆ ಸಿಬಿಐ ತನಿಖೆ ನಡೆಸಲಿ ಎಂದರು.
ಸಿಬಿಐಗೆ ಕೊಡುವುದಾದರೆ ನಾವು ಒಪ್ಪದೇ ಕೊಡುವ ಹಾಗಿಲ್ಲ ಎನ್ನುತ್ತಾರೆ. ಇವರ ಮೇಲಿನ ತನಿಖೆಗೆ ಇವರೇ ಒಪ್ಪಬೇಕಂತೆ, ರಾಜ್ಯದಲ್ಲಿ ಅವರ ಕಾರ್ಯಕರ್ತರು ನಾವು ಮುಖ್ಯಮಂತ್ರಿಗಳ ಹಿಂದೆ ಇದ್ದೇವೆ ಎನ್ನುತ್ತಾರೆ,136 ಜನ ಶಾಸಕರು ಅವರ ಜೊತೆ ಇದ್ದಾರಂತೆ, ಇವರೆಲ್ಲಾ ಸೇರಿದ್ರೆ ಸಾಕು ಕೋರ್ಟ್ ಆದೇಶ ಬೇಡ, ಏನೇ ಅಪರಾಧ ಮಾಡಿದರು ಇವರ ಬೆಂಬಲ ಇದ್ದರೆ ಸಾಕು, ಹೊಸ ವ್ಯಾಖ್ಯಾನವನ್ನು ರಾಜ್ಯದ ಜನರಿಗೆ ಹೇಳಲು ಹೊರಟಿದ್ದಾರೆ. ಮುಖ್ಯಮಂತ್ರಿ ಆದವರು 420 ಸೆಕ್ಷನ್ ಹಾಕಿಕೊಂಡು ಆ ಕುರ್ಚಿಯಲ್ಲಿ ಕೂರಬಾರದು, ಅವರ ಬಗ್ಗೆ ಗೌರವವಿದೆ, ಕೇಸ್ ಮುಗಿಸಿಕೊಂಡು, ಕಳಂಕ ರಹಿತರಾಗಿ ಬಂದು ಮುಖ್ಯಮಂತ್ರಿ ಆಗಲಿ ಆದರೆ ಈಗ ರಾಜೀನಾಮೆ ನೀಡಿ ತನಿಖೆಗೆ ಅವಕಾಶ ನೀಡಲಿ ಎಂದರು.