ರಾಯಚೂರು: ಕಳೆದ ಕೆಲ ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಕೆರೆ ಪುನರುಜ್ಜೀವನಗೊಳಿಸಿ ಸಾಕಷ್ಟು ಸದ್ದು ಮಾಡಿದ್ದ ಯಶೋಮಾರ್ಗ ತಂಡ ಈಗ ರಾಯಚೂರು ಜಿಲ್ಲೆಯಲ್ಲಿ ಬರಪೀಡಿತ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಮೂಲಕ ಗಮನ ಸೆಳೆದಿದೆ.
ನಟ ಯಶ್ ಸ್ಥಾಪಿಸಿದ ಯಶೋಮಾರ್ಗ ಅನೇಕ ಸಮಾಜಪರ ಕಾರ್ಯಗಳಿಂದ ಸದ್ದು ಮಾಡುತ್ತಿದ್ದು, ಈಗ ಜಿಲ್ಲೆಯಲ್ಲಿ ಬುಧವಾರದಿಂದ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸುತ್ತಿದೆ. ಅಖೀಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ಸದಸ್ಯರೇ ಈ ಕೈಂಕರ್ಯದ ನೇತೃತ್ವ ವಹಿಸಿದ್ದು, ಬುಧವಾರ ಮೂರು ಹಳ್ಳಿಗಳಿಗೆ ಎರಡು ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಿದ್ದಾರೆ.
ಆರಂಭದಲ್ಲಿ 10 ದಿನಗಳ ಮಟ್ಟಿಗೆ ನೀರು ಪೂರೈಸುವ ಯೋಜನೆ ಹಾಕಿಕೊಂಡಿರುವ ಸದಸ್ಯರು, ಅಗತ್ಯ ಬಿದ್ದಲ್ಲಿ ಸೇವೆ ವಿಸ್ತರಿಸುವ ಉದ್ದೇಶ ಹೊಂದಿದ್ದಾರೆ. ಬುಧವಾರ ರಾಯಚೂರು ತಾಲೂಕಿನ ಬಿಜನಗೇರಾ, ಬೋಳಮಾನದೊಡ್ಡಿ, ಬಾಯಿದೊಡ್ಡಿ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗಿದೆ. ಗುರುವಾರ ವಡವಟ್ಟಿ ಕುರುದೊಡ್ಡಿ ಸೇರಿ ತೀರ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಈ ಕುರಿತು ಅಭಿಮಾನಿಗಳಿಗೆ ಯಶೋಮಾರ್ಗದಿಂದ ಸೂಚನೆ ಬಂದಿದೆ. ಹೀಗಾಗಿ ಕಳೆದ 10 ದಿನಗಳಿಂದ ತೀರ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ಅಲ್ಲಿಗೆ ನೀರು ಪೂರೈಸುವ ಯೋಜನೆ ರೂಪಿಸಲಾಗಿದೆ. ಸದ್ಯಕ್ಕೆ ಅಭಿಮಾನಿಗಳೇ ಎಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿದ್ದಾರೆ.
ಉತ್ತಮ ಸ್ಪಂದನೆ: ಕೆಲ ಹಳ್ಳಿಗಳಲ್ಲಿ ಜಿಲ್ಲಾಡಳಿತ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಪೂರೈಸುತ್ತಿದೆ. ಅಂಥ ಕಡೆ ಜನ ಗಂಟೆಗಟ್ಟಲೇ ಕಾದು ಕೂಡಬೇಕಿದೆ. ಯಶೋಮಾರ್ಗದ ಟ್ಯಾಂಕರ್‌ಗಳು ಹಳ್ಳಿಗಳಿಗೆ ತಲುಪುತ್ತಿ ದ್ದಂತೆ ಜನ ನಾ ಮುಂದು, ನೀ ಮುಂದು ಎಂಬಂತೆ ನೀರು ತುಂಬಿಕೊಳ್ಳುತ್ತಿದ್ದಾರೆ. ಸಾಲುಗಟ್ಟಿ ನೀರು ಸಂಗ್ರಹಿಸುತ್ತಿದ್ದಾರೆ. ಅಲ್ಲದೇ, ಯಶೋಮಾರ್ಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.