Advertisement

ನೆರೆಹಾನಿಗೆ 280 ಕೋಟಿ ಬಿಡುಗಡೆ: ಈಶ್ವರಪ್ಪ

11:48 AM Aug 12, 2019 | Naveen |

ತೀರ್ಥಹಳ್ಳಿ: ರಾಜ್ಯದಲ್ಲಿ ಕಳೆದ 5 ದಿನಗಳಿಂದ ಎಂದೆಂದೂ ಕಾಣದ ಜಲಪ್ರಳಯದಿಂದ ಅಪಾರ ಹಾನಿಯಾಗಿದೆ. ರೈತರು ಹಾಗೂ ನಾಗರಿಕರ ಜೀವನ ಅಸ್ತವ್ಯಸ್ಥಗೊಂಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತಾತ್ಕಾಲಿಕ ಪರಿಹಾರಕ್ಕೆ ಕೈ ಜೋಡಿಸಿದೆ. ಕೇಂದ್ರ ಸರ್ಕಾರ 180 ಕೋಟಿ ಹಾಗೂ ರಾಜ್ಯ ಸರ್ಕಾರ 100 ಕೋಟಿ ಹಣವನ್ನು ಅತಿವೃಷ್ಟಿ ಪರಿಹಾರ ಧನ ಬಿಡುಗಡೆ ಮಾಡಿದೆ. ಶೀಘ್ರವೇ ನಮ್ಮ ತಂಡ ನಡೆಸಿದ ಎರಡೂ ಜಿಲ್ಲೆಗಳ ನೆರೆ ಹಾನಿ ಹಾಗೂ ಪರಿಹಾರದ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ಶಾಸಕ, ರಾಜ್ಯ ಸರ್ಕಾರದ ನೆರೆಪೀಡಿತ ಪ್ರದೇಶಗಳ ವಿಶೇಷ ತಂಡದ ಮುಖ್ಯಸ್ಥ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ತಾಲೂಕಿನ ನೆರೆ ಪೀಡಿತ ಪ್ರದೇಶಗಳಾದ ಕನ್ನಂಗಿ, ಅತ್ತಿಗದ್ದೆ, ನವಿಲೇರಿ, ಬೆಜ್ಜವಳ್ಳಿ, ತೂದೂರು ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಪ್ರತಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಈಗಾಗಲೇ ಸರ್ಕಾರದ ವತಿಯಿಂದ ಅತಿವೃಷ್ಟಿಯಿಂದ ಮೃತಪಟ್ಟವರಿಗೆ ರೂ.5. ಲಕ್ಷ ಪರಿಹಾರ ನೀಡಲಾಗಿದೆ. ಪ್ರತೀ ತಾಲೂಕುಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 720 ಮನೆಗಳು ಹಾನಿಯಾಗಿದ್ದು, 5 ಮಂದಿ ಮೃತ ಪಟ್ಟಿದ್ದಾರೆ. 50ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಮಲೆನಾಡು ಭಾಗದಲ್ಲಿ ಅಡಕೆ ಹಾಗೂ ಭತ್ತದ ಗದ್ದೆಗಳು ನೆರೆಗೆ ಸಿಲುಕಿ ಅಪಾರ ಹಾನಿಯಾಗಿದೆ. ತಾತ್ಕಾಲಿಕ ಪರಿಹಾರಕ್ಕೆ ಈಗಾಗಲೇ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರ ಸರ್ಕಾರಕ್ಕೆ ಈ ಕುರಿತು ಒತ್ತಾಯಿಸಿದ್ದಾರೆ ಎಂದರು.

ಮಲೆನಾಡು ಭಾಗದಲ್ಲಿ ನೆರೆ ಹಾವಳಿಯಿಂದ ಅಪಾರ ಪ್ರಮಾಣದ ಅಡಕೆ ಬೆಳೆ, ಗದ್ದೆಗಳು ನಾಶಗೊಂಡಿದ್ದು, ಹಲವು ಕೃಷಿ ಜಾಗಗಳು ಸತ್ವ ಕಳೆದುಕೊಂಡಿದ್ದು, ಈ ಭಾಗದ ರೈತರಿಗೆ ಖಾಯಂ ಪರಿಹಾರ ನೀಡಲು ಸದ್ಯದಲ್ಲೇ ರಾಜ್ಯ ಸರ್ಕಾರದಿಂದ ಸಭೆ ನಡೆಸಿ ಹೆಚ್ಚಿನ ಹಣ ಬಿಡುಗಡೆಗೆ ತೀರ್ಮಾನಿಸಲಾಗುವುದು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ನೆರೆಪೀಡಿತ ಉತ್ತರ ಕರ್ನಾಟಕದ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯದಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ಮಾಡಲಿದ್ದಾರೆ ಎಂದರು.

