Advertisement

ಅಂಚೆ ಕಚೇರಿಗೀಗ ಇಂಟರ್‌ನೆಟ್ ಸಮಸ್ಯೆ

12:31 PM Jul 10, 2019 | Team Udayavani |

ರಾಂಚಂದ್ರ ಕೊಪ್ಪಲು
ತೀರ್ಥಹಳ್ಳಿ:
ಕೇಂದ್ರ ಸರ್ಕಾರ ಅಂಚೆ ಇಲಾಖೆಯಲ್ಲಿ ವಿಭಿನ್ನ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಡಿಜಿಟಲ್ ಇಂಡಿಯಾ ಮೂಲಕ ಹೊಸ ಪ್ರಯತ್ನಗಳನ್ನು ಮಾಡಿದೆ. ಆದರೆ ಜಿಲ್ಲೆಯ ಹಾಗೂ ತೀರ್ಥಹಳ್ಳಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಅಂಚೆ ಕಚೇರಿಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ರೂಪಿಸಿರುವ ಆರ್‌ಐಸಿಟಿ ಯಂತ್ರವು ಇಂಟರ್‌ನೆಟ್ ಸಮಸ್ಯೆಗೆ ಸಿಲುಕಿ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ತೊಂದರೆ ಉಂಟು ಮಾಡಿದೆ.

Advertisement

ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿನ ಅಂಚೆ ಕಚೇರಿಗಳಲ್ಲಿ ಇಲಾಖೆ ನೀಡಿರುವ ಆರ್‌ಐಸಿಟಿ ಯಂತ್ರ ಇಂಟರ್‌ನೆಟ್ ಸಮಸ್ಯೆಯಿಂದ ಸದಾ ಕಾಲ ಕಾರ್ಯ ನಿರ್ವಹಿಸದೆ ಅಂಚೆ ಇಲಾಖೆಯ ನೌಕರರು ಗ್ರಾಹಕರ ಶಾಪಕ್ಕೆ ಗುರಿಯಾಗಿದ್ದಾರೆ. ತಾಲೂಕಿನ ಶೇ.85 ರಷ್ಟು ಅಂಚೆ ಕಚೇರಿಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ.

ಹಿಂದೆ ಅಂಚೆ ಕಚೇರಿಗಳಲ್ಲಿನ ಪೋಸ್ಟ್‌ ಮಾಸ್ಟರ್‌ಗಳು ಕೆಲಸದ ಒತ್ತಡ ಹೆಚ್ಚಾದ ‌ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಕಳೆದ 6 ತಿಂಗಳಿಂದ ಪ್ರತಿ ಅಂಚೆ ಕಚೇರಿಗಳಿಗೂ ಆರ್‌ಐಸಿಟಿ ಯಂತ್ರ ನೀಡಲಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಚಿಂತಿ‌ಸಲಾಗಿತ್ತು. ಈ ಯಂತ್ರದ ಮೂಲಕ ಗ್ರಾಹಕರ ಹಾಗೂ ಅಂಚೆ ಕಚೇರಿ ನಡುವಿನ ವ್ಯವಹಾರಕ್ಕೆ ಸುಲಭವಾಗುತ್ತಿತ್ತು. ಅಂಚೆ ಕಚೇರಿಯಲ್ಲಿನ ಮನಿಯಾರ್ಡರ್‌, ರಿಜಿಸ್ಟರ್‌ ಪೋಸ್ಟ್‌, ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ ಸೇವೆಯನ್ನು ಗ್ರಾಹಕರಿಗೆ ಸೂಕ್ತ ಸಮಯದಲ್ಲಿ ನೀಡಲಾಗುತ್ತಿಲ್ಲ. ಪ್ರತಿ ನಿತ್ಯ ಅಂಚೆ ಕಚೇರಿಗೆ ಪೋಸ್ಟ್‌ಬ್ಯಾಗ್‌ ಬಂದಾಗಲೂ ಈ ಯಂತ್ರದ ಮೂಲಕವೇ ಕಾರ್ಯ ನಿರ್ವಹಿಸಬೇಕು, ಆದರೆ ಕೆಲವು ದಿನ ಅಂಚೆ ಕಚೇರಿಯ ಕೆಲಸದ ಸಮಯದ ನಂತರವೇ ಇಂಟರ್‌ನೆಟ್ ಕಾರ್ಯ ನಿರ್ವಹಿಸುತ್ತದೆ. ಅಲ್ಲಿಯ ತನಕ ಗ್ರಾಹಕರು ಕಾಯುವಂತಾಗಿದೆ. ಗ್ರಾಮೀಣ ಪ್ರದೇಶದ ಮುಗ್ಧ ಜನಸಾಮಾನ್ಯರಿಗೆ ಈ ಯಂತ್ರದ ಸಮಸ್ಯೆ ವಿವರಿಸಿದರೆ ಅರ್ಥವಾಗುತ್ತಿಲ್ಲ. ಕಾದು-ಕಾದು ಸುಸ್ತದ ಗ್ರಾಹಕರು ಶಾಪ ಹಾಕಿ ವಾಪಸಾಗುತ್ತಿದ್ದಾರೆ.

ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲದ ಸಮಸ್ಯೆಯಿಂದ ಯಂತ್ರವು ಕಾರ್ಯ ನಿರ್ವಹಿಸುತ್ತಿಲ್ಲ. ಈ ಯಂತ್ರದ ಸರ್ವರ್‌ ಸಮಸ್ಯೆಯಿಂದ ಪೋಸ್ಟ್‌ ಮಾಸ್ಟರ್‌ಗಳು ಸೂಕ್ತ ಕೆಲಸವಾಗದೆ ಗೊಂದಲಕ್ಕೀಡಾಗಿದ್ದಾರೆ. ಕೆಲವೆಡೆ ಗ್ರಾಮೀಣ ಪ್ರದೇಶದಲ್ಲಿ ಪೋಸ್ಟ್‌ ಮಾಸ್ಟರ್‌ಗಳು ಯಂತ್ರವನ್ನು ಹಿಡಿದುಕೊಂಡು ಇಂಟರ್‌ನೆಟ್‌ನ ನೆಟ್ವರ್ಕ್‌ಗಾಗಿ ಗುಡ್ಡಬೆಟ್ಟ ಹತ್ತುವಂತಾಗಿದೆ.

ಈಗಾಗಲೇ ಮಲೆನಾಡು ಪ್ರದೇಶದಲ್ಲಿ ಬಿಎಸ್‌ಎನ್‌ಎಲ್ ದೂರಸಂಪರ್ಕ ಸೂಕ್ತವಾಗಿ ಕಾರ್ಯ ನಿರ್ವಹಿಸದೆ ಜನರ ಆಕ್ರೋಶಕ್ಕೆ ಒಳಗಾಗಿದೆ. ಮತ್ತೆ ಈಗ ಅಂಚೆ ಕಚೇರಿಯ ಈ ಯಂತ್ರದ ಸಮಸ್ಯೆ ಗ್ರಾಹಕರಿಗೆ ಕಾಡುವಂತಾಗಿದೆ. ಈಗಾಗಲೆ ಅಂಚೆ ಇಲಾಖೆ ನೌಕರರ ಸಂಘದವರು (ಎಐಜಿಡಿಯು) ಕೇಂದ್ರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಇನ್ನಾದರೂ ಕೇಂದ್ರ ಸರ್ಕಾರದ ಈ ಅಂಗ ಸಂಸ್ಥೆಯಾದ ಅಂಚೆ ಕಚೇರಿಯ ಯಂತ್ರದ ಸಮಸ್ಯೆಯನ್ನು ಇಲಾಖೆ ಗಮನಹರಿಸುವಂತಾಗಲಿ ಎಂಬುದು ಸಾರ್ವಜನಿಕರ ಆಶಯ.

Advertisement

ಮಲೆನಾಡು ಪ್ರದೇಶಗಳಲ್ಲಿನ ಅಂಚೆ ಕಚೇರಿಯ ಯಂತ್ರಗಳ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಇದೊಂದು ದೇಶವ್ಯಾಪಿ ಯೋಜನೆಯಾಗಿದ್ದು ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್ ಸಮಸ್ಯೆ ಇರುವುದರಿಂದ ಈ ಸಮಸ್ಯೆ ಉಲ್ಬಣಗೊಂಡಿದೆ.
ನವೀನ್‌ ಚಂದನ್‌,
ಶಿವಮೊಗ್ಗ ಮುಖ್ಯ ಅಂಚೆ ಕಚೇರಿಯ ಸೂಪರಿಡೆಂಟ್

ಅಂಚೆ ಇಲಾಖೆಯ ಈ ಯಂತ್ರದ ಸಮಸ್ಯೆ ಏನು ನಮಗೆ ಗೊತ್ತಿಲ್ಲ, ಅಂಚೆ ಕಚೇರಿಗೆ ಬಂದಾಗಲೆಲ್ಲ ಮಿಷನ್‌ ಸರಿಯಿಲ್ಲ ಅಂತಾರೆ. ಬೆಂಗಳೂರಿನಲ್ಲಿರುವ ಮಗ ಕಳಿಸುವ ತಿಂಗಳ ಹಣಕ್ಕೆ ಪ್ರತಿ ತಿಂಗಳು ಅಂಚೆ ಕಚೇರಿಗೆ 3-4 ಸಲ ಬರಬೇಕಾಗಿದೆ. ನನ್ನ ಸಮಸ್ಯೆ ಯಾರ ಹತ್ತಿರ ಹೇಳಿಕೊಳ್ಳಲಿ.
ಕೃಷ್ಣಪ್ಪ, ಗ್ರಾಮೀಣ ಪ್ರದೇಶದ ಗ್ರಾಹಕ

Advertisement

Udayavani is now on Telegram. Click here to join our channel and stay updated with the latest news.

Next