Advertisement

29 ವರ್ಷದಿಂದ ನಿರಂತರ ಯೋಗಾಸನ ಕಲಿಕೆ!

10:48 AM Jun 21, 2019 | Team Udayavani |

ತೀರ್ಥಹಳ್ಳಿ: ಯೋಗ ದಿನಾಚರಣೆ ವರ್ಷಕ್ಕೆ 1 ದಿನ ಮಾತ್ರ ಸೀಮಿತವಲ್ಲ. ನಿರಂತರವಾಗಿ ನಡೆಯುವಂತದ್ದು. ಯೋಗಾಸನ , ಪ್ರಾಣಾಯಾಮ ಎಂಬುದು ಕೇವಲ ಶರೀರದ ಸದೃಢತೆಗೆ ಮಾತ್ರ ಮುಖ್ಯವಲ್ಲ, ಮನುಷ್ಯನ ಮನಸ್ಸಿನ ಆರೋಗ್ಯಕ್ಕೆ ನೀಡುವ ಸ್ವಯಂ ಚಿಕಿತ್ಸೆ ಎಂಬ ಘೋಷ ವಾಕ್ಯದೊಂದಿಗೆ ಕಳೆದ 29 ವರ್ಷಗಳಿಂದ ಮಲೆನಾಡಿನ ಯೋಗಾಸನ ಪ್ರಿಯರಿಗೆ ತಮ್ಮ ಸಂಸ್ಥೆಯ ಮೂಲಕ ಯೋಗಾಸನದ ಬಗ್ಗೆ ಜಾಗೃತಿ ಮೂಡಿಸಿ ಯೋಗಾಸನ ಕಲಿಸುತ್ತಿರುವ ತೀರ್ಥಹಳ್ಳಿಯ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್‌ ಸಂಸ್ಥೆಯು ಸಾಧನೆಯ ಹಾದಿಯಲ್ಲಿ ಯಶಸ್ಸು ಗಳಿಸಿದೆ. ಕಳೆದ 29 ವರ್ಷಗಳಿಂದ ನಿರಂತರವಾಗಿ 1 ದಿನವೂ ರಜೆಯಿಲ್ಲದೆ ಈ ಸಂಸ್ಥೆಯು ಯೋಗಾಸನ ಕಲಿಸುತ್ತಿರುವುದು ರಾಜ್ಯದ ಮಟ್ಟಿಗೆ ಒಂದು ದಾಖಲೆಯಾಗಿದೆ.

Advertisement

1990 ರಲ್ಲಿ ತೀರ್ಥಹಳ್ಳಿಯ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್‌ ಸಂಸ್ಥೆಯು ಆರಂಭಗೊಂಡಿದ್ದು. ಆರಂಭದಲ್ಲಿ ಈ ಸಂಸ್ಥಯ ಅಧ್ಯಕ್ಷರಾಗಿ ಶ್ರೀನಿವಾಸಮೂರ್ತಿ ಯು.ಆರ್‌. ಜವಾಬ್ದಾರಿ ವಹಿಸಿಕೊಂಡು 8-10 ಮಂದಿಗೆ ಯೋಗಾಸನ ಹಾಗೂ ಪ್ರಾಣಾಯಾಮ ಕಲಿಸುತ್ತ ಬಂದರು. ಆ ಸಂದರ್ಭದಲ್ಲಿ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ಕಲ್ಯಾಣ ಮಂಟಪ ಹಾಗೂ ರಥಬೀದಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಸ್ಥೆಯ ಮುಖಾಂತರ ಯೋಗಾಸನಗಳನ್ನು ಕಲಿಸುತ್ತ ಬಂದರು. ನಂತರದ ದಿನಗಳಲ್ಲಿ ಮಲೆನಾಡಿನ ಹಲವು ಜನರಿಗೆ ಯೋಗದ ಬಗ್ಗೆ ಜಾಗೃತಿ ಮೂಡಿಬರುವಂತಾಯಿತು.

ಕಳೆದ 15 ವರ್ಷಗಳಿಂದ ಪಟ್ಟಣದ ಮಿಲಕೇರಿ -ಭೂತರಾಯನಕಟ್ಟೆ ಸಮೀಪದ ಆರ್‌ಎಸ್‌ಎಸ್‌ನವರ ಪ್ರೇರಣ ಕಟ್ಟಡದಲ್ಲಿ ಸಾಧನಾ ಎಂಬ ಹೆಸರಿನೊಂದಿಗೆ ತೀರ್ಥಹಳ್ಳಿಯ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್‌ ಸಂಸ್ಥೆಯು ನಿರಂತರವಾಗಿ ನಡೆದು ಬಂದಿದೆ. ಪ್ರತಿನಿತ್ಯ ಮುಂಜಾನೆ ಪುರುಷರು ಮತ್ತು ಮಹಿಳೆಯರು, ಸಂಜೆ ಮಹಿಳೆಯರು ಯೋಗಾಸನ ಕಲಿಯಲು ಆಗಮಿಸುತ್ತಿದ್ದಾರೆ. ಜೊತೆಗೆ ಪಟ್ಟಣದ ಸೊಪ್ಪುಗುಡ್ಡೆಯ ಸೇವಾ ಭಾರತಿ ಶಾಲೆ ಹಾಗೂ ಬಾಳೇಬೈಲಿನ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಲ್ಲಿ ಶಾಖೆಯನ್ನು ಹೊಂದಿದೆ. ವರ್ಷಕ್ಕೆ ಈ ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಮಂದಿ ಯೋಗಾಸನ ಕಲಿಯುತ್ತಿದ್ದಾರೆ.