ತೀರ್ಥಹಳ್ಳಿ ಕ್ಷೇತ್ರಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಪರಿಹಾರ ನೀಡುವಂತೆ ಈ ಭಾಗದ ರೈತರ ಹಾಗೂ ಸಾರ್ವಜನಿಕರ ಒತ್ತಾಯಕ್ಕೆ ಸರ್ಕಾರ ಸ್ಪಂದಿಸಲಿದೆ. ಕಳೆದ 5 ದಿನಗಳಿಂದ ನೆರೆಪೀಡಿತ ಪ್ರದೇಶಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ನೌಕರರು, ಚುನಾಯಿತ ಪ್ರತಿನಿಧಿಗಳು ಶ್ರಮ ವಹಿಸಿ ಕಾರ್ಯ ನಿರ್ವಹಿಸಿ ಹಲವೆಡೆ ಜೀವ ರಕ್ಷಣೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

Advertisement

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ತಾಲೂಕಿನಲ್ಲಿ ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ತಕ್ಷಣ ತಾತ್ಕಾಲಿಕವಾಗಿ ಪರಿಹಾರ ನೀಡಲು ಜಿಲ್ಲಾಡಳಿತ ತಾಲೂಕು ಆಡಳಿತಕ್ಕೆ 1 ಕೋಟಿ ಹಣ ಬಿಡುಗಡೆ ಮಾಡಿದೆ. ಈಗಾಗಲೇ ತಾಲೂಕಿನಾದ್ಯಂತ ನೆರೆ ಹಾವಳಿಗೆ 75ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. 24 ಮನೆಗಳು ಕುಸಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕಳೆದ 2 ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ತಂಡ ತಾಲೂಕಿನ ಆರು ಗ್ರಾಪಂ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದೆ ಎಂದರು. ತಾಲೂಕಿನ ಹಲವೆಡೆ ಬಿಎಸ್ಸೆನ್ನೆಲ್ ಸೇವೆ ಸಂಪೂರ್ಣ ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ತಾಲೂಕು ಆಡಳಿತಕ್ಕೆ ಬಿಎಸ್ಸೆನ್ನೆಲ್ಗೆ ಡೀಸೆಲ್ ವಿತರಣೆಗಾಗಿ ಹಣ ನೀಡಲಾಗಿದೆ ಎಂದರು.

ತಾಲೂಕಿನಲ್ಲಿ ನೆರೆ ಹಾನಿಯಿಂದ ಆತಂಕಗೊಂಡಿರುವ ರೈತರು ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವ ಕೆಲಸವಾಗಬಾರದು. ಈ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯ ಗ್ರಾಪಂ ಕಚೇರಿಯಲ್ಲಿ ಅರ್ಜಿ ನೀಡಬಹುದು. ಅಡಕೆ ಕೊಳೆರೋಗಕ್ಕೆ ತುತ್ತಾಗಿ ತಾಲೂಕಿನ ಹಲವು ಅಡಕೆ ತೋಟಗಳಲ್ಲಿ ಅಪಾರ ಹಾನಿಯಾಗಿದೆ. ಶೀಘ್ರವೇ ಇಲಾಖೆಯ ಅಧಿಕಾರಿಗಳ ತಂಡದ ಸರ್ವೆ ನಡೆಸಲು ಸೂಚಿಸಿದ್ದೇವೆ. ಹಲವೆಡೆ ಕಾಲುಸಂಕಗಳು ತೇಲಿ ಹೋಗಿವೆ. ತಾಲೂಕಿನ ಕನ್ನಂಗಿ ಹಾಗೂ ತೀರ್ಥಹಳ್ಳಿಯಲ್ಲಿ ನಿರಾಶ್ರಿತರ ಕಾಳಜಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಮಾಜಿ ಸಚಿವರಾದ ಸಿ.ಟಿ. ರವಿ, ಸೋಮಣ್ಣ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್‌ ಸದಸ್ಯ ರುದ್ರೇಗೌಡ, ಜಿಲ್ಲಾ ಬಿಜೆಪಿ ಮುಖಂಡರಾದ ದತ್ತಾತ್ರಿ, ಅರುಣ್‌ ಡಿ.ಎಸ್‌. ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next