ನವದೆಹಲಿ: ಮಾರಣಾಂತಿಕ ಕೋವಿಡ್ 19 ಸೋಂಕಿನ ವಿರುದ್ಧ ಭಾರತ ಹೋರಾಟ ನಡೆಸುತ್ತಿರುವ ನಡುವೆಯೇ ರಾಜಸ್ಥಾನದ ಎರಡು ಜಿಲ್ಲೆಗಳಲ್ಲಿ ಸುಮಾರು 600ಮಕ್ಕಳಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೋವಿಡ್ ಲಸಿಕೆಯಲ್ಲಿ ಅಕ್ರಮ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ: ಬೊಮ್ಮಾಯಿ
ರಾಜಸ್ಥಾನದ ಡುಂಗಾರ್ಪುರದಲ್ಲಿ ಕಳೆದ ಕೆಲವು ದಿನಗಳಲ್ಲಿ 325 ಮಕ್ಕಳನ್ನು ಪರೀಕ್ಷಿಸಿದಾಗ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅಲ್ಲದೇ ರಾಜ್ಯದ ದೌಸಾ ಜಿಲ್ಲೆಯಲ್ಲಿಯೂ ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜಸ್ಥಾನದ ಎರಡು ಜಿಲ್ಲೆಯಲ್ಲಿ 600ಕ್ಕೂ ಅಧಿಕ ಮಕ್ಕಳಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಭಾರತದಲ್ಲಿ ಕೋವಿಡ್ 3ನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಮಕ್ಕಳ ಹಕ್ಕುಗಳ ಸಂರಕ್ಷಣಾ ರಾಷ್ಟ್ರೀಯ ಆಯೋಗ (ಎನ್ ಸಿಪಿಸಿಆರ್) ಇತ್ತೀಚೆಗೆ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ನವಜಾತ ಶಿಶುಗಳನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತು ಸಿದ್ಧತೆಯನ್ನು ಹೆಚ್ಚಿಸಬೇಕಾಗಿದೆ ಎಂದು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರಿಗೆ ಬರೆದ ಪತ್ರದಲ್ಲಿ, ದೇಶದಲ್ಲಿ ಹರಡುತ್ತಿರುವ ಕೋವಿಡ್ ಎರಡನೇ ಅಲೆಯು ಯುವ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಿತ್ತು. ಇದೀಗ ಮೂರನೇ ಅಲೆಗೆ ಸಾಕ್ಷಿಯಾಗಲಿರುವ ಭಾರತದಲ್ಲಿ ಇದು ಮಕ್ಕಳ ಮೇಲೂ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.
ಮಕ್ಕಳು ಮತ್ತು ನವಜಾತ ಶಿಶುಗಳ ಮೇಲೆ ಕೋವಿಡ್ 19 ಮೂರನೇ ಅಲೆ ಹೆಚ್ಚು ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಮುಖ್ಯವಾಗಿ ಆರೋಗ್ಯ ಸೇವೆ ಮತ್ತು ಆ್ಯಂಬುಲೆನ್ಸ್ ಗಳ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲು ಆರೋಗ್ಯ ಸಚಿವಾಲಯಕ್ಕೆ ಪತ್ರದಲ್ಲಿ ವಿನಂತಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.