Advertisement

ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಆಗ್ರಹ

11:54 AM Aug 17, 2019 | Team Udayavani |

ತೀರ್ಥಹಳ್ಳಿ: ತಾಲೂಕಿನಲ್ಲಿ ಸಂಭವಿಸಿದ ಭಾರೀ ಗಾಳಿ- ಮಳೆಗೆ ಗುಡ್ಡ ಜರಿದು ಅನಾಹುತ ಸಂಭವಿಸಿದ ಮಂಡಗದ್ದೆ ಸಮೀಪದ ಹೆಗಲತ್ತಿ ಗ್ರಾಮ ಹಾಗೂ ಕನ್ನಂಗಿ ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ನಿಯೋಗ ತೆರಳಿ ಪ್ರದೇಶಗಳ ಪರಿಶೀಲನೆ ನಡೆಸಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು.

Advertisement

ಹೆಗಲತ್ತಿಯ ಮಲೆಮಹಾದೇಶ್ವರ ಗುಡ್ಡ ಕುಸಿತದಿಂದ 30ಕ್ಕೂ ಹೆಚ್ಚು ಕುಟುಂಬಗಳ ಗದ್ದೆ ಹಾಗೂ ಅಡಕೆ ತೋಟಗಳು ಸರ್ವನಾಶವಾಗಿವೆ. ಇಲ್ಲಿನ ಕುಟುಂಬಗಳು ಸಂಕಷ್ಟದ ಸ್ಥಿತಿಯಲ್ಲಿವೆ. ಆದರೆ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ನಷ್ಟದ ಸುಳಿಯಲ್ಲಿ ಸಿಲುಕಿರುವ ರೈತರ ಬದುಕಿಗೆ ಭರವಸೆ ಕೊಡುವ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದು ಕಿಮ್ಮನೆ ರತ್ನಾಕರ್‌ ಆರೋಪಿಸಿದರು.

ಹೆಗಲತ್ತಿ ಪ್ರದೇಶಕ್ಕೆ ಮುಖ್ಯಮಂತ್ರಿಗಳು ಕೇವಲ ಭೇಟಿ ನೀಡಿ, ಅಲ್ಲಿನ ಸಂತ್ರಸ್ತರ ಸಂಪೂರ್ಣ ಸಮಸ್ಯೆ ಆಲಿಸದೆ ರಾಜಕೀಯ ಭೇಟಿಯಂತೆ ವರ್ತಿಸಿದ್ದಾರೆ. ಮುಖ್ಯಮಂತ್ರಿಗಳು ಒಬ್ಬರೆ ಚಕ್ರಾಧಿಪತಿಯಾಗಿದ್ದು ತಮ್ಮ ಭೇಟಿ ಸ್ಥಳದಲ್ಲಿ ಸಂತ್ರಸ್ತರ ಅಳಲನ್ನು ಕೇಳದೆ ಹೋಗಿದ್ದಾರೆ. ಹೆಗಲತ್ತಿ ಭಾಗದ ರೈತರ ಆದಾಯದ ಮೂಲವೇ ನಾಶವಾಗಿದೆ. ಇವರನ್ನು ಮೂಲಸ್ಥಿತಿಗೆ ತರಲು ಸರ್ಕಾರ ಮಾತ್ರ ಪ್ರಯತ್ನಿಸಬೇಕು. ಕೂಡಲೇ ಮುಖ್ಯಮಂತ್ರಿಗಳು ಹೆಗಲತ್ತಿ ಗ್ರಾಮದ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಹೆಗಲತ್ತಿ ಭಾಗದಲ್ಲಿ ನೆರೆಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಗೊಂಡಿದೆ. ಕೊಳವೆ ಬಾವಿಗಳು ನಾಶಗೊಂಡಿವೆ. ಕನ್ನಂಗಿ ಗ್ರಾಮದಲ್ಲಿ ಜಾನುವಾರುಗಳನ್ನು ಕಳೆದುಕೊಂಡವರಿಗೆ ಮಾತ್ರ ಮುಖ್ಯಮಂತ್ರಿ ಪರಿಹಾರದ ಚೆಕ್‌ ನೀಡಿ ಹೆಗಲತ್ತಿ ಗ್ರಾಮಸ್ಥರಿಗೆ ಯಾವ ನೆರವನ್ನು ಸ್ಥಳದಲ್ಲೇ ನೀಡದೆ ಇರುವುದರಿಂದ ಗ್ರಾಮಸ್ಥರಲ್ಲಿ ಅಸಮಾಧಾನ ಉಂಟಾಗಿದೆ ಎಂದರು.

ಮಲೆನಾಡು ಭಾಗದ ಹಾನಿಗೊಳಗಾದ ಪ್ರದೇಶದ ರೈತ ಕುಟುಂಬಗಳಿಗೆ ನ್ಯಾಯ ಸಿಗಬೇಕಾದರೆ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಭಾಗದ ಜನರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು. ಕನ್ನಂಗಿ ಸುತ್ತಲಿನ ಹಲವು ಸೇತುವೆಗಳು, ರಸ್ತೆಗಳು, ಮನೆಗಳು ದುಸ್ಥಿತಿ ತಲುಪಿದ್ದು. ಸಂಬಂಧಪಟ್ಟ ಇಲಾಖೆ ಸಮಗ್ರ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ನೀಡುವ ಕೆಲಸ ಶೀಘ್ರ ಮಾಡಬೇಕೆಂದು ಒತ್ತಾಯಸಿದರು.

Advertisement

ವಿಧಾನ ಪರಿಷತ್‌ ಸದಸ್ಯ ಪ್ರಸನ್ನಕುಮಾರ್‌ ಮಾತನಾಡಿ, ರಾಜ್ಯ ಸರ್ಕಾರ ಇಲ್ಲಿನ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕಾಗಿದೆ. ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕೃಷಿ ಬದುಕೊಂದಿಗೆ ಜೀವನ ನಡೆಸುತ್ತಿರುವ ಈ ಭಾಗದ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರ ಸಮರ್ಪಕ ಪರಿಹಾರ ನೀಡಬೇಕೆಂದರು.

ನಿಯೋಗದಲ್ಲಿ ಜಿಪಂ ಉಪಾಧ್ಯಕ್ಷೆ ವೇದಾ ವಿಜಯ್‌ ಕುಮಾರ್‌, ಜಿಪಂ ಸದಸ್ಯರಾದ ಕಲ್ಗೋಡು ರತ್ನಾಕರ್‌, ಭಾರತೀ ಪ್ರಭಾಕರ್‌, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಮುಡುಬ ರಾಘವೇಂದ್ರ, ಗ್ರಾ.ಪಂ ಸದಸ್ಯ ಮಹೇಶಗೌಡ, ಮುಖಂಡರಾದ ಬಾಳೇಹಳ್ಳಿ ಪ್ರಭಾಕರ್‌, ರಮೇಶ್‌ ಶೆಟ್ಟಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next