ಈ ಸಂಸ್ಥೆಯವರು ಪ್ರತಿ ವರ್ಷವು ಹೊರ ಊರಿನ ಪ್ರಸಿದ್ಧ ಯೋಗಗುರುಗಳನ್ನು ಕರೆಸಿ ತರಬೇತಿ ನೀಡುತ್ತಿದ್ದಾರೆ. ಈ ಸಂಸ್ಥೆಯ ಬಗ್ಗೆ ರಾಜ್ಯದಲ್ಲಿ ಒಳ್ಳೆಯ ಹೆಸರಿದೆ. ರಾಜ್ಯದ ಪ್ರಸಿದ್ಧ ಯೋಗ ತರಬೇತುದಾರರಾದ ಬೆಂಗಳೂರಿನ ರಾಘವೇಂದ್ರ ಶೆಣೈ, ಆರ್‌.ಆರ್‌. ರಾಮಸ್ವಾಮಿ, ಪುತ್ತೂರಿನ ಕರುಣಾಕರ್‌, ವನಿತಕ್ಕ ತರಬೇತಿ ನೀಡಿರುವುದು ಸಂಸ್ಥೆಯ ಬೆಳವಣಿಗೆಗೆ ಹೆಚ್ಚು ಶಕ್ತಿ ಬಂದಿದೆ.

ಸಂಸ್ಥೆಯ ವಿಶೇಷ ಕಾರ್ಯಕ್ರಮ: ಪ್ರತಿ ವರ್ಷ ಸಂಸ್ಥೆಯ ವತಿಯಿಂದ ರಥಸಪ್ತಮಿಯಂದು ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮವು ಬೆಳಗ್ಗೆಯಿಂದ ಸಂಜೆವರೆಗೂ ನಡೆಸುತ್ತ ಬಂದಿದೆ. ಸಂಜೆ ಸೂರ್ಯ ಮಂಡಲ ಪೂಜೆ ಆಯೋಜಿಸುತ್ತದೆ. ದೇಶದಲ್ಲಿ ಯಾವುದೇ ಯೋಗಕ್ಕೆ ಸಂಬಂಧ ಪಟ್ಟ ಸಂಸ್ಥೆಯೊಂದು ಇಂತಹದೊಂದು ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬಂದಿಲ್ಲ ಎಂಬುದು ಹಿರಿಯರ ಮಾತಾಗಿದೆ. ಇದಲ್ಲದೇ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಯವರ ಮಧ್ಯವರ್ಜನ ಶಿಬಿರದಲ್ಲಿ , ಕಳೆದ 3 ವರ್ಷಗಳಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

Advertisement

ಸಂಸ್ಥೆಯ ಯಶಸ್ಸಿಗೆ ಪ್ರಸ್ತುತ ಗೌರವಾಧ್ಯಕ್ಷರಾಗಿ ಡಾ| ಜೀವಂದರ ಜೈನ್‌, ಅಧ್ಯಕ್ಷರಾಗಿ ಎಚ್.ಎಂ. ಕೃಷ್ಣಮೂರ್ತಿ, ಉಪಾಧ್ಯಕ್ಷರಾಗಿ ಸತೀಶ್‌ ಜಿ.ಎ., ಕಾರ್ಯದರ್ಶಿಯಾಗಿ ನೀಲೇಶ್‌ ಜವಳಿ, ಸಹ ಕಾರ್ಯದರ್ಶಿಯಾಗಿ ಭಾಗ್ಯ ಐತಾಳ್‌, ಕೋಶಾಧಿಕಾರಿಯಾಗಿ ನಾಗರಾಜ್‌ ಪೈ, ಜೊತೆಗೆ ಸಮಿತಿಯ ಸದಸ್ಯರು ಶ್ರಮ ವಹಿಸಿ ಸಂಸ್ಥೆಯ ಅಭ್ಯೋಧಯಕ್ಕೆ ಹಗಲಿರುಳು ಆಸಕ್ತಿ ವಹಿಸಿ ಬೆಂಬಲಿಸುತ್ತ ಮಲೆನಾಡಿಗರಲ್ಲಿ ಯೋಗಾಸನ ಮತ್ತು ಪ್ರಾಣಾಯಾಮದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